×
Ad

ಸತ್ತಂತಿಹರನು...

Update: 2026-02-05 11:00 IST

ತನ್ನ ಕಾಲಕ್ಕೆ, ಕಾಲದ ಸಮಸ್ಯೆಗಳಿಗೆ ಪ್ರತಿಕ್ರಿಯಿಸದವರು ಬದುಕಿದ್ದೂ ನಿರರ್ಥಕ. ಬದುಕುವುದು ಬಾಳುವುದಕ್ಕೆ. ಬರೀ ಉಸಿರಾಡುವುದಕ್ಕೆ, ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ, ಹೆಸರು ಗಳಿಸುವುದಕ್ಕೆ ತನ್ನ ಕಾಲವನ್ನು, ಸಮಾಜವನ್ನು, ದೇಶವನ್ನು, ಜನರನ್ನು ಬಳಸಿಕೊಳ್ಳುವವರು ಸತ್ತವರ ಸಾಲಿಗೆ ಸೇರುತ್ತಾರೆಯೇ ಹೊರತು ಬಾಳಿದವರ ಸಾಲಿಗಲ್ಲ.

ವಸಾಹತುಶಾಹಿಯ ಗುಲಾಮಸ್ಥಿತಿಯಿಂದ ಭಾರತವು ಹೊರಬಂದು ರಾಜಕೀಯ ಸ್ವಾತಂತ್ರ್ಯವನ್ನು ಪಡೆದು ಏಳು ದಶಕಗಳ ಬಳಿಕ ಈಗ ಎಂಟನೇ ದಶಕದ ಹೊಸ್ತಿಲಲ್ಲಿ ಮತ್ತೆ ವಸಾಹತುಶಾಹಿಗೆ ಮರಳುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ನೆಹರೂ ಕಾಲದಲ್ಲಿ ಅಮೆರಿಕ-ಸೋವಿಯೆತ್ ಒಕ್ಕೂಟದ ನಡುವೆ ಅಲಿಪ್ತವೆಂಬ ನೀತಿಯ ಮೂಲಕ ಪಾರಾಗಿ ಬಂದ ಭಾರತವು ಈಗ ಸಿದ್ಧಾಂತರಹಿತ ದಡ್ಡ ರಾಜಕಾರಣದ ಮೂಲಕ ಅಮೆರಿಕ-ರಶ್ಯಗಳ ನಡುವೆ ಅಪ್ಪಚ್ಚಿಯಾಗುವತ್ತ ದಾಪುಗಾಲಿಟ್ಟಿದೆ.

ನೀವು ತಪ್ಪು ಮಾಡುತ್ತಿದ್ದೀರಿ ಎಂದು ಅಮೆರಿಕದ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್‌ಗೆ ಸವಾಲೊಡ್ಡಿದ ಇಂದಿರಾಯುಗದಿಂದ ಐದು ದಶಕಗಳ ನಂತರ ಯಾವುದೇ ದಿಟ್ಟ ಇಲ್ಲವೇ ಬುದ್ಧಿವಂತಿಕೆ ಮುತ್ಸದ್ದಿತನವನ್ನು ತೋರಿಸಲು ಅಶಕ್ತವಾಗಿ ಈಗ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬಾಲಮಡಚಿ ಕುಳಿತರೂ ದೇಶದ ಜನರಿಗೆ ಮಂಕುಬೂದಿಯನ್ನೆರಚಲು ಸಮರ್ಥವಾದ ಈಗಿನ ಒಕ್ಕೂಟ ಸರಕಾರವು ತನ್ನೆಲ್ಲ ದಾರಿಯನ್ನು ಮುಚ್ಚಿಕೊಂಡಂತಿದೆ. ದೇಶದೊಳಗೆ ಮತೀಯ ವ್ಯವಹಾರದ ಬೆಂಕಿಯನ್ನೇ ಬೆಳಕೆಂದು ಬೆಂಬಲಿಗರಿಗೆ ತೋರಿಸಿ ಮಾಧ್ಯಮಗಳ ಮೂಲಕ ತಪ್ಪುಗಳನ್ನು ಸರಿಯೆಂದು ಬಿಂಬಿಸಿ ಸರಕಾರವು ಬೆತ್ತಲೆಯಾದರೂ ತಾನು ಸರ್ವಾಂಗ ಸುಂದರನೆಂಬ ಹಾಗೆ ನಿಂತಿದೆ. ಈಗಷ್ಟೇ ಯುರೋಪಿಯನ್ ಒಕ್ಕೂಟದೊಂದಿಗೆ ಮತ್ತು ಆನಂತರ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದವನ್ನು ಮಾಡಿ ದೇಶಕ್ಕೆ ಭಾರೀ ಅನುಕೂಲವಾಗಿದೆಯೆಂದು ಹೇಳುವ ಮೂಲಕ ಸುಳ್ಳನ್ನು ಅಧಿಕೃತವಾಗಿ ಸ್ಥಾಪಿಸಿಕೊಂಡಿದೆ.

ನೆನಪಿರಬಹುದು: ಈಚೆಗೆ ಅಮೆರಿಕವು ಭಾರೀ ಪ್ರಮಾಣದ ಟಾರಿಫ್‌ನ್ನು ವಿಧಿಸಿದಾಗ ರಶ್ಯದೊಂದಿಗೆ ತೈಲ ಒಪ್ಪಂದವನ್ನು ಮಾಡಿಕೊಂಡು ಅಮೆರಿಕಕ್ಕೆ ಪಾಠಕಲಿಸಿದೆನೆಂದು ಹೇಳಿದ ಭಾರತದ ಅಧಿಕೃತ ನಾಯಕರು ಇದನ್ನು ದೇಶಾದ್ಯಂತ ಪ್ರಚಾರದ ವ್ಯವಸ್ಥೆಯನ್ನು ತನ್ನ ಬೆಂಬಲಿಗ ಭಕ್ತರಿಗೂ ಗೋದಿ ಮಾಧ್ಯಮಕ್ಕೂ ಗುತ್ತಿಗೆ ನೀಡಿತ್ತು. ಅಷ್ಟರಲ್ಲೇ ಈ ಹೊಸ ಒಪ್ಪಂದಗಳು ಬಂದವು. ಈಗ ರಶ್ಯಕ್ಕೆ ಕೈಕೊಟ್ಟು ಅಮೆರಿಕದ ಬಾಗಿಲ ಬಳಿ ನಿಲ್ಲುವ ಸರದಿ ಭಾರತದ್ದು. ಯಾರು ಹಿತವರು ನಿನಗೆ ಈ ಇಬ್ಬರೊಳಗೆ ಎಂದು ಕೇಳಿದರೆ ಅತ್ತ ನೋಡಲು ನಾಚಿಕೆ; ಇತ್ತ ನೋಡಲು ಭಯ. ಇಷ್ಟಕ್ಕೂ ಅಮೆರಿಕದ ಅಧ್ಯಕ್ಷರು ಭಾರತವನ್ನು ಎಷ್ಟು ಬಾರಿ ಅವಮಾನಿಸಿದರೆಂದು ಹೇಳಲು ಸಾಧ್ಯವಿಲ್ಲ. ಭಾರತ-ಪಾಕಿಸ್ತಾನ ಯುದ್ಧವನ್ನು ತಾನು ನಿಲ್ಲಿಸಿದ್ದೇನೆಂದು ಹೇಳುವುದರಿಂದ ಹೊರಟು ಇನ್ನು ಮುಂದೆ ಭಾರತವು ರಶ್ಯದಿಂದ ತೈಲ ಖರೀದಿಯನ್ನು ಕೈಬಿಟ್ಟು ವೆನೆಝುವೆಲದಿಂದ ತೈಲ ಖರೀದಿಸುತ್ತದೆಂದು ಟ್ರಂಪ್ ಹೇಳುವಾಗ ಅದನ್ನು ಧಿಕ್ಕರಿಸಲು ಭಾರತದ ಆದಿಶೇಷನ ಸಹಸ್ರ ನಾಲಗೆಗಳಿಗೂ ಸಾಧ್ಯವಾಗಿಲ್ಲ. ಬದಲಾಗಿ ಈ ಒಪ್ಪಂದಗಳನ್ನು ಬೇಕಾಬಿಟ್ಟಿ ತಿರುಚಿ ಜನರ ಮುಂದಿಡುವ ತಯಾರಿಯಲ್ಲಿ ಮೋದಿ ಸರಕಾರವಿದೆ.

ಅಮೆರಿಕದಿಂದ ವರ್ಷಕ್ಕೆ ಐವತ್ತು ಬಿಲಿಯನ್ ಡಾಲರ್‌ಗೂ ಕಡಿಮೆ ವಹಿವಾಟು ಮಾಡುತ್ತಿರುವ ಭಾರತವು ಈಗ ಒಂದೊಮ್ಮೆಗೇ ಐನೂರು ಬಿಲಿಯನ್ ಡಾಲರಿನ ಮಾತನ್ನು ಹೇಳುತ್ತಿದೆ. ಒಟ್ಟಾರೆ ಭಾರತದ ಆಮದು ಏಳುನೂರು ಬಿಲಿಯನ್ ಡಾಲರ್ ಎಂದು ಅಂದಾಜಿಸಿದ ಹೊತ್ತಿನಲ್ಲಿ ಅಮೆರಿಕದಿಂದಲೇ ಐನೂರು ಬಿಲಿಯನ್ ಡಾಲರ್ ಆಮದು ಹೇಗೆ ಸಾಧ್ಯವೆಂಬ ಸಾಮಾನ್ಯ ಜ್ಞಾನವೂ ಈ ದೇಶದ ಜನರಿಗಿಲ್ಲ. ಹೋಗಲಿ ಯಾವ ಪದಾರ್ಥಗಳನ್ನು ರಫ್ತು-ಆಮದು ಮಾಡಲಿದೆಯೆಂಬುದೂ ಸ್ಪಷ್ಟವಿಲ್ಲ. ಅಮೆರಿಕದಿಂದ ತರಿಸುವ ಸರಕುಗಳಿಗೆ ಭಾರತವು ಶೂನ್ಯ ಶತಾಂಶ ಟಾರಿಫ್‌ನ್ನು ವಿಧಿಸಲಿದೆಯೆಂಬುದನ್ನು ಗಮನಿಸಿದರೆ ಅಮೆರಿಕವು ತೋರಿಸಿದ ರಿಯಾಯಿತಿಯ ಶೇ. 18 ಟಾರಿಫ್ ಕಡಿಮೆಯೇನಲ್ಲ. ಇದಕ್ಕೆ ಯುರೋಪಿಯನ್ ಒಕ್ಕೂಟದ ಒಪ್ಪಂದಕ್ಕೂ ಹೇಗೆ ತಾಳೆಯಾಗುತ್ತದೆಂಬುದರ ವಿವರವೂ ಇಲ್ಲ. ಯಾವತ್ತಿಂದ ಈ ಒಪ್ಪಂದಗಳು ಜಾರಿಯಾಗುತ್ತದೆಂಬ ವಿವರಣೆಯೂ ಇಲ್ಲ. ಹಿಂದೆ ಅಮೆರಿಕವು ಅಲ್ಲಿ ಉಪಯೋಗವಾಗದ ಪಿಎಲ್-480 ಕಳಪೆ ಗೋಧಿಯನ್ನು ಭಾರತಕ್ಕೆ ರಫ್ತು ಮಾಡಿದ ಇತಿಹಾಸವಿದೆ. ಅಧಿಕೃತ ಮಾಹಿತಿಯಂತೆ ಜುಲೈ 2026ರ ಮೊದಲಂತೂ ಈ ಹೊಸ ವ್ಯಾಪಾರವು ಜಾರಿಯಾಗುವುದಿಲ್ಲ. ಆಮೇಲೆ ಯಾವಾಗ ಎಂಬುದು ಈಗ ಖಾತ್ರಿಯಿಲ್ಲ. ಇನ್ನೂ ತಮಾಷೆಯೆಂದರೆ ಈ ಬಗ್ಗೆ ಒಪ್ಪಂದಗಳು ಸಹಿಯಾಗುವ ಮೊದಲೇ ಇವು ಅದ್ದೂರಿಯ ಪ್ರಚಾರಭಾಗ್ಯವನ್ನು ಪಡೆದಿವೆ. ಭಕ್ತಸಂದೋಹವು ಈ ರಫ್ತು-ಆಮದು, ರಿಯಾಯಿತಿಯ ಟಾರಿಫ್ ಇನ್ನೇನು ನಡೆದೇ ಹೋಯಿತೇನೋ ಎಂಬಂತೆ ಜಿಗಿಯುತ್ತಿದ್ದಾರೆ.

ಇವನ್ನೆಲ್ಲ ಗಮನಿಸಿದರೆ ಈ ಎರಡೂ ಒಪ್ಪಂದಗಳು ಅಂತರ್‌ರಾಷ್ಟ್ರೀಯ ಅಗತ್ಯಗಳಾಗಿರದೆ ಸದ್ಯ ದೇಶದ ಕೆಲವು ರಾಜ್ಯಗಳಲ್ಲಿ ನಡೆಯಲಿರುವ (ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಪ್ರತಿಪಕ್ಷಗಳು ಅಧಿಕಾರದಲ್ಲಿವೆಯೆಂಬುದು ಮುಖ್ಯವಾದ ವಿಚಾರ!) ನಡೆಯುವ ಚುನಾವಣೆಗಳಲ್ಲಿ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಹೊರಟ ಹುನ್ನಾರವೋ ಎಂಬ ಗಂಭೀರ ಸಂಶಯವು ಹುಟ್ಟುತ್ತದೆ.

1970ರ ದಶಕದ ತುರ್ತುಸ್ಥಿತಿಯ ಬಳಿಕ ಇದೊಂದು ಎರಡನೆಯ ಸ್ವಾತಂತ್ರ್ಯ ಹೋರಾಟವನ್ನು ಮುಂಗಾಣಿಸುವ ವಾತಾವರಣವನ್ನು ಸೃಷ್ಟಿಸಿದೆ. ಮತೀಯತೆ, ಭ್ರಷ್ಟಾಚಾರದೊಂದಿಗೆ ಇದನ್ನು ಚರ್ಚಿಸುವುದು ಮತ್ತು ಸರಕಾರದ ಸುಳ್ಳಿನ ಗುಳ್ಳೆಯನ್ನು ಒಡೆಯಲು ಎಲ್ಲ ಪ್ರಜ್ಞಾವಂತರೂ ಮಾಡಬೇಕಾದ ಆದ್ಯ ಕರ್ತವ್ಯ. ಇದೇ ದೇಶಸೇವೆ; ಸಮಾಜ ಸೇವೆ; ಜನಸೇವೆ. ಇವಕ್ಕೆ ಪ್ರತ್ಯೇಕವಾದ ಅಭಿದಾನದ ಅಗತ್ಯವಿಲ್ಲ. ಒಂದು ಸಣ್ಣ ಉದಾಹರಣೆಯನ್ನು ನೀಡುವುದಾದರೆ ಅರ್ಥಸಚಿವರ ಪತಿ ಖ್ಯಾತ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್, ಖ್ಯಾತ ಇತಿಹಾಸಕಾರ ರಾಮಚಂದ್ರಗುಹ, ಸಿದ್ಧಾರ್ಥ ವರದರಾಜನ್‌ರಂತಹ ಪತ್ರಕರ್ತರು, ಕನ್ನಡದ ಸಂದರ್ಭದಲ್ಲಿ ಪ್ರಕಾಶ್‌ರಾಜ್, ಶಿವಸುಂದರ್‌ರಂತಹ ಸಾಮಾಜಿಕ ಹೋರಾಟಗಾರರು, ಖ್ಯಾತ ಲೇಖಕಿ ಅರುಂಧತಿರಾಯ್, ಕನ್ನಡದ ದೇವನೂರು, ಎ. ನಾರಾಯಣ, ಸುರೇಶ ಮುಂತಾದ (ಇನ್ನೂ ಕೆಲವು ಹಿರಿಕಿರಿಯ ಹೆಸರುಗಳಿವೆ: ಸ್ಥಳಾವಕಾಶದಿಂದ ಹೆಸರಿಸಿಲ್ಲ.) ಸಾಂಸ್ಕೃತಿಕ ಅಕಾಡಮಿಕ್‌ಗಳು ತಮ್ಮ ವೇಳೆಯನ್ನು ಎಳ್ಳಷ್ಟೂ ವ್ಯರ್ಥಮಾಡದೆ ಮೋದಿ ಸರಕಾರದ ಸುಳ್ಳುಗಳನ್ನು ಜನತೆಯ ಮುಂದೆ ಬಿಚ್ಚಿಡುತ್ತಿದ್ದಾರೆ. ಇದನ್ನು ಮೊದಮೊದಲು ಸರಕಾರದ ಅಂಧಾಭಿಮಾನಿಗಳು ನಂಬದಿರಬಹುದು; ಅಲಕ್ಷಿಸಬಹುದು; ಆದರೆ ನಿಧಾನವಾಗಿ ಜನರು ಈ ಹೋರಾಟದ ಹಾದಿಯನ್ನು ತಿರಸ್ಕರಿಸರು. ಆಗ ಈ ಪ್ರತಿಭಟನೆಯ ಪ್ರವಾಹವು ಸದ್ಯದ ಆಡಳಿತವನ್ನು ಕೊಚ್ಚಿಕೊಂಡುಹೋಗಬಹುದು.

ಆದರೆ ಇದನ್ನು ನಮ್ಮ ಇತರ ಪ್ರವೃತ್ತ-ನಿವೃತ್ತ ಪ್ರಜೆಗಳು ಮಾಡುತ್ತಿದ್ದಾರೆಯೇ? ಖಂಡಿತಾ ಇಲ್ಲ. ಈ ಕುರಿತು ಕೆಲವಂಶಗಳನ್ನು ಉದಾಹರಣೆಗಳೊಂದಿಗೆ ಇಲ್ಲಿ ಗಣನೆಗೆ ತೆಗೆದುಕೊಳ್ಳಬಹುದು:

ವಕೀಲವೃತ್ತಿಯೊಂದಿಗೆ ಸಮಾಜಸೇವೆಯಲ್ಲಿ ಅನೇಕರು ತೊಡಗಿಕೊಂಡಿದ್ದಾರೆ. ಬರವಣಿಗೆ, ಭಾಷಣ, ಚಳವಳಿ, ವಿಚಾರ ಸಂಕಿರಣ ಮುಂತಾದವುಗಳಲ್ಲಿ ಭಾಗಿಯಾಗಲು ತಮ್ಮ ವೃತ್ತಿಯ ಒಂದಷ್ಟು ಸಮಯವನ್ನು ನೀಡುವವರು ಅನೇಕರಿದ್ದಾರೆ. ಒಮ್ಮೊಮ್ಮೆ ಅನಿವಾರ್ಯವಾಗಿ ನಿಗದಿಯಾದ ಪ್ರಕರಣಗಳ ನಿರ್ವಹಣೆಯನ್ನು ಮುಂದೂಡುವುದೂ ಇದೆ. ಇಂಥ ಸಂದರ್ಭಗಳಲ್ಲಿ ಸಹಜವಾಗಿಯೇ ಕಕ್ಷಿದಾರರಿಗೂ ನ್ಯಾಯಾಧೀಶರಿಗೂ ತಮ್ಮ ಕೆಲಸಕ್ಕೆ ಅಡ್ಡಿ ಅಥವಾ ತೊಡಕುಂಟಾಯಿತೆಂಬ ಕಸಿವಿಸಿಯಾಗುತ್ತದೆ. ಸ್ವಲ್ಪ ಉದಾರಿಗಳಾದವರು ‘ಆಗಲಿ, ಮುಂದಿನ ದಿನ ಇದನ್ನು ಮಾಡಿದರಾಯಿತು’ ಎಂದು ನ್ಯಾಯವಾದಿಯನ್ನು ಕ್ಷಮಿಸುತ್ತಾರೆ. ಕೆಲವುಬಾರಿ ನ್ಯಾಯವಾದಿಗಳಿಗೂ ಕಕ್ಷಿದಾರರಿಗೂ ದಂಡ ಬೀಳುವುದುಂಟು. ಪ್ರಾಯಃ ಇಂಥ ನ್ಯಾಯವಾದಿ ಗಳನ್ನುದ್ದೇಶಿಸಿಯೇ ಅಧೀನ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ‘‘ನ್ಯಾಯವಾದಿಗಳು ಚೆನ್ನಾಗಿ ತಮ್ಮ ಕಕ್ಷಿದಾರರ ಪ್ರಕರಣವನ್ನು ನಿರ್ವಹಿಸುವುದೇ ನೈಜ ಸಮಾಜಸೇವೆ, ಜನಸೇವೆ’’ ಎನ್ನುತ್ತಿದ್ದರು.

ಇದು ನಾನು ನಿರ್ವಹಿಸುವ ನ್ಯಾಯಾಂಗಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಎಲ್ಲ ವೃತ್ತಿಗಳಲ್ಲಿ ಮತ್ತು ಖಾಸಗಿ ಹಾಗೂ ಇತರ ಸ್ವತಂತ್ರ ಉದ್ಯೋಗಗಳಿಗೂ ಅನ್ವಯಿಸುತ್ತದೆ. ಆದರೆ ಪ್ರಶ್ನೆಯಿರುವುದು ಎಲ್ಲರೂ ಅವರವರ ವೃತ್ತಿ, ಉದ್ಯೋಗಕ್ಕೆ ಶತಾಂಶ ಅರ್ಪಿಸಿಕೊಂಡರೆ ಈ ಸಮಾಜಸೇವೆ, ಜನಸೇವೆ ಎನ್ನುವುದು ಯಾರಿಗಾಗಿ? ಸಮಾಜ, ಜನತೆ ಯಾರನ್ನು ಈ ಕೆಲಸಕ್ಕಾಗಿ ಇದಿರು ನೋಡಬೇಕು? ಕಾಯಬೇಕು?

ಸಮಾಜಸೇವೆ, ಜನಸೇವೆ ಎಂಬುದು ಐಚ್ಛಿಕವಾದ ಕರ್ತವ್ಯ. ಐಚ್ಛಿಕವೂ ಹೌದು; ಕರ್ತವ್ಯವೂ ಹೌದು. ಆದರೆ ಅದಕ್ಕೆ ಆಸ್ಪದವಿರುವವರು ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು ಕಡಿಮೆ. ಸರಕಾರಿ ಮತ್ತು ಅಂತಹ ಇತರ ಕ್ಷೇತ್ರಗಳಲ್ಲಿ ದುಡಿಯುವವರಿಗೆ ಇಂತಹ ಐಚ್ಛಿಕತೆ ಕಡಿಮೆ. ಸಿಡಿದು ಹೊರಬರಬೇಕಾದ, ಕೆಲಸವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿಯನ್ನು ಯಾರೂ ಮೈಮೇಲೆಳೆದುಕೊಳ್ಳುವುದಿಲ್ಲ. ಈ ಪೈಕಿ ಕೆಲವರಿಗೆ ತಮ್ಮ ಕ್ಷೇತ್ರವೇ ಒಂದು ನೆಪ. ತಾವು ಈ ಬಗ್ಗೆ ಆಸಕ್ತಿಯಿದ್ದರೂ ಭಾಗವಹಿಸುವಂತಿಲ್ಲವೆಂದು ಹೇಳುವವರೇ ಹೆಚ್ಚು. ತಮ್ಮ ಕ್ಷೇತ್ರಗಳ ಮೂಲಕ ಸಲ್ಲಿಸುವ ಸೇವೆಗಳ ಗೊಡವೆಗೆ ಹೋಗುವವರ ಸಂಖ್ಯೆಯೂ ಕಡಿಮೆ. ಏಕೆಂದರೆ ಅನೇಕರಿಗೆ ಈ ಕ್ಷೇತ್ರಗಳ ಉದ್ಯೋಗಗಳು ಭಾಗ್ಯದ ಬಾಗಿಲುಗಳು. ಅಲ್ಲಿ ಕ್ರಮ ಮತ್ತು ಅಕ್ರಮ ಎರಡಕ್ಕೂ ಅವಕಾಶಗಳಿದ್ದರೂ ಕ್ರಮಾವಕಾಶದ ಲಾಭಕ್ಕಿಂತಲೂ ಅಕ್ರಮಾವಕಾಶದ ಲಾಭ ಹೆಚ್ಚಾದಾಗ ಅದರ ಬಾಗಿಲು ಬಡಿಯುವವರೇ ಜಾಸ್ತಿ. ಒಟ್ಟಾರೆ ಸಮಾಜಕ್ಕೆ ಸಮಾಜವೇ ಭ್ರಷ್ಟವಾಗುವ ಅವಕಾಶಗಳಿರುವಾಗ ಮತ್ತು ಕಾಂಚಾಣವೇ ಕಾರ್ಯಸಿದ್ಧಿಯ ಸೂತ್ರವಾದಾಗ ಈ ಅವಕಾಶ ಯಾರಿಗೆ ಬೇಡ? ಇಷ್ಟೊಂದು ಲಕ್ಷಣಗಳನ್ನು ಎಣಿಸಿ ಶಿಕ್ಷಣ, ಅದಾದ ಮೇಲೆ ಉದ್ಯೋಗ, ಭಡ್ತಿ, ತಮ್ಮ ಆಸಕ್ತಿಗೆ, ಅನುಕೂಲಕ್ಕೆ ಅನುಗುಣವಾಗಿ ವರ್ಗಾವಣೆ ಪಡೆದವರು, ಅದನ್ನು ಮರಳಿ ಪಡೆಯುವುದನ್ನೇ ಆದ್ಯತೆಯಾಗಿ ಕಾಣುವುದು ಸಹಜ. ಜೊತೆಗೇ ಪಡೆಯುವ ಅಧಿಕಾರ, ಪ್ರತಿಷ್ಠೆ ಇವುಗಳಿಂದಾಗಿ ಸಮಾಜ ಮತ್ತು ಜನತೆ ಅಲಕ್ಷ್ಯವಾಗುವ ಕ್ಷೇತ್ರಗಳಾಗುತ್ತವೆ.

ಎಲ್ಲರೂ ತಮ್ಮ ಪಾಡಿಗೆ ತಾವು ಬದುಕಿದ್ದರೆ ಗಾಂಧಿಯಂತಹ ನಾಯಕರು ಇರುತ್ತಿರಲಿಲ್ಲ. ನ್ಯಾಯವಾದಿಯಾಗಿದ್ದ ಗಾಂಧಿಗೆ ಒಳ್ಳೆಯ ಸಂಪಾದನೆಯಿತ್ತು. ಪ್ರತಿಷ್ಠೆಯಿತ್ತು. ಆದರೆ ಅವರಿಗೆ ತನ್ನ ವೃತ್ತಿಯಿಂದ ದೇಶವನ್ನು, ಅಲ್ಲ, ಸಮಾಜವನ್ನು, ಬವಣೆಯ ಬದುಕಿನ ಜನರನ್ನು ಬೇರೆಯಾಗಿ ಕಾಣಲು ಸಾಧ್ಯವಾಗಲಿಲ್ಲ. ವಕೀಲ ವೃತ್ತಿಯೆಂದಲ್ಲ, ಆಗಿನ ಐಸಿಎಸ್ ಮುಂತಾದ ಅಧಿಕಾರಯುತ, ಅಧಿಕಾರಯುಕ್ತ ಉದ್ಯೋಗಗಳನ್ನು ಬಿಟ್ಟು ಬಂದವರು ಸಾಕಷ್ಟಿದ್ದರು. ಗಾಂಧಿ ಬಿಡಿ, ಸಮಾಜಸೇವೆ, ಜನಸೇವೆಯೆಂದು ತಮ್ಮ ವೃತ್ತಿ-ಉದ್ಯೋಗಗಳಿಂದ ಹೊರಬಂದು ಬದುಕಿದ, ಸತ್ತ ಅನೇಕರನ್ನು ನಾವು ಕಾಣುತ್ತಿರಲಿಲ್ಲ.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಾಕಷ್ಟು ಜನರು ಸತ್ತರು; ಸೆರೆವಾಸ, ವನವಾಸವನ್ನು ಅನುಭವಿಸಿದರು. ತಾವು ಮಾತ್ರ ಕಷ್ಟವನ್ನು ಅನುಭವಿಸಿದ್ದಲ್ಲ; ತಮ್ಮ ಸ್ವಂತ ಸಂಸಾರವನ್ನು ಬಡತನದ, ಸಂಕಟದ ಬೀದಿಗೆ ತಳ್ಳಿದರು. ಇಂದಲ್ಲ ನಾಳೆ ನಾಡಿಗೆ, ಜನರಿಗೆ ಒಳ್ಳೆಯದಾಗುತ್ತದೆಂದು ನಂಬಿದರು. ಹಾಗೆ ನಂಬಿದವರೆಲ್ಲ ತಮ್ಮ ದುಡಿಮೆಯ ಫಲವನ್ನು ನೋಡಲು ಬದುಕಲಿಲ್ಲ. ತಮ್ಮ ಮಕ್ಕಳುಮರಿಗಾದರೂ ಒಳ್ಳೆಯದಾಗುತ್ತದೆಂದು ಆಶಿಸಿದರು. ಅದರ ಫಲವನ್ನುಣ್ಣುವವರು ಅವರನ್ನು ಸ್ಮರಿಸಿದರೆ ಅವರ ಶ್ರಮ ಸಾರ್ಥಕ.

ತನ್ನ ಕಾಲಕ್ಕೆ, ಕಾಲದ ಸಮಸ್ಯೆಗಳಿಗೆ ಪ್ರತಿಕ್ರಿಯಿಸದವರು ಬದುಕಿದ್ದೂ ನಿರರ್ಥಕ. ಬದುಕುವುದು ಬಾಳುವುದಕ್ಕೆ. ಬರೀ ಉಸಿರಾಡುವುದಕ್ಕೆ, ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ, ಹೆಸರು ಗಳಿಸುವುದಕ್ಕೆ ತನ್ನ ಕಾಲವನ್ನು, ಸಮಾಜವನ್ನು, ದೇಶವನ್ನು, ಜನರನ್ನು ಬಳಸಿಕೊಳ್ಳುವವರು ಸತ್ತವರ ಸಾಲಿಗೆ ಸೇರುತ್ತಾರೆಯೇ ಹೊರತು ಬಾಳಿದವರ ಸಾಲಿಗಲ್ಲ.

ಇಂದು ದೇಶದ ಸ್ಥಿತಿ ಹೇಗಿದೆ ನೋಡಿ. ದೇವರು-ಧರ್ಮ ಮತಪೆಟ್ಟಿಗೆಯ ಒಳಗೆ ಅವಿತಿದ್ದಾರೆ.

ಇಂತಹ ಸ್ಥಿತಿಯಲ್ಲಿ ನಮ್ಮ ಅನೇಕ ಲೇಖಕರು-ಚಿಂತಕರು ಈ ವಾಸ್ತವಕ್ಕೆ ಬೆನ್ನುಹಾಕಿ ತಮ್ಮ ಪಾಡಿಗೆ ತಾವು ಸಾಹಿತ್ಯ, ವಿಮರ್ಶೆ, ಕೃತಿ ಪ್ರಕಟಣೆ ಮುಂತಾದ ಸಂಗತಿಗಳಲ್ಲಿ ತೊಡಗಿಕೊಂಡಿದ್ದಾರೆ. ಬರೆಯುವ ತಾಕತ್ತಿದ್ದವರು ಬರೆಯುತ್ತಿಲ್ಲ; ಮಾತನಾಡುವ ತಾಕತ್ತಿದ್ದವರು ಮಾತನಾಡುತ್ತಿಲ್ಲ; ಹೇಳಬೇಕಾದ ಮತ್ತು ಹೇಳಿದರೆ ಕೇಳುವ ಶಿಷ್ಯಗಣವಿರುವವರು ಹೇಳುತ್ತಿಲ್ಲ. ಹೇಳುವ ಧೈರ್ಯವನ್ನು ತೋರುತ್ತಿಲ್ಲ. ಹಿಂದೆ ಮಾಸ್ತಿಯಂತಹ ಸಾಂಪ್ರದಾಯಿಕರ ನಡುವೆ ಕಾರಂತ, ಕುವೆಂಪು ಇದ್ದರು; ಕೆಲವು ದಶಕಗಳ ಹಿಂದಷ್ಟೇ ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮುಂತಾದ ಜನಮನ್ನಣೆಯ ಸಾಹಿತಿ ಚಿಂತಕರು ತಮ್ಮ ಸಾಹಿತ್ಯ ಕ್ಷೇತ್ರದಿಂದ ಹೊರಬಂದು ದೇಶದ ಹಿತವನ್ನು ಗ್ರಹಿಸಿದ್ದಾರೆ. ನಮ್ಮ ನೆಲದಲ್ಲಿ ನಡೆಯುವ ದೈನಂದಿನ ಸಂತೆಗಳು, ಸಡಗರಗಳು, ಉತ್ಸವಗಳು, ಪ್ರಶಸ್ತಿಗಳು ದೇಶವನ್ನು, ಸಮಾಜವನ್ನು, ಜನರನ್ನೂ ಕೊನೆಗೆ ಮಾರಾಟಮಾಡುವ ಸಂಚನ್ನು ಮರೆತರೆಂಬಂತಿವೆ.

ಸತ್ತಂತಿರುವ ಇವರನ್ನೆಲ್ಲ ಬಡಿದೆಬ್ಬಿಸುವುದು ಹೇಗೆ? ಈ ಪ್ರಶ್ನೆ ನಮ್ಮ ಮುಂದಿದೆ. ಬಡಿದೆಬ್ಬಿಸಲು ಸಾಧ್ಯವಾಗದವರನ್ನು ಬಡಿದು ಹಾಕಬೇಕೆಂಬಷ್ಟು ಸಿಟ್ಟು ಬಂದರೂ ಅದನ್ನು ತಾಳಿಕೊಂಡು ಸಾಂಸ್ಕೃತಿಕ ಸಕ್ರಿಯರು ಕಾರ್ಯಶೀಲರಾಗಬೇಕಾಗಿದೆ. ನಮಗೆ ಜಯಪ್ರಕಾಶ್ ನಾರಾಯಣರಂತಹ ನಾಯಕರು ಈಗ ಮುಂದೆ ಬಂದಿಲ್ಲ. ಅಲ್ಲಿಯವರೆಗೆ ಈ ಹರಿವು ಬತ್ತದಂತೆ ನೋಡಿಕೊಳ್ಳಬೇಕಾದಂತಹ ಹೊಣೆ ಯೋಚಿಸಬಲ್ಲವರಿಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News

ಹೊಸ ವರುಷ