×
Ad

ವೆಸ್ಟ್ ಇಂಡೀಸ್ ಟೆಸ್ಟ್ ಕಾರಣಕ್ಕೆ ಏಷ್ಯಾಕಪ್ ತಪ್ಪಿಸಿಕೊಳ್ಳಲಿರುವ ಗಿಲ್?

Update: 2025-08-06 08:26 IST

PC: x.com/ShubmanGill

ಏಷ್ಯಾ ಕಪ್ ಟೂರ್ನಿಯಲ್ಲಿ ಭಾಗವಹಿಸುವ ಭಾರತೀಯ ತಂಡದ ಆಯ್ಕೆ ಈ ತಿಂಗಳ ಮೂರನೇ ವಾರದಲ್ಲಿ ನಡೆಯಲಿದ್ದು, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಆಯ್ಕೆ ರೇಸ್ ನಲ್ಲಿದ್ದಾರೆ. ಎಡೆಬಿಡದ ವೇಳಾಪಟ್ಟಿಯ ಹಿನ್ನೆಲೆಯಲ್ಲಿ ಜೈಸ್ವಾಲ್ ಮತ್ತು ಟೆಸ್ಟ್ ತಂಡದ ನಾಯಕ ಗಿಲ್ ಅವರನ್ನು ಕಳೆದ ಕೆಲ ಟಿ20 ಪಂದ್ಯಗಳಿಗೆ ಪರಿಗಣಿಸಿರಲಿಲ್ಲ. ಆದರೆ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಗಳ ಸರಣಿಯ ಬಳಿಕ ಒಂದು ತಿಂಗಳ ವಿಶ್ರಾಂತಿ ಪೂರೈಸಿ ಏಷ್ಯಾ ಕಪ್ ಗೆ ಲಭ್ಯರಾಗುತ್ತಾರೆ ಎಂಬ ನಿರೀಕ್ಷೆ ಇತ್ತು.

ಆದರೆ ಸೆಪ್ಟೆಂಬರ್ 28ಕ್ಕೆ ನಿಗದಿಯಾಗಿರುವ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್ ಗೆ ಭಾರತ ಲಗ್ಗೆ ಇಟ್ಟಲ್ಲಿ, ಒಂದು ವಾರದ ಒಳಗಾಗಿ ಆರಂಭವಾಗುವ ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಆಯ್ಕೆಗಾರರು ಆಯ್ಕೆಯ ಸಾಧ್ಯತೆಯನ್ನು ಮುಕ್ತವಾಗಿ ಇರಿಸಿಕೊಂಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ವೆಸ್ಟ್ ಇಂಡೀಸ್ ವಿರುದ್ಧ ಅಕ್ಟೋಬರ್ 2ರಂದು ಅಹ್ಮದಾಬಾದ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಕಳೆದ ಐಪಿಎಲ್ ಸೀಸನ್ನಲ್ಲಿ ಜೈಸ್ವಾಲ್ 160 ಸ್ಟ್ರೈಕ್‌ರೇಟ್‌ನೊಂದಿಗೆ 559 ರನ್ ಮತ್ತು ಗಿಲ್ 155 ಸ್ಟ್ರೈಕ್‌ರೇಟ್‌ನೊಂದಿಗೆ 15 ಪಂದ್ಯಗಳಿಂದ 650 ರನ್ ಕಲೆಹಾಕಿದ್ದರು. ಗಿಲ್ ಅವರ ಆರಂಭಿಕ ಪಾಲುದಾರ ಸಾಯಿ ಸುದರ್ಶನ್ 156 ಸ್ಟ್ರೈಕ್‌ರೇಟ್‌ನೊಂದಿಗೆ 759 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದರು.

"ಐದು ವಾರಗಳ ವಿಶ್ರಾಂತಿ ವೇಳೆ ಯಾವುದೇ ಕ್ರಿಕೆಟ್ ಇಲ್ಲ; ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರ ಅದ್ಭುತ ಪ್ರದರ್ಶನ ಹೊರತಾಗಿಯೂ ಈ ಮೂವರು ಯಾವುದೇ ಟಿ20 ತಂಡಕ್ಕೆ ಸೇರಬಹುದು. 21 ದಿನಗಳ ಏಷ್ಯಾಕಪ್ ನಲ್ಲಿ, ಫೈನಲ್ ವರೆಗೆ ಅಂದರೆ ಆರು ಟಿ20 ಪಂದ್ಯಗಳನ್ನು ಆಡಿದರೆ ಒತ್ತಡ ಹೆಚ್ಚುತ್ತದೆ. ಆದರೆ ಏಷ್ಯಾ ಕಪ್ ಗೆ 17 ಮಂದಿಯ ತಂಡಕ್ಕೆ ಅವಕಾಶವಿದ್ದು, ಆಯ್ಕೆದಾರರು ಜಾಗರೂಕತೆಯಿಂದ ಆಯ್ಕೆ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದಾರೆ" ಎಂದು ಬಿಸಿಸಿಐ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News