×
Ad

ವಿಂಬಲ್ಡನ್ ಟೆನಿಸ್ ಟೂರ್ನಿಯ 150ನೇ ವಾರ್ಷಿಕೋತ್ಸವ; ಆ್ಯಂಡಿ ಮರ್ರೆ ಪ್ರತಿಮೆ ಅನಾವರಣಕ್ಕೆ ಚಿಂತನೆ

Update: 2025-06-24 22:13 IST

Photo : AFP

ಲಂಡನ್, ಜೂ.24: ಹುಲ್ಲುಹಾಸಿನ ಟೆನಿಸ್ ಪಂದ್ಯಾವಳಿ ವಿಂಬಲ್ಡನ್ ಚಾಂಪಿಯನ್ಶಿಪ್ 2027ರಲ್ಲಿ 150ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದ್ದು, ಈ ವೇಳೆ ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಆ್ಯಂಡಿ ಮರ್ರೆ ಅವರ ಪ್ರತಿಮೆಯನ್ನು ಅನಾವರಣಗೊಳಿಸಲು ಪಂದ್ಯಾವಳಿಯ ಆಯೋಜಕರು ಚಿಂತನೆ ನಡೆಸುತ್ತಿದ್ದಾರೆ. ತಮ್ಮ ಪ್ರತಿಮೆಯನ್ನು ವಿನ್ಯಾಸಗೊಳಿಸಲು ಮರ್ರೆ ಸಹಾಯ ಮಾಡಲಿದ್ದಾರೆ.

2027ರ ಆವೃತ್ತಿಯ ಟೂರ್ನಿಯ ಸಮಯದಲ್ಲಿ ಬ್ರಿಟನ್ನ ಶ್ರೇಷ್ಠ ಆಟಗಾರನ ಪ್ರತಿಮೆಯನ್ನು ಅನಾವರಣಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಸಂಘಟಕರು ಮಂಗಳವಾರ ತಿಳಿಸಿದ್ದಾರೆ.

2013ರಲ್ಲಿ ವಿಂಬಲ್ಡನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿದ್ದ ಮರ್ರೆ 77 ವರ್ಷಗಳ ಬಳಿಕ ಬ್ರಿಟನ್ ದೇಶಕ್ಕೆ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಟ್ಟಿದ್ದರು.

2016ರ ಫೈನಲ್ನಲ್ಲಿ ಮಿಲೊಸ್ ರಾವೊನಿಕ್ರನ್ನು ಮಣಿಸಿದ್ದ ಸ್ಕಾಟ್ಲ್ಯಾಂಡ್ ಆಟಗಾರ ಮರ್ರೆ 2ನೇ ಬಾರಿ ವಿಂಬಲ್ಡನ್ ಪ್ರಶಸ್ತಿ ಜಯಿಸಿದ್ದರು. ಇದು ಅವರು 3ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯಾಗಿತ್ತು.

14 ಫ್ರೆಂಚ್ ಓಪನ್ ಪ್ರಶಸ್ತಿಗಳನ್ನು ಗೆದ್ದಿರುವ ರಫೆಲ್ ನಡಾಲ್ ಅವರನ್ನು ಈ ತಿಂಗಳು ಮರ್ರೆ ಉಪಸ್ಥಿತಿಯಲ್ಲಿ ಪ್ಯಾರಿಸ್ನಲ್ಲಿ ಸನ್ಮಾನಿಸಿದ ರೀತಿಯು ಈ ಪ್ರತಿಮೆ ನಿರ್ಮಾಣದ ಯೋಜನೆಗೆ ಸ್ಫೂರ್ತಿಯಾಗಿದೆ.

‘‘ಪ್ಯಾರಿಸ್ನ ರೋಲ್ಯಾಂಡ್ ಗ್ಯಾರೋಸ್ನಲ್ಲಿ ರಾಫಾ ನಡಾಲ್ ಅವರಿಗೆ ಆ ರೀತಿಯ ಫಲಕವನ್ನು ಅನಾವರಣಗೊಳಿಸಿದ್ದನ್ನು ನಾವು ನೋಡಿದ್ದೇವೆ. ಅದು ತುಂಬಾ ವಿಶೇಷವಾಗಿತ್ತು. ಆಗ ನಾವು ಆ್ಯಂಡಿ ಮರ್ರೆಗೆ ಏನು ಬೇಕು ಎಂದು ಯೋಚಿಸಿದೆವು’’ ಎಂದು ಆಲ್ ಇಂಗ್ಲೆಂಡ್ ಕ್ಲಬ್ ಅಧ್ಯಕ್ಷೆ ಡೆಬ್ಬಿ ಜೆವಾನ್ಸ್ ಹೇಳಿದ್ದಾರೆ.

ಮರ್ರೆಗಿಂತ ಮೊದಲು 1936ರಲ್ಲಿ ಬ್ರಿಟನ್ನ ಪುರುಷರ ಚಾಂಪಿಯನ್ ಆಗಿದ್ದ ಫ್ರೆಡ್ ಪೆರ್ರಿ ಅವರ ಕಂಚಿನ ಪ್ರತಿಮೆಯನ್ನು 1984ರಲ್ಲಿ ಅನಾವರಣಗೊಳಿಸಲಾಗಿತ್ತು.

2025ರ ಆವೃತ್ತಿಯ ವಿಂಬಲ್ಡನ್ ಚಾಂಪಿಯನ್ಶಿಪ್ ಸೋಮವಾರದಿಂದ ಆರಂಭವಾಗಲಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News