2025: ಕ್ರಿಕೆಟ್ ನಿಂದ ಚೆಸ್ ತನಕ ವಿಶ್ವ ಮಟ್ಟದಲ್ಲಿ ಮಿಂಚಿದ ಭಾರತೀಯ ಯುವ ಕ್ರೀಡಾಪಟುಗಳು
ವೈಭವ್ ಸೂರ್ಯವಂಶಿ , ಶೀತಲ್ ದೇವಿ | Photo Credit : ANI
ಹೊಸದಿಲ್ಲಿ, ಡಿ.28: ಅನೇಕ ಯುವ ಭಾರತೀಯ ಕ್ರೀಡಾಪಟುಗಳು 2025ರಲ್ಲಿ ಜಾಗತಿಕ ವೇದಿಕೆಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಹಿರಿಯ ಅತ್ಲೀಟ್ ಗಳು ಕೂಡ ಈ ವರ್ಷ ಮಿಂಚಿದ್ದಾರೆ. ಕ್ರಿಕೆಟ್ ನಿಂದ ಚೆಸ್ ತನಕ ಭಾರತದ ಕಿರಿಯ ಸ್ಟಾರ್ ಗಳು ಭಾರತೀಯ ತ್ರಿವರ್ಣ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. 2025ರಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಭಾರತದ ಯುವ ಕ್ರೀಡಾಳುಗಳ ಸಾಧನೆಯತ್ತ ಒಂದು ನೋಟ..
►ವಿಶ್ವ ಕ್ರಿಕೆಟ್ ನಲ್ಲಿ ಉದಯಿಸಿದ ವೈಭವ್ ಸೂರ್ಯವಂಶಿ
2025ರಲ್ಲಿ ವಿಶ್ವ ಕ್ರಿಕೆಟ್ 14ರ ವಯಸ್ಸಿನ ಪ್ರತಿಭಾವಂತ ಆಟಗಾರ ವೈಭವ್ ಸೂರ್ಯವಂಶಿಯ ಉದಯಕ್ಕೆ ಸಾಕ್ಷಿಯಾಯಿತು. ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಗೌರವಕ್ಕೆ ಪಾತ್ರವಾಗಿರುವ ವೈಭವ್, ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ರಾಜಸ್ಥಾನ ರಾಯಲ್ಸ್‌ನೊಂದಿಗೆ ಗುತ್ತಿಗೆಗೆ ಸಹಿ ಹಾಕಿದ ಕಿರಿಯ ವಯಸ್ಸಿನ ಆಟಗಾರನಾಗಿದ್ದರು. ಗುಜರಾತ್ ಟೈಟಾನ್ಸ್ ವಿರುದ್ಧ 35 ಎಸೆತಗಳಲ್ಲಿ ಐಪಿಎಲ್ ಶತಕ ಗಳಿಸಿದ್ದರು. ಟಿ-20 ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ಕಿರಿಯ ಕ್ರಿಕೆಟಿಗನಾಗಿದ್ದಾರೆ. ಅಂಡರ್-19 ಏಕದಿನ ಕ್ರಿಕೆಟ್ ನಲ್ಲಿ ವೇಗದ ಶತಕ(52 ಎಸೆತ, 143 ರನ್)ಗಳಿಸಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 61 ಎಸೆತಗಳಲ್ಲಿ 108 ರನ್ ಗಳಿಸಿ ಪುರುಷರ ಲಿಸ್ಟ್ ಎ ಕ್ರಿಕೆಟ್ ನಲ್ಲಿ ಶತಕ ಗಳಿಸಿದ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
►ವಿಶ್ವಕಪ್ ಚಾಂಪಿಯನ್ ದಿವ್ಯಾ ದೇಶಮುಖ್
ನಾಗ್ಪುರದ ಚೆಸ್ ತಾರೆ ದಿವ್ಯಾ ದೇಶಮುಖ್ 2025ರ ಫಿಡೆ ಮಹಿಳೆಯರ ವಿಶ್ವಕಪ್ ನಲ್ಲಿ ಯಾರೂ ಊಹಿಸದ ಸಾಧನೆ ಮಾಡಿದರು. ಕೇವಲ 19ನೇ ವಯಸ್ಸಿನಲ್ಲಿ ಜಾರ್ಜಿಯಾದಲ್ಲಿ ನಡೆದಿದ್ದ ಫೈನಲ್ ನಲ್ಲಿ ತಮ್ಮದೇ ದೇಶದ ಹಿರಿಯ ಆಟಗಾರ್ತಿ ಕೊನೆರು ಹಂಪಿ ಅವರನ್ನು ಸೋಲಿಸಿದ್ದರು. ಗ್ರಾಂಡ್‌ಮಾಸ್ಟರ್ ಗೌರವ ಪಡೆದ ಭಾರತದ ನಾಲ್ಕನೇ ಮಹಿಳಾ ಚೆಸ್ ತಾರೆ ಎನಿಸಿಕೊಂಡರು.
►ಸ್ಕ್ವಾಷ್ ನಲ್ಲಿ ಇತಿಹಾಸ ನಿರ್ಮಿಸಿದ ಅನಾಹತ್ ಸಿಂಗ್
17ರ ವಯಸ್ಸಿನ ಅನಾಹತ್ ಸಿಂಗ್ ಸ್ಕ್ವಾಷ್ ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರು. ಇಂಡಿಯನ್ ಓಪನ್ ಹಾಗೂ ಇಂಡಿಯನ್ ಟೂರ್ ಫೈನಲ್ಸ್ ನಲ್ಲಿ ಹಿರಿಯ ಆಟಗಾರ್ತಿ ಜೋಶ್ನಾ ಚಿನ್ನಪ್ಪರನ್ನು ಮೂರು ಬಾರಿ ಸೋಲಿಸಿ ಅಪರೂಪದ ಸಾಧನೆ ಮಾಡಿದರು. ಚೆನ್ನೈನಲ್ಲಿ ಭಾರತೀಯ ತಂಡವು ಮೊದಲ ಬಾರಿ ಸ್ಕ್ವಾಷ್ ವಿಶ್ವಕಪ್ ಪ್ರಶಸ್ತಿ ಗೆಲ್ಲುವಲ್ಲಿ ನೇತೃತ್ವವಹಿಸಿದರು.
► ವರ್ಲ್ಡ್ ಪ್ಯಾರಾ ಆರ್ಚರಿ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಶೀತಲ್ ದೇವಿ
ಗ್ವಾಂಗ್ಜುವಿನಲ್ಲಿ ನಡೆದ ವರ್ಲ್ಡ್ ಪ್ಯಾರಾ ಚಾಂಪಿಯನ್ ಶಿಪ್ ನಲ್ಲಿ ಶೀತಲ್ ದೇವಿ ತನ್ನ ಉನ್ನತ ಸ್ಥಾನ ತಲುಪಿದರು. 18ರ ವಯಸ್ಸಿನ ಎರಡೂ ಕೈಗಳಿಲ್ಲದ ಬಿಲ್ಲುಗಾರ್ತಿ ಶೀತಲ್ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಆರ್ಚರಿ ವಿಭಾಗದಲ್ಲಿ ಚಿನ್ನದ ಪದಕ ಬಾಚಿಕೊಂಡು ಇತಿಹಾಸ ನಿರ್ಮಿಸಿದರು. ಶೀತಲ್ ಚಿನ್ನದ ಪದಕಕ್ಕಾಗಿ ನಡೆದ ಹೋರಾಟದಲ್ಲಿ ತುರ್ಕಿಯಾದ ವಿಶ್ವದ ನಂ.1 ಆಟಗಾರ್ತಿ ಓಝ್ನೂರ್ ಗಿರ್ಡಿ ಅವರನ್ನು 146-143 ಅಂತರದಿಂದ ಮಣಿಸಿದ್ದರು.ವೈಯಕ್ತಿಕ ಚಿನ್ನವಲ್ಲದೆ, ಟೀಮ್ ಈವೆಂಟ್ ನಲ್ಲಿ ಬೆಳ್ಳಿ ಹಾಗೂ ಮಿಕ್ಸೆಡ್ ಟೀಮ್ ಈವೆಂಟ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು.
►ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಗಮನ ಸೆಳೆದ ಸಚಿನ್ ಯಾದವ್
ಟೋಕಿಯೊದಲ್ಲಿ ನಡೆದಿದ್ದ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಎಲ್ಲರ ಕಣ್ಣು ನೀರಜ್ ಚೋಪ್ರಾ ಮೇಲೆ ನೆಟ್ಟಿದ್ದಾಗ 25ರ ವಯಸ್ಸಿನ ಸಚಿನ್ ಯಾದವ್ ಎಲ್ಲರ ಗಮನ ತನ್ನತ್ತ ಸೆಳೆದಿದ್ದರು. 86.27 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದ ಯಾದವ್ ನಾಲ್ಕನೇ ಸ್ಥಾನ ಪಡೆದು ಕೂದಲೆಳೆ ಅಂತರದಿಂದ ಪದಕ ವಂಚಿತರಾಗಿದ್ದರು.
►ಐತಿಹಾಸಿಕ ಚಿನ್ನ ಗೆದ್ದ ಶೂಟಿಂಗ್ ಸ್ಟಾರ್ ಸಾಮ್ರಾಟ್ ರಾಣಾ
ಕೈರೊದಲ್ಲಿ ನಡೆದ 2025ರ ಐಎಸ್‌ಎಸ್‌ಎಫ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಪುರುಷರ 10 ಮೀ. ಏರ್ ಪಿಸ್ತೂಲ್ ನಲ್ಲಿ ಚಿನ್ನದ ಪದಕ ಗೆದ್ದಿರುವ ಶೂಟಿಂಗ್ ಸ್ಟಾರ್ ಸಾಮ್ರಾಟ್ ರಾಣಾ ಇತಿಹಾಸ ನಿರ್ಮಿಸಿದ್ದಾರೆ. ಒಲಿಂಪಿಕ್ಸ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸೀನಿಯರ್ ವೈಯಕ್ತಿಕ ವಿಶ್ವ ಪ್ರಶಸ್ತಿಯನ್ನು ಗೆದ್ದಿರುವ ಭಾರತದ ಮೊದಲ ಶೂಟರ್ ಆಗಿದ್ದಾರೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಭಾರತೀಯ ಶೂಟಿಂಗ್ ನಲ್ಲಿ ಮಿಂಚುವ ಭರವಸೆ ಮೂಡಿಸಿದ್ದಾರೆ.
►ಶೆಫಾಲಿ ವರ್ಮಾ ವೀರೋಚಿತ ಬ್ಯಾಟಿಂಗ್
ಮಹಿಳೆಯರ ಕ್ರಿಕೆಟ್ ಪಾಲಿಗೆ 2025 ಐತಿಹಾಸಿಕ ವರ್ಷವಾಗಿದೆ. ಶೆಫಾಲಿ ವರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ 2025ರ ಮಹಿಳೆಯರ ಏಕದಿನ ವಿಶ್ವಕಪ್ ಫೈನಲ್ ನಲ್ಲಿ 78 ಎಸೆತಗಳಲ್ಲಿ 87 ರನ್ ಗಳಿಸಿದ್ದರು. ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಅರ್ಧಶತಕ ಗಳಿಸಿದ ಕಿರಿಯ ವಯಸ್ಸಿನ ಆಟಗಾರ್ತಿ ಎನಿಸಿಕೊಂಡಿದ್ದರು. ಶೆಫಾಲಿ 'ಪಂದ್ಯಶ್ರೇಷ್ಠ' ಪ್ರಶಸ್ತಿಯನ್ನು ಜಯಿಸಿದ್ದು, ಭಾರತದ ಮಹಿಳಾ ತಂಡವು ಮೊತ್ತ ಮೊದಲ ಬಾರಿ ಸೀನಿಯರ್ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು.
►ರಾಷ್ಟ್ರೀಯ ದಾಖಲೆ ಮುರಿದ ಅನಿಮೇಶ್ ಕುಜೂರ್
ಅತ್ಲೆಟಿಕ್ಸ್ ಟ್ರಾಕ್‌ನಲ್ಲಿ ಹೊಸ ಓಟಗಾರ ಅನಿಮೇಶ್ ಕುಜೂರ್ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಗ್ರೀಸ್ ನಲ್ಲಿ ನಡೆದಿದ್ದ ಡ್ರೊಮಿಯಾ ಇಂಟರ್‌ನ್ಯಾಶನಲ್ ಸ್ಪ್ರಿಂಟ್ ಹಾಗೂ ರಿಲೇಸ್ ಕ್ರೀಡಾಕೂಟದಲ್ಲಿ 10.18 ಸೆಕೆಂಡ್ ನಲ್ಲಿ ಗುರಿ ತಲುಪಿದ ಅನಿಮೇಶ್ 100 ಮೀ. ಓಟದಲ್ಲಿ ದೀರ್ಘಕಾಲದ ರಾಷ್ಟ್ರೀಯ ದಾಖಲೆಯೊಂದನ್ನು ಮುರಿದರು. 200 ಮೀ. ಓಟದಲ್ಲಿ ಹೊಸ ದಾಖಲೆಯನ್ನೂ ನಿರ್ಮಿಸಿದರು. ಚೆನ್ನೈನಲ್ಲಿ ನಡೆದಿದ್ದ ರಾಷ್ಟ್ರೀಯ ಅಂತರ್-ರಾಜ್ಯ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 20.63 ಸೆಕೆಂಡ್ ನಲ್ಲಿ ಗುರಿ ತಲುಪಿದ ಅನಿಮೇಶ್ ವಿಶ್ವ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆದ ಭಾರತದ ಮೊತ್ತ ಮೊದಲ ಓಟಗಾರ ಎನಿಸಿಕೊಂಡಿದ್ದಾರೆ.