×
Ad

ಪ್ರಭುತ್ವದ ಹೆಡೆಯಡಿ ಪ್ರಜೆ

Update: 2026-02-26 11:39 IST

ಭಾರತದ ಪ್ರಜಾಪ್ರಭುತ್ವವು ಈಗ ಸಜಾಪ್ರಭುತ್ವವಾಗುವತ್ತ ದಾಪುಗಾಲನ್ನಿಟ್ಟಿದೆ. ಯಾವುದೇ ಪ್ರತಿಭಟನೆಯಿರಲಿ ಅದು ಬಟ್ಟೆ ತೊಟ್ಟಿರಲಿ, ಇಲ್ಲದಿರಲಿ, ಅದನ್ನೊಂದು ದೇಶವಿರೋಧಿ ಚಳವಳಿಯೆಂದು ಗುರುತಿಸಿ ದಂಡಿಸುವುದು ಈ ಆಡಳಿತದಲ್ಲಿ ಸುಲಲಿತವಾದ, ಸುಸೂತ್ರವಾದ ವಿಧಾನ. ಸಾಕಷ್ಟು ಜನರು ಇದಕ್ಕೆ ಭಯಪಟ್ಟಿದ್ದಾರೆ. ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ ಇವೆಲ್ಲ ನಾವು ಬದುಕಿದ್ದರೆ ತಾನೇ ಎಂಬ ತರ್ಕ ಈಗ ಚಾಲ್ತಿಯಲ್ಲಿದೆ.

ಅಧಿಕಾರದ ಅಭಾವದಿಂದ ಪಶ್ಚಿಮ ಬಂಗಾಳದ ಸೇವೆ ಮಾಡಲು ತನಗಾಗಲಿಲ್ಲವೆಂದು ಪ್ರಧಾನಿಯವರು ಅಲ್ಲಿನ ಪ್ರಜೆಗಳಿಗೆ ಬರೆದ ಬಹಿರಂಗ ಪತ್ರದ ಮೂಲಕ ಶೋಕಿಸಿದ್ದಾರೆ. ಅದನ್ನು ಹೊರತುಪಡಿಸಿದ ಈ ದೇಶಕ್ಕೆ ಕಳೆದ ಒಂದು ದಶಕಕ್ಕೂ ಮಿಕ್ಕಿ ತಾನು ಪ್ರಧಾನಿಯಾಗಿದ್ದೇನೆಂದು ಸೂಚಿಸಿದ್ದಾರೆ. ಈಗ ಅದರ ಅಧಿಕಾರದ ತುರ್ತು ಅವರಿಗಿದೆ. ಏಕೆಂದರೆ ಅಲ್ಲಿ ಸದ್ಯ ಚುನಾವಣೆಯಿದೆ. ಇದಕ್ಕೆ ಕೆಲವೇ ದಿನಗಳ ಮೊದಲು ಒಕ್ಕೂಟ ಸರಕಾರವು ರಾಷ್ಟ್ರಗೀತೆಗೆ ಮೊದಲು ಬಂಕಿಮರ ವಂದೇಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಬೇಕೆಂದು ಫರ್ಮಾನ್ ಹೊರಡಿಸಿದೆ. ಇದಿನ್ನೂ ಯಾವುದೇ ಪ್ರತಿಭಟನೆಯನ್ನು ಕಂಡಿಲ್ಲ. ಏಕೆಂದರೆ ರಾಷ್ಟ್ರಗೀತೆ ಇನ್ನೂ ರದ್ದಾಗಿಲ್ಲ. ಇದು ಪಶ್ಚಿಮ ಬಂಗಾಳದ ಚುನಾವಣೆಯನ್ನು ಎಷ್ಟು ಪ್ರಭಾವಿಸುತ್ತದೆಂದು ಕಾದು ನೋಡಬೇಕು. ದಿಲ್ಲಿಗೆ ಮೊದಲು ಕೋಲ್ಕತಾ ಆಗಿನ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತದಲ್ಲಿ ಭಾರತದ ರಾಜಧಾನಿಯಾಗಿತ್ತು. ಆನಂತರ ದಿಲ್ಲಿಗೆ ವರ್ಗಾಯಿಸಲಾಯಿತು. ಪ್ರಾಯಃ ಇದು ನೆನಪಾಗಿರುತ್ತಿದ್ದರೆ ಸದ್ಯ ಪಶ್ಚಿಮ ಬಂಗಾಳದ ಚುನಾವಣೆ ಮುಗಿಯುವ ವರೆಗೆ ಒಕ್ಕೂಟ ಸರಕಾರವು ಭಾರತದ ರಾಜಧಾನಿಯನ್ನು ದಿಲ್ಲಿಯಿಂದ ಕೋಲ್ಕತಾಕ್ಕೆ ವರ್ಗಾಯಿಸುತ್ತಿತ್ತೇನೋ?

ಇನ್ನೊಂದು ಕಡೆ ವಸಾಹತುಶಾಹಿ ಮನಸ್ಥಿತಿಯನ್ನು ಕಳೆದುಕೊಳ್ಳುವ ಸಲುವಾಗಿ ರಾಷ್ಟ್ರಪತಿಭವನದೊಳಗೆ ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವಿನ್ ಲುಟೆನ್ಸ್ ಅವರ ಪ್ರತಿಮೆಯಿದ್ದಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿಯವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ಮನಸ್ಥಿತಿಗೂ ಕಾರಣವಿದೆ. ಮುಂದಿನ ಕೆಲವೇ ಕಾಲದಲ್ಲಿ ತಮಿಳುನಾಡಿನ ಚುನಾವಣೆ ನಡೆಯಲಿದೆ. ತಮಿಳರೊಬ್ಬರನ್ನು ಉಪರಾಷ್ಟ್ರಪತಿಯಾಗಿ ಚುನಾಯಿಸಿದ್ದರಲ್ಲಿ ಆರಂಭವಾದ ಈ ರಾಜಕೀಯ ಇನ್ನೂ ಹಲವು ದಾಳಗಳನ್ನು ಉರುಳಿಸಲಿದೆ; ಮತ್ತು ಈ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಲಿದೆ.

ವಸಾಹತುಶಾಹಿ ಮನಸ್ಥಿತಿಯ ಪ್ರತಿನಿಧಿಯೆಂದು ಈಗ ಆಪಾದಿಸಲ್ಪಟ್ಟ ಈ ಎಡ್ವಿನ್ ಲುಟೆನ್ಸ್ ಗಾಂಧೀಜಿಯ ಸಮಕಾಲೀನ. ರಾಜಕೀಯ ರಹಿತವಾದ, ಬ್ರಿಟಿಷ್ ಶಿಲ್ಪಶಾಸ್ತ್ರಜ್ಞ. ಹೊಸದಿಲ್ಲಿಯನ್ನು ವಿನ್ಯಾಸಗೊಳಿಸಿದವನು. ಇಂಡಿಯಾ ಗೇಟ್ ಮತ್ತು ಈಗಿನ ರಾಷ್ಟಪತಿ ಭವನದ ನಿರ್ಮಾತೃ. ದಿಲ್ಲಿಯಲ್ಲಿ ಈತನ ಹೆಸರಿನ ‘ಎಡ್ವಿನ್ ಲುಟೆನ್ಸ್ ದಿಲ್ಲಿ’ ಎಂಬ ಒಂದು ಭಾಗವೇ ಇದೆ. ಈತನ ಬಗ್ಗೆ ಮೋದಿ ಸರಕಾರಕ್ಕೆ ಯಾವ ವೈರವೋ ಕಾಣೆ. ಪ್ರಾಯಃ ಆತನ ಮೂರ್ತಿಯನ್ನು ತೆಗೆದದ್ದು ಆತನ ವಿರುದ್ಧದ ಕ್ರಮವಲ್ಲ; ಬದಲಾಗಿ ತಮಿಳುನಾಡಿನ ಚುನಾವಣಾ ರಾಜಕೀಯದ ಒಂದು ತಂತ್ರ. ಹಾಗೆಂದು ಆತ ನಿರ್ಮಿಸಿದ ಭವನದಲ್ಲಿ ಉಳಿಯಲು ರಾಷ್ಟ್ರಪತಿಯವರಿಗೆ ಯಾವ ಲಜ್ಜೆಯೂ ಇಲ್ಲ. ಇಷ್ಟಕ್ಕೂ ಇದು ಅವರ ನಿರ್ಧಾರವಾಗಿರಲಿಕ್ಕಿಲ್ಲ. ಈ ದೇಶದ ಸಮಸ್ತ ಅಜ್ಞಾನಿಗಳಿಗೆ ಹೀಗೂ ಒಂದು ದೇಶಿ ಕೊಡುಗೆಯನ್ನು ನೀಡಬಹುದೆಂದು ಪ್ರಧಾನಿಯವರಿಗೆ ಹೇಳಿಕೊಟ್ಟ ಮಹಾನುಭಾವ ಯಾರಿರಬಹುದು?

ಅಸ್ಸಾಮಿನಲ್ಲಿ ಅಲ್ಲಿನ ಕಾಂಗ್ರೆಸ್ ಅಧ್ಯಕ್ಷರು ತತ್ವಸಿದ್ಧಾಂತಗಳ ಬೆಳಕಿನಲ್ಲಿ ಪಕ್ಷ ತ್ಯಜಿಸಿ ಇದೀಗ ಭಾಜಪ ಸೇರಿದ್ದಾರೆ. ವಯಸ್ಸಾದಂತೆ ಮನುಷ್ಯನ ಬುದ್ಧಿಮತ್ತೆ ಈಗಿನ ‘ಎಐ’ಗಿಂತಲೂ ಚುರುಕಾಗಿ ವಿಕಾಸವಾಗುತ್ತಿದೆ. ಅಲ್ಲೂ ಸದ್ಯ ಚುನಾವಣೆಯಿದೆ.

ಈಚೆಗೆ ಗೋವಾದಲ್ಲಿ ಭಾಷಣ ಮಾಡುತ್ತಾ ಪ್ರಧಾನಿ ತನಗೆ ಗೋವಾವೆಂಬುದು ಮನೆಯಂತೆ ಎಂಬರ್ಥದಲ್ಲಿ ಆತ್ಮೀಯವಾಗಿ ಮಾತನಾಡಿದರು. ಅಲ್ಲೂ ಚುನಾವಣೆಯಿದೆ.

ಕೇರಳ ಸರಕಾರವು ಜೂನ್ 24, 2024ರಂದು ‘ಕೇರಳ’ ಎಂಬ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ತೀರ್ಮಾನಿಸಿ ಒಕ್ಕೂಟ ಸರಕಾರಕ್ಕೆ ಅದನ್ನು ಅನುಮೋದಿಸಲು ಕಳುಹಿಸಿತು. ಹೀಗೆ ಅನುಮೋದನೆಯಾಗದೆ ಹೆಸರನ್ನು ಬದಲಾಯಿಸುವಂತಿಲ್ಲ. ಆದರೆ ಒಕ್ಕೂಟ ಸರಕಾರವು ಅದನ್ನು ತಲೆದಿಂಬಿನಡಿಗಿಟ್ಟು ನಿದ್ರಿಸಿತು. ಈಗ ಕೇರಳ ರಾಜ್ಯದ ಚುನಾವಣೆ ಹತ್ತಿರವಾಯಿತು. ಚುನಾವಣೆಗೆ ‘ಕೇರಳ ಸ್ಟೋರಿಸ್-2’ ಸಾಕಾಗುವುದಿಲ್ಲವಾದ್ದರಿಂದ ರಾಜ್ಯದ ಹೆಸರು ಬದಲಾವಣೆಯ ಬೇಡಿಕೆಯನ್ನು ಅನುಮೋದಿಸಿತು. ಇದನ್ನು ಪ್ರಧಾನಿ ಕೇರಳದ ಚುನಾವಣಾ ಪ್ರಚಾರದಲ್ಲಿ ಹೇಳಿ ಚಪ್ಪಾಳೆಗಿಟ್ಟಿಸುವವರಿದ್ದಾರೆ.

ಪ್ರಧಾನಿ ಇನ್ನೆಲ್ಲೆಲ್ಲ ವಿಕಾಸಗೊಂಡಿದ್ದಾರೋ ನೆನಪಾಗುವುದಿಲ್ಲ. ಆದರೆ ಹೀಗೆ ರಾಜ್ಯಗಳ ಕುರುಕ್ಷೇತ್ರಕ್ಕೆ ಮೊದಲು ಇನ್ನೆಷ್ಟು ವಿಕಾಸಗಳು ನಡೆಯಲಿವೆಯೋ ಗೊತ್ತಿಲ್ಲ. ನೂರಾನಲ್ವತ್ತು ಕೋಟಿ ಶ್ರೇಷ್ಠರಿರುವ ಈ ದೇಶದಲ್ಲಿ ಇವೆಲ್ಲ ಸಹಜ.

ಇನ್ನೊಂದು ವಿಚಾರವನ್ನು ಗಮನಿಸಿದ್ದೀರಾ? ಯಾರದ್ದೇ ಮದುವೆಯಿರಲಿ; ಮದುಮಗನನ್ನು ಪಕ್ಕಕ್ಕೆ ಸರಿಸಿ ತಾನೇ ಅಲ್ಲಿ ಫೋಟೊ ತೆಗೆಸಿಕೊಳ್ಳುವ ವೈಖರಿ ನಮ್ಮ ಪ್ರಧಾನಿಯದ್ದು. ದೇಶೀಯ ಸಮಾರಂಭಗಳು ಮಾತ್ರವಲ್ಲ, ಜಿ-7 ಇರಲಿ, ಜಿ-20 ಇರಲಿ, ನಾಳೆ ಜಿ-ಸಾವಿರವೇ ಬರಲಿ ಪತ್ರಿಕೆ ಮತ್ತಿತರ ಮಾಧ್ಯಮಗಳಲ್ಲಿ ಪ್ರದರ್ಶಿತಗೊಳ್ಳುವ ಚಿತ್ರಗಳಲ್ಲಿ ನಮ್ಮ ಪ್ರಧಾನಿ ಕೇಂದ್ರದಲ್ಲಿರುತ್ತಾರೆ. ಈ ಕೇಂದ್ರವೃತ್ತಾಂತವು ಅಭಿಮಾನಿಗಳ ಮನಸೆಳೆಯುವಂಥಾದ್ದು. ಇದು ಫೋಟೊಷಾಪಿಂಗ್ ಅಲ್ಲವೆಂದು ನನ್ನ ನಂಬಿಕೆ. ‘ಎಐ’ಯ ಕಾಲದಲ್ಲಿ ಯಾವುದೂ ಸಾಧ್ಯ. ಸಚ್ಚಾ-ಝೂಟಾ, ಅಸಲಿ-ನಕಲಿಗಳ ದ್ವಂದ್ವದ ತಲೆಬಿಸಿಯಿಲ್ಲ.

ಈಚೆಗಿನ ಅಮೆರಿಕ-ರಶ್ಯ ಗೊಂದಲದ ನಡುವೆ ಭಾರತ ಎಲ್ಲಿರುತ್ತದೆಯೆಂದೇ ಗೊತ್ತಾಗುವುದಿಲ್ಲ. ನಾವು ಸುಂಕ ಪಾವತಿಸಿ, ನಮ್ಮಲ್ಲಿಗೆ ಬರುವ ಅಮೆರಿಕದ ಸರಕುಗಳಿಗೆ ಸುಂಕದಿಂದ ಪೂರ್ಣ ವಿನಾಯಿತಿ ನೀಡಿದರೂ ನಾವು ಈ ವ್ಯಾಪಾರವನ್ನು ಭಾರತ ಶಕ್ತಿಯುತವಾಗಿ ಪಡೆದಿದೆಯೆಂದು ನಮ್ಮ ಪ್ರಧಾನಿ ಹೇಳುತ್ತಿದ್ದಾರೆ.

ರಾಜಪ್ರಭುತ್ವವನ್ನು ಕಳಚಿಕೊಂಡು ಅಥವಾ ಪಕ್ಕಕ್ಕೆ ಸರಿಸಿ ಪ್ರಜಾಪ್ರಭುತ್ವಕ್ಕೆ ಬಂದೆವೆಂದು ತಿಳಿದವರು ಮೂರ್ಖರು ಎಂದು ನಮ್ಮ ಆಗುಹೋಗುಗಳು ತಿಳಿಸಿವೆ. ಸ್ವಾತಂತ್ರ್ಯ ಬಂದಾಗ ಭಾರತದ ಪ್ರಜೆಗಳಲ್ಲಿ ಬಹುಪಾಲು ಜನರು ಕುಣಿದದ್ದೇ ಕುಣಿದದ್ದು. ಕೆಲವೇ ಮಂದಿ, ಗಾಂಧಿಯೂ ಸೇರಿ ತಾವೇ ತಂದುಕೊಂಡ ಈ ಅನಿವಾರ್ಯ ಸಂಭ್ರಮವನ್ನು ತಾಳಿಕೊಂಡು ಇದು ರಾಜಕೀಯ ಸ್ವಾತಂತ್ರ್ಯ ಮಾತ್ರವೆಂದು ಮತ್ತು ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ಸ್ಥಾನಮಾನ ಸಿಗದ ಹೊರತು ಈ ಸ್ವಾತಂತ್ರ್ಯವು ಕೆಲವೇ ಜನರನ್ನು ಸುಖದ ಸುಪ್ಪತ್ತಿಗೆಯಲ್ಲೂ ಇನ್ನು ಕೆಲವರನ್ನು ಹೊಟ್ಟೆ ತುಂಬಿಸುವಲ್ಲೂ, ಬಹಳಷ್ಟು ಮಂದಿಯನ್ನು ಅಧಿಕಾರದ ಇಂದ್ರಪದವಿಯಲ್ಲೂ ಸಾರ್ಥಕಗೊಳಿಸುವ ಮಿತಿಯನ್ನಷ್ಟೇ ಸಾಧಿಸುತ್ತದೆಯೆಂದು ಅರ್ಥಮಾಡಿಕೊಂಡರು. ಆದರೂ ಇಂದಲ್ಲ ನಾಳೆ ಈ ದೇಶ ಸುಭಿಕ್ಷವಾಗುತ್ತದೆಯೆಂದು ಮತ್ತು ಗ್ರಾಮರಾಜ್ಯವೊಂದು ಸ್ಥಾಪನೆಯಾಗುತ್ತದೆಯೆಂದು ಆಶಿಸಿದರು ಅಥವಾ ಭ್ರಮಿಸಿದರು.

ಸ್ವಾತಂತ್ರ್ಯ ಸಿಕ್ಕಿ ಎಂಟು ದಶಕಗಳು ಸಮೀಪಿಸುತ್ತಿವೆ. ಒಕ್ಕೂಟ ಸರಕಾರವು ಈಗಲೇ ಶತಮಾನವನ್ನು ಕಾಣುವತ್ತ ಪ್ರಜೆಗಳಿಗೆ ಜಾಹೀರಾತುಗಳ ಮೂಲಕ ಹಾದಿ ತೋರಿಸುತ್ತಿದೆ. ನಾವೇನು ಸಾಧಿಸಿದ್ದೇವೆಂದು ಇತರರು ಹೇಳುವುದನ್ನು ಕಾಯುವುದಕ್ಕೆ ವ್ಯವಧಾನವಿಲ್ಲದೆ ನಮ್ಮ ನೀಳ ಬಾಹುಗಳನ್ನು ಅತ್ತಿಂದಿತ್ತ ಇತ್ತಿಂದತ್ತ ಚಾಚಿ ಝಳಪಿಸಿ ನಮ್ಮ ಬೆನ್ನುಗಳೇ ಬಾತುಕೊಳ್ಳಲು ಶುರುಮಾಡಿವೆ. ನಾವೇ ಮೊದಲು, ನಾವೇ ಅಗ್ರಗಣ್ಯರು, ನಾವೇ ವಿಶ್ವಗುರುವೆಂದು ಹೇಳುವ ಮೂಲಕ ನಮ್ಮ ದೇಶದ ಅಸಂಖ್ಯಾತ ಮುಗ್ಧರನ್ನು ಕನಸಿನ ಲೋಕಕ್ಕೊಯ್ದು ಅಲ್ಲೇ ಸ್ವಲ್ಪ ಕಾಲವಿರಲು ಹೇಳಿದ್ದೇವೆ; ಇದಕ್ಕಾಗಿ ದೇಶದ ನಿಧಿಯ ಬಹುಪಾಲನ್ನು ಜಾಹೀರಾತಿಗೆ ಬಳಸಿದ್ದೇವೆ. ಜೊತೆಗೇ ವಿಶ್ವದೆಲ್ಲೆಡೆ ನಮ್ಮ ನಿಲುವೇನೆಂದು ಹೇಳಲು ನಾಚಿ ಖೋಖೋ ಆಟದಲ್ಲಿ ಮುಟ್ಟಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಓಡುವವರಂತೆ ಓಡುತ್ತ ನಮ್ಮ ಗಡಿಯಿಂದಾಚೆಗಿರುವ ಇತರರಿಗೆ ಮುಸುಕಿನೊಳಗೇ ನಗುವ ಸಂದರ್ಭವನ್ನು ಮಾಡಿಕೊಟ್ಟಿದ್ದೇವೆ. ಗಡಿಯಿಂದೊಳಗೆ ನಮ್ಮೊಂದಿಗೆ, ಗಡಿಯಿಂದಾಚೆಗೆ ನಮ್ಮ ಕಡೆಗೆ ಈ ನಗು ವ್ಯಾಪಿಸಿದೆ.

ಭಾರತದ ಪ್ರಜಾಪ್ರಭುತ್ವವು ಈಗ ಸಜಾಪ್ರಭುತ್ವವಾಗುವತ್ತ ದಾಪುಗಾಲನ್ನಿಟ್ಟಿದೆ. ಯಾವುದೇ ಪ್ರತಿಭಟನೆಯಿರಲಿ ಅದು ಬಟ್ಟೆ ತೊಟ್ಟಿರಲಿ, ಇಲ್ಲದಿರಲಿ, ಅದನ್ನೊಂದು ದೇಶವಿರೋಧಿ ಚಳವಳಿಯೆಂದು ಗುರುತಿಸಿ ದಂಡಿಸುವುದು ಈ ಆಡಳಿತದಲ್ಲಿ ಸುಲಲಿತವಾದ, ಸುಸೂತ್ರವಾದ ವಿಧಾನ. ಸಾಕಷ್ಟು ಜನರು ಇದಕ್ಕೆ ಭಯಪಟ್ಟಿದ್ದಾರೆ. ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ ಇವೆಲ್ಲ ನಾವು ಬದುಕಿದ್ದರೆ ತಾನೇ ಎಂಬ ತರ್ಕ ಈಗ ಚಾಲ್ತಿಯಲ್ಲಿದೆ. ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರು ಹಲ್ಲೆ ಮಾಡುತ್ತಿದ್ದಾರೆ ಎಂಬ ಕೂಗಿನ ನಡುವೆಯೇ ಬಹಳಷ್ಟು ಅಲ್ಪಸಂಖ್ಯಾತರೂ ಜಾಣತನದಿಂದ ರಾಜಕೀಯ ಬಹುಮತೀಯರಾಗಲು ಬಯಸುತ್ತಿದ್ದಾರೆ. ವ್ಯಾವಹಾರಿಕವಾಗಿ ಅದು ಸನ್ಮತಿಯೆಂದು ಅವರು ತಿಳಿದಿದ್ದಾರೆ. ಪ್ರತಿಭಟಿಸಿ ಹುತಾತ್ಮರಾಗಲು ಇದೇನೂ ಸ್ವಾತಂತ್ರ್ಯ ಹೋರಾಟವಲ್ಲವಲ್ಲ!

ಇದರೆಲ್ಲದರ ಹಿಂದೆ ಒಂದು ಸಂಘಟಿತ ಜಾಣತನವಿದೆ. ಹಣಕಾಸಿನಿಂದ ದೇಶದ ರಕ್ಷಣೆಯ ವರೆಗೆ ಹೇಗೆ ಎಸೆದರೂ ನಮಗೆ ಬೇಕಾದಂತೆ ಬೀಳುವ ನಾಣ್ಯ ಈ ಸಂಘಟನೆಯಲ್ಲಿದೆ. ಸದ್ಯ ಗೆದ್ದೆತ್ತಿನ ಬಾಲದತ್ತ ಬಹಳಷ್ಟು ಸಾಹಿತಿ-ಕಲಾವಿದರು, ಚಿಂತಕರು, ವಿದ್ವಾಂಸರು ಕ್ಯೂನಲ್ಲಿದ್ದಾರೆ. ಹೀಗೆ ಕ್ಯೂ ಸೇರದವರೂ ನೀರೋನಂತೆ ತಮ್ಮ ಪಾಲಿಗೆ ತಾವು ಪಿಟೀಲು ಬಾರಿಸುತ್ತ ನಡೆಯುತ್ತಿದ್ದಾರೆ.

ಆಳುವ ರಾಜಕಾರಣಿಗಳು ಏನು ಹೇಳಿಯೂ ದಕ್ಕಿಸಿಕೊಂಡಾರು. ಏಕೆಂದರೆ ಅವರಿಗೆ ಆಡಳಿತದ, ಮಾಧ್ಯಮಗಳ, ಮುಖ್ಯವಾಗಿ ಪೊಲೀಸರ, ಬೆಂಬಲವಿದೆ. ಪ್ರತಿಪಕ್ಷಗಳಿಗೆ ಈ ಸವಲತ್ತಿಲ್ಲ. ಶಿಕ್ಷೆ, ರಕ್ಷೆ ಎರಡೂ ಆಡಳಿತದ ಕೈಯಲ್ಲಿದೆ.

ಆಡಳಿತದ ವಿರುದ್ಧ ಕಾಂಗ್ರೆಸ್ ಎಂದಿನ ದಡ್ಡತನದಿಂದ ಪ್ರತಿಭಟಿಸುತ್ತಿದೆ. ಅಲ್ಲಿ ಯಾರು ಹೇಳುತ್ತಾರೋ ಯಾರು ಕೇಳುತ್ತಾರೋ ಒಂದೂ ಗೊತ್ತಿಲ್ಲ. ಮೊನ್ನೆ ‘ಎಐ’ ಸಮ್ಮೇಳನದ ಎದುರು ಒಂದು ತಂಡ ಬಟ್ಟೆ ಕಳಚಿ ಪ್ರತಿಭಟಿಸಿತು. ಅವರೆಲ್ಲ ಈಗ ಕಂಬಿ ಎಣಿಸುತ್ತಿದ್ದಾರೆ. ‘ಎಐ’ ಅಂದರೆ ‘ಕೃತಕ ಬುದ್ಧಿಮತ್ತೆ’ಯ ಎದುರು ಸಹಜ ದಡ್ಡತನವು ಕೆಲಸಮಾಡದೆಂದು ಅವರಿಗೆ ಗೊತ್ತಿಲ್ಲ. ನಾಲಗೆಯಂತೂ ಹಿಡಿತದಲ್ಲೇ ಇಲ್ಲ! ಕಾಂಗ್ರೆಸ್ ದೇಶಕ್ಕಾಗಿ ಪ್ರತಿಭಟಿಸುತ್ತದೆಯೆಂದು ತಿಳಿಯುವುದು ತಪ್ಪಾದೀತು. ಅವರೂ ಅಧಿಕಾರಕ್ಕಾಗಿಯೇ ಹಾತೊರೆಯುತ್ತಿದ್ದಾರೆ. ಸಂವಿಧಾನ ರಕ್ಷಣೆಯೂ ಒಂದು ನೆಪವೇ ಹೊರತು ತಾತ್ವಿಕ ಬದ್ಧತೆಯಲ್ಲ.

ಇರುವ ಒಂದಷ್ಟು ಶಕ್ತಿಯನ್ನೂ ಬುದ್ಧಿವಂತಿಕೆಯಿಂದ ಬಳಸಲು ಕಾಂಗ್ರೆಸ್ ಸಿದ್ಧವಿಲ್ಲ. ಏಕೆಂದರೆ ಅದಕ್ಕೆ ಸೈದ್ಧಾಂತಿಕ, ರಾಜಕೀಯ ಬದ್ಧತೆಯಿಲ್ಲ. ಇದರಿಂದಾಗಿ ಅದು ತಾನು ಆಡಳಿತದಲ್ಲಿರುವ ರಾಜ್ಯಗಳಲ್ಲೂ ಮುಳುಗುವ ಹಡಗಿನಂತಿದೆ. ಇತರ ರಾಜ್ಯಗಳಲ್ಲಿ ಹೇಳುವಂತಹ ಸಂದರ್ಭಗಳಿಲ್ಲ. ಆದರೆ ಕರ್ನಾಟಕದ ವಿಷಯಕ್ಕೆ ಬಂದರೆ ಯಾವ ಸದಾಶಯಗಳನ್ನೂ ಹೊತ್ತು ಸಾಗುವ ಮನಸ್ಸು ಕಾಂಗ್ರೆಸ್ ಸರಕಾರಕ್ಕೆ ಇದ್ದಂತಿಲ್ಲ. ಚುನಾವಣೋತ್ತರ ಮೊದಲ ದಿನಗಳು ಗ್ಯಾರಂಟಿಯ ಪ್ರವಾಹದ ಮೂಲಕ ಸಾಗಿದರೂ ಈಗ ಅದರ ಏರುತಗ್ಗುಗಳು ಸ್ಪಷ್ಟವಾಗುತ್ತಿವೆ. ಭ್ರಷ್ಟತನ ಎಂದಿಗಿಂತ ಭಯಾನಕವಾಗಿದೆ. ಸರಕಾರದ ಸಾಮಾನ್ಯ ಅಧಿಕಾರಿಗಳೂ ಬಹಿರಂಗವಾಗಿ ಕೈನೀಡುವ ಭಿಕ್ಷುಕರಂತಿದ್ದಾರೆ. ಯಾವ ಸಂಕಲ್ಪಗಳನ್ನೂ ಐದು ವರ್ಷಗಳ ಕಾಲ ಈಡೇರಿಸುವ ಪ್ರಯತ್ನದಲ್ಲಿ ಅದು ಸೋತಿದೆ. ಕರ್ನಾಟಕದ ಪ್ರತಿಪಕ್ಷಗಳು ಸರಿಯಿಲ್ಲವೆಂಬ ಒಂದೇ ಕಾರಣದಿಂದ ಇಲ್ಲಿನ ಸರಕಾರ ಉಳಿದಿದೆ. ಚುನಾವಣೆಯಾದ ತಕ್ಷಣ ನಾಯಕರು ಯಾರೆಂದು ನಿರ್ಣಯಿಸಬೇಕಾದದ್ದು ಪಕ್ಷದ ಹೊಣೆ. ಕ್ಷೀಣವಾದ ‘ಹೈಕಮಾಂಡ್’ ಹೆಸರಿಗೆ ಮಾತ್ರವಿದ್ದರೂ ಅದನ್ನು ನೆಪವಾಗಿಸಿ ಇಲ್ಲಿ ನಡೆಯುವ ಅಧಿಕಾರದ ಗೊಂದಲ ಪಕ್ಷದ ಕೊನೆಗೆ ಕಾರಣವಾಗದಿರುವುದು ಅದೇ ಅದೃಷ್ಟ. ಡಿವಿಜಿಯವರು ಈಗ ಇದ್ದಿದ್ದರೆ ಮನ್ನಣೆಯ ದಾಹಕ್ಕಿಂತಲೂ ಅಧಿಕಾರದಾಹವೇ ಹೆಚ್ಚೆಂದು ಹೇಳುತ್ತಿದ್ದರು!

ಇಂತಹ ಪ್ರಭುತ್ವಗಳಡಿ ಪ್ರಜೆಗಳು ನರಳುವುದು, ನರಳಬೇಕಾದ್ದು ಸಹಜ. ಒಂದು ರೀತಿಯಲ್ಲಿ ಅನಿವಾರ್ಯವೂ ಹೌದು. ಏಕೆಂದರೆ ನಮ್ಮಲ್ಲಿ ಬಹಳಷ್ಟು ವಿದ್ಯಾವಂತರೂ ಬುದ್ಧಿವಂತರೂ ಸರಕಾರದ ಕೃಪಾಶ್ರಯಕ್ಕೆ ಮನಸೋತಿದ್ದಾರೆ. ರಾಜಕೀಯಕ್ಕೆ ಹೋಗದೆ ರಾಜಕೀಯದ ಕೃಪೆಯಲ್ಲಿ ಒಂದಷ್ಟು ದಿನಕಳೆಯುವವರಂತೆ ನಮ್ಮ ನಿವೃತ್ತ ವಿದ್ವಾಂಸರಿದ್ದಾರೆ. ಪಿಂಚಣಿಯೊಂದಿಗೆ ಆಡಳಿತದ ಇಕ್ಕಡೆಯಲ್ಲಿ ಶೋಭಿಸುವುದೇ ಅವರ ಬದುಕಾಗಿದೆ. ಆಡಳಿತವನ್ನು ಎಚ್ಚರಿಸುವುದರ ಬದಲು ರಾಜನ ಛತ್ರಚಾಮರಗಳ ಗಾಳಿ ತಮಗೂ ಬೀಸಿದವರಂತೆ ತಲೆಯಾಡಿಸುತ್ತ ನಿದ್ರೆಹೋಗುವ ಪಾಳೇಗಾರರೇ ತುಂಬಿದ್ದಾರೆ. ದೇವರ ಭರ್ಜರಿ ಮೆರವಣಿಗೆಯಲ್ಲಿ ಬಡಕುರಿಯೊಂದನ್ನು ಬಲಿಕೊಡಲು ಎಳೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅದು ಭಗವಂತನಲ್ಲಿ ‘ನನಗೇಕೆ ಈ ಸ್ಥಿತಿ?’ ಎಂದು ಕೇಳಿದಾಗ ಆ ಬಡ ಭಗವಂತ ನಗುತ್ತ ‘ನಿನ್ನನ್ನು ನೋಡುವಾಗ ನನಗೂ ನಿನ್ನನ್ನು ಬಲಿಕೊಡಬೇಕೆಂದು ಅನ್ನಿಸುತ್ತದೆ’ ಎಂದನಂತೆ. ಹಾಗೆ ಹೇಳಿದವನು ಮುಂದುವರಿಸಿ, ‘ಈ ಮೆರವಣಿಗೆ ಮುಗಿದ ಮೇಲೆ ನನ್ನನ್ನೂ ಕತ್ತಲ ಕೋಣೆಯಲ್ಲಿ ಬಂಧಿಸಿಡುತ್ತಾರೆ ಅವರಿಗೆ ಬೇಕಾದಾಗ ಹೊರತರುತ್ತಾರೆ’ ಎಂದು ಹತಾಶನಾಗಿ ಮಾತು ಮುಗಿಸಿದನಂತೆ. ಪ್ರಜೆಗಳ ಪಾಡೂ ಇಷ್ಟೇ. ಚುನಾವಣೆಯ ಕಾಲಕ್ಕೆ ಜನರೇ ದೇವರು; ಆನಂತರ ಕಾಲಕಸ! ಇಂತಹ ಸ್ಥಿತಿಯಲ್ಲಿ ಯಾರಾದರೂ ತಲೆಯೆತ್ತಿದರೆ ಪ್ರಭುತ್ವವೆಂಬ ಹಾವಿನ ಹೆಡೆ. ಶೇಷಶಯನನೆಂಬ ಬಿರುದಿನ ದೇವರೂ ಅದರ ಅಡಿಯಲ್ಲೇ ಇರುವಾಗ ಸಾಮಾನ್ಯರಿಗೆ ಕಷ್ಟದಿಂದ ಪಾರಾಗುವ ಹಾದಿಯೆಲ್ಲಿ?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News

ಹೊಸ ವರುಷ