ಕ್ರಿಕೆಟ್ ಲಕ್ಷ್ಮಿಯ ಕಟಾಕ್ಷ
ಕೊನೆಗೂ ಸಾಬೀತಾದದ್ದು ಇಷ್ಟೇ: ಕ್ರಿಕೆಟ್ ಎಂಬ ಕ್ರೀಡೆ ಕಾಂಚಾಣಕ್ಕೆ ಶರಣಾಗಿದೆ! ಕ್ರಿಕೆಟನ್ನು ಕ್ರಿಕೆಟಿನಂತೆ ನೋಡದೆ ಬಿಳಿ-ಕಪ್ಪು, ಹಿಂದೂ-ಮುಸ್ಲಿಮ್ ಮುಂತಾದ ಅಸಂಬದ್ಧ ರಾಜಕಾರಣದ ಕನ್ನಡಕದಲ್ಲಿ ನೋಡಿದರೆ ಇದೇ ಗತಿ. ಈಚೆಗೆ ಸರ್ವೋಚ್ಚ ನ್ಯಾಯಾಲಯವು ಕ್ರಿಕೆಟ್‌ನ ಸಂದರ್ಭದಲ್ಲಿ ಕ್ರಿಕೆಟನ್ನು ಕ್ರಿಕೆಟ್ ಬಲ್ಲವರೇ ಆಳಬೇಕೆಂದು ಹೇಳಿದ್ದು ಅರ್ಥವಾದರೆ ಎಲ್ಲವೂ ಸರಿಯಾದೀತು. ನಮ್ಮ ಹಿರಿಯ ಕ್ರಿಕೆಟ್ ಆಟಗಾರರೂ ಕ್ರೀಡಾಸ್ಫೂರ್ತಿಯನ್ನು ಮಾತ್ರ ಗಮನಿಸಿದರೆ ದೇಶಕ್ಕೂ ಕ್ಷೇಮ; ಕ್ರಿಕೆಟ್‌ಗೂ ಕ್ಷೇಮ.
ಈಬಾರಿಯ ಟಿ-20 ವಿಶ್ವಕಪ್ ಬಹುಪಾಲು ಸದ್ದು ಮಾಡುತ್ತಿರುವುದು ಕ್ರಿಕೆಟಿಗೆ ಸಲ್ಲದ ಒಲ್ಲದ ಕಾರಣಗಳಿಂದಾಗಿ. ಕ್ರಿಕೆಟ್ ಸ್ಕೋರ್ ನೋಡುವುದಕ್ಕಿಂತ ಹೆಚ್ಚಾಗಿ ಅದರ ರಾಜಕೀಯವು ಆಕರ್ಷಕವಾಗುತ್ತಿದೆ. ಪತ್ರಿಕೆಗಳಲ್ಲಿ ಕೊನೆಯ ಪುಟಕ್ಕಿಂತ ಅದು ಮೊದಲ ಪುಟಕ್ಕೆ ವರ್ಗಾವಣೆಗೊಳ್ಳುವುದು ಪ್ರಸಾರ ಸಂಖ್ಯೆ ಹೆಚ್ಚಾಗಲು ನೆರವಾಗಬಹುದೇನೋ?
ಕ್ರಿಕೆಟ್ ಸಭ್ಯರ ಆಟವೆಂದು ಪ್ರಸಿದ್ಧಿಯಾಗಿತ್ತು. ಕಾಮನ್ವೆಲ್ತ್ ಅಂದರೆ ಬ್ರಿಟಿಷ್ ವಸಾಹತುಗಳಾಗಿದ್ದ ದೇಶಗಳಲ್ಲಷ್ಟೇ ಅದು ಜನಪ್ರಿಯವಾಗಿತ್ತು. ಕಳೆದ ಒಂದು ಶತಮಾನಕ್ಕೂ ಹೆಚ್ಚು ಅದು ಬಿಳಿಯ ಉಡುಗೆಯ ಕ್ರಿಕೆಟಿಗರಿಂದ ಶೋಭಿಸುತ್ತಿತ್ತು. ಅವರನ್ನು ಗುರುತಿಸಬಹುದಿತ್ತು. ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ಮರೆಮಾಚದಂತಹ, ನಾಚದಂತಹ ಸೀಮಿತ ಅಂಗರಕ್ಷಣೆಯ ಪ್ಯಾಡುಗಳಿಂದ ಕ್ರಿಕೆಟಿನ ಆಟದ ಗೌರವ, ಮಾನ ಉಳಿದಿತ್ತು. ಕ್ರಿಕೆಟಿನಲ್ಲಿ ಚೆಂಡು ತಗಲಿ ನೋವಾಗುವುದು, ಗಾಯಗೊಳ್ಳುವುದು ಇದ್ದರೂ ಅದು ಇತರ ಕ್ರೀಡೆಗಳಲ್ಲಿನ ಅನಿವಾರ್ಯಗಳಂತೆ ಆಟಗಾರರು ಸಹಿಸಿಕೊಳ್ಳುವ ಒಂದು ವಿದ್ಯಮಾನವಾಗಿತ್ತು. ಕ್ರಿಕೆಟ್ ಜಗತ್ತಿನ ಎಲ್ಲೆಡೆ ಇವನ್ನು ಸಹಜವೆಂದೇ ಸ್ವೀಕರಿಸಬಹುದಾಗಿತ್ತು. ಆ ಕಾಲದ ಎಲ್ಲ ಕ್ರಿಕೆಟಿಗರೂ ವೇಗದ ಬೌಲಿಂಗನ್ನು ಎದುರಿಸಲು ತಯಾರಿದ್ದೇ ಮೈದಾನಕ್ಕೆೆ ಇಳಿಯಬೇಕಿತ್ತು. ಅಲನ್ ಬ್ರಾಡ್‌ಮನ್‌ರಿಂದ ಮೊದಲ್ಗೊಂಡು ವಿವಿಯನ್ ರಿಚರ್ಡ್ಸ್, ಗ್ಯಾರಿ ಸೋಬರ್ಸ್ ಮುಂತಾದ ವಿಶ್ವ ಶ್ರೇಷ್ಠ ದಾಂಡಿಗರು ಕ್ರಿಕೆಟಿಗೆ ಮೆರುಗು ತಂದರು. ನಾರಿಕಂಟ್ರಾಕ್ಟರ್ ಚೆಂಡಿನ ವೇಗದ ಏಟಿಗೆ ಗಾಯಗೊಂಡದ್ದು ಐತಿಹಾಸಿಕ ಘಟನೆಯಾಗಿತ್ತು. ಯಾರೂ ಬೌಲರ್‌ನ ಮೇಲೆ ಕೊಲೆ ಪ್ರಯತ್ನದ ಪ್ರಕರಣವನ್ನು ದಾಖಲೆಮಾಡಿರಲಿಲ್ಲ. ಸುನಿಲ್ ಗವಾಸ್ಕರ್ ವೆಸ್ಟ್ ಇಂಡೀಸ್‌ನ ವೇಗದ ಬೌಲರುಗಳನ್ನು ತನ್ನ ಅಸಲಿ ರೂಪದಲ್ಲೇ ಎದುರಿಸಿದ್ದು ಭಾರತದ ಕ್ರಿಕೆಟ್ ಪ್ರೇಮಿಗಳಿಗೆ, ಅಭಿಮಾನಿಗಳಿಗೆ ಹೆಮ್ಮೆಯ ಸಂಗತಿಯಾಗಿತ್ತು.
ಆಧುನಿಕತೆ ಬಂದಂತೆಲ್ಲ ಕ್ರಿಕೆಟಿನ ವಿನ್ಯಾಸ ಬದಲಾಯಿತು. ಬ್ಯಾಟ್ ಮಾಡಲು ಒಂದೊಂದೇ ರಕ್ಷಣಾ ಉಪಕರಣಗಳು ಹೊರಬಂದವು. ಯಾವುದೇ ಭಯವಿಲ್ಲದೆ ಯಾರಿಗೂ ಗುರುತೂ ಸಿಗದೆ ಕ್ರಿಕೆಟ್ ಆಡಬಹುದಾಯಿತು. ಈಗಂತೂ ಅನ್ಯಗ್ರಹಯಾನಿಗಳಂತೆ ಕ್ರಿಕೆಟ್ ಬ್ಯಾಟುದಾರರು ಮತ್ತು ವಿಕೆಟ್ ಕೀಪರ್ ಕಾಣಿಸಿದರೆ ವಿಚಿತ್ರವೇನಲ್ಲ. ಬೌಲಿಂಗ್ ಮತ್ತು ಫೀಲ್ಡಿಂಗಿನ ಆಟಗಾರರಷ್ಟೇ ಮನುಷ್ಯಸಹಜ ರೂಪದಲ್ಲಿರುತ್ತಾರೆ.
ಕ್ರಿಕೆಟ್ ಬಡ ಅಥವಾ ಮಧ್ಯಮ ವರ್ಗದ ಮತ್ತು ಅಷ್ಟೇನೂ ಶಿಕ್ಷಣವನ್ನು ಬಯಸದ ಆಟವಾಗಿತ್ತು. ಹಳ್ಳಿಗಳಲ್ಲಿ ಮೈದಾನವೇ ಬೇಕಿರಲಿಲ್ಲ; ಬೆಳೆಯಿಲ್ಲದಾಗ ಒಣಗದ್ದೆಯಲ್ಲೂ ಕ್ರಿಕೆಟ್ ಆಡಬಹುದಾದ ಕ್ರೀಡೆಯಾಗಿತ್ತು. ಉಡುಪುತೊಡುಪುಗಳಿಗೆ ಅಷ್ಟೇನೂ ಪ್ರಾಮುಖ್ಯ ನೀಡಲಾಗುತ್ತಿರಲಿಲ್ಲ. ಪಟ್ಟಣ, ನಗರಗಳಲ್ಲಿ ರಸ್ತೆ, ಗಲ್ಲಿಗಳಲ್ಲೂ ಕ್ರಿಕೆಟ್ ಆಡಬಹುದಾಗಿತ್ತು. ಅಂಥವರಲ್ಲಿ ಅನೇಕರು ರಾಷ್ಟ್ರ, ಅಂತರ್‌ರಾಷ್ಟ್ರೀಯ ಖ್ಯಾತಿಗಳಿಸಿದ್ದರು. ಸರಳತೆ ಸಹಜವಾಗಿತ್ತು; ಅಥವಾ ಅನಿವಾರ್ಯವಾಗಿತ್ತು.
ಆನಂತರ ಒಂದು ದಿನದ, ಅಂದರೆ ಸೀಮಿತ ಓವರುಗಳ ಕ್ರಿಕೆಟ್ ಆರಂಭವಾಯಿತು. 60, ಅಲ್ಲಿಂದ 50 ಮತ್ತು ಇವುಗಳೊಂದಿಗೇ 20 ಓವರುಗಳ ಕ್ರಿಕೆಟ್ ಜನಪ್ರಿಯವಾಯಿತು. ಈಗ ಒಂದು ರೀತಿಯಲ್ಲಿ ಈ ಕ್ರಿಕೆಟ್ (ಚೆಂಡನ್ನು) ಹೊಡಿ ಬಡಿ ಕ್ರಿಕೆಟ್ ಆಗಿದೆ. ಟೆಸ್ಟ್ ಪಂದ್ಯವು ಉಳಿಯಲು ಪ್ರಯತ್ನಿಸುತ್ತಿದ್ದರೆ 60 ಓವರುಗಳ ಕ್ರಿಕೆಟ್ ಈಗಿಲ್ಲದಿದ್ದರೂ 50 ಓವರುಗಳ ಕ್ರಿಕೆಟ್ ತನ್ನ ಯವ್ವನವನ್ನು ದಾಟಿ ಬಳಲುತ್ತಿದ್ದರೂ ಇನ್ನೂ ಚಾಲ್ತಿಯಲ್ಲಿದೆ. ಆದರೆ 20 ಓವರಿನ ಕ್ರಿಕೆಟ್ ಉಳಿದೆಲ್ಲ ತರಾವರಿಯ ಕ್ರಿಕೆಟನ್ನು ಆಪೋಶನ ತೆಗೆದುಕೊಳ್ಳಲು ಸಿದ್ಧವಾಗಿದೆ. ಹೊಸ ತಲೆಮಾರಿನವರಿಗೆ ಕ್ರಿಕೆಟಿಗೆ ಹೆಚ್ಚು ಸಮಯ ನೀಡಲು ವ್ಯವಧಾನವಿಲ್ಲದಿರುವುದೂ ಇದಕ್ಕೆ ಕಾರಣವಿರಬಹುದು.
ಇರಲಿ. ಆಯಾಯ ಕಾಲಕಾರಣಕ್ಕೆ ತಲೆಬಾಗುವುದು ಮತ್ತು ಪ್ರಯೋಗಗಳೆಲ್ಲ ಸಂಪ್ರದಾಯವಾಗುವುದು ಲೋಕರೂಢಿ. ಮುಂದೆ ಯಾವ ಹೊಸತಳಿ ಬರಬಹುದೋ ಹೇಳಲಾಗದು.
ಕ್ರಿಕಟಿನ ವ್ಯವಸ್ಥೆ ಹಣಕಾಸನ್ನು ಬೇಡುತ್ತದೆ. ಆದ್ದರಿಂದ ಕ್ರಿಕೆಟ್ ಆಡಳಿತದಲ್ಲಿ ಉದ್ಯಮಿಗಳು ಪ್ರವೇಶಿಸಿದರು. ಆದರೆ ಪಾರಮ್ಯ ಕ್ರಿಕೆಟಿಗರದ್ದೇ ಆಗಿತ್ತು. ದಾನಿಗಳು ಹಣಕೊಟ್ಟರೂ ಕ್ರಿಕೆಟ್ ತಾವು ಹೇಳಿದಂತೆ ಕುಣಿಯಬೇಕೆಂದು ಬಯಸಿದವರು ಕಡಿಮೆ. ಕೆರ್ರಿ ಪ್ಯಾಕರ್ ಇದನ್ನು ಹಣದ ಉದ್ಯಮವಾಗಿ ಪರಿವರ್ತಿಸಿದ ಮೊದಲ ಮಹನೀಯ. ಅದೊಂದು ದೊಡ್ಡ ವಿವಾದ ಸೃಷ್ಟಿಸಿದರೂ ಅನಂತರ ಅದು ಸಭ್ಯ ಮುಖವಾಡದಿಂದ, ಹಿಂಬಾಗಿಲಿನಿಂದ, ಕಳೆದ ಕೆಲವು ವರುಷಗಳಿಂದ ಪ್ರವೇಶಿಸಿದ್ದು ಈಗ ರಹಸ್ಯವೇನಲ್ಲ. ದುರದೃಷ್ಟವಶಾತ್ ಹಣವೇ ಕ್ರಿಕೆಟಿನ ಕಾರ್ಯಕಾರಣವಾಗುತ್ತಿದೆ. ಇದಕ್ಕೆ ಯಾವ ಲೆಕ್ಕಾಚಾರವೂ ಬೇಕಿಲ್ಲ. ಹೆಚ್ಚು ಕ್ರಿಕೆಟ್ ಹುಚ್ಚರಿರುವ ದೇಶಗಳು, ಪರಿಣಾಮವಾಗಿ ಹೆಚ್ಚು ಹಣ ತರುವ, ನೀಡುವ ಕ್ರಿಕೆಟ್ ಮಂಡಳಿಗಳು ವಿಶ್ವಸಂಸ್ಥೆಯ ಖಾಯಂ ಸದಸ್ಯತ್ವವನ್ನು ಹೊಂದಿದ ದೇಶಗಳಂತೆ ವೀಟೋ ಬಳಸಬಲ್ಲವು. ಒಂದುಕಾಲದಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯ, ವೆಸ್ಟ್ ಇಂಡೀಸ್ ಮುಂತಾದ ಕ್ರಿಕೆಟಿನಲ್ಲಿ ಪ್ರಬಲವಾಗಿದ್ದ ದೇಶಗಳು ಕ್ರಿಕೆಟಿನ ಆಡಳಿತದ ಸೂತ್ರವನ್ನು ಹಿಡಿದಿದ್ದರೆ ಈಗ ಭಾರತ, ಪಾಕಿಸ್ತಾನ, ಶ್ರೀಲಂಕಾಗಳು ಕ್ರಿಕೆಟಿನ ಆಗುಹೋಗುಗಳನ್ನು ನಿಯಂತ್ರಿಸಬಲ್ಲವು. ಈಚೆಗೆ ಬಾಂಗ್ಲಾದೇಶವೂ ಈ ನಿಯಂತ್ರಣದಲ್ಲಿ ಪಾಲುಹೊಂದಿದೆ. ಹಣ ಸಂಗ್ರಹವೇ ಕ್ರಿಕೆಟಿನ ನೀತಿನಿಯಮಗಳನ್ನು ನಿಯಂತ್ರಿಸುವ ಕೋಶಾಧಿಕಾರವಾಗಿದೆ.
ಇದರ ಜೊತೆಗೆ ಕ್ರಿಕೆಟ್ ಇತರ ಕ್ರೀಡೆಗಳಿಗೆ ಹೋಲಿಸಿದರೆ ಅಸಮತೋಲನವೆನ್ನುವಷ್ಟು ಜನಪ್ರಿಯತೆಯನ್ನು ಕನಿಷ್ಠಪಕ್ಷ ಏಶ್ಯದಲ್ಲಿ ಪಡೆಯುತ್ತಿದೆ. ಕ್ರಿಕೆಟಿಗರಿಗೆ ರೂಪದರ್ಶನ, ಜಾಹೀರಾತು ಇವೆಲ್ಲ ಅಪರಿಚಿತ ಕ್ಷೇತ್ರವಾಗಿತ್ತು. ಈಗ ಅವರು ಯಾವ ಕ್ರೀಡಾ ಸ್ಫೂರ್ತಿಯನ್ನೂ ನೀಡದ ಜಾಹೀರಾತಿನಲ್ಲಿ ಭಾಗಿಯಾಗುತ್ತಿದ್ದಾರೆ. ಹೊಸ ಪೀಳಿಗೆಯು ಕ್ರಿಕೆಟಿನ ಹಿಂದೆ ಬಿದ್ದಿರುವುದು ಕ್ರೀಡಾ ಮನೋಭಾವದಿಂದಲೋ ಹಣದಾಸೆಯಿಂದಲೋ ಎಂಬುದು ಈಗ ವಿವಾದಾಸ್ಪದವೂ ಅಲ್ಲ; ಚರ್ಚಾರ್ಹವೂ ಅಲ್ಲ. ಕುರುಡು ಕಾಂಚಾಣ ಕುಣಿಯುತ್ತಲಿದೆ.
ಹಣವಿದ್ದಲ್ಲಿ ರಾಜಕೀಯ ನೊಣಗಳು ಬಂದು ಕೂರುವುದು ಆಧುನಿಕ ರಾಜಕಾರಣದ ಮುಖ್ಯ ಮುಖ. ರಾಜಕಾರಣದ ಭ್ರಷ್ಟತೆಯನ್ನು ಎಲ್ಲಿ ಸಾಧ್ಯವೋ ಅಲ್ಲೆಲ್ಲ ಅಂಟಿಸುವುದು ಈ ಪರೋಪಜೀವಿಗಳ ಕಾರ್ಯ.
ಇದು ಎಷ್ಟರ ಮಟ್ಟಿಗೆ ಬಂದಿದೆಯೆಂದರೆ ಬಿಸಿಸಿಐಗೆ ದೇಶದ ಗೃಹಮಂತ್ರಿ ಮಗನೆಂಬ ಒಂದೇ ಕಾರಣಕ್ಕೆ ವ್ಯಕ್ತಿಯೊಬ್ಬ ಅಧ್ಯಕ್ಷನಾಗಿ ಬರುತ್ತಾನೆ. ಇದನ್ನು ವಿಶ್ವಾದ್ಯಂತ ಕ್ರಿಕೆಟ್ ಮಂಡಳಿಗಳು ಟೀಕಿಸಬಹುದಾಗಿತ್ತು. ಆದರೆ ಹಣವು ಯಾರ ಬಾಯನ್ನೂ ಮುಚ್ಚಿಸಬಲ್ಲುದು. ಇದು ಎಲ್ಲ ಕ್ರಿಕೆಟ್ ದೇಶಗಳಿಗೆ ಅನ್ವಯವಾಗುವಂತೆ ಅವೆಲ್ಲವೂ ಈ ರಾಜಕೀಯ ಅಧಿಕಾರವನ್ನು ಒಪ್ಪಿಕೊಂಡವು ಮಾತ್ರವಲ್ಲ, ಭಾರತ ಕ್ರಿಕೆಟ್ ಮಂಡಳಿಯ ಅಧ್ಯಕ್ಷನನ್ನು ವಿಶ್ವಕ್ರಿಕೆಟ್ ಮಂಡಳಿಯ ಅಧ್ಯಕ್ಷನನ್ನಾಗಿಸಿದವು.
ಈ ಪೈಕಿ ಕ್ರಿಕೆಟ್ ಪಂದ್ಯಗಳಲ್ಲೇ ಸುವರ್ಣ ಹೋರಾಟವೆಂದರೆ ಭಾರತ-ಪಾಕಿಸ್ತಾನಗಳ ನಡುವಣ ಪಂದ್ಯಗಳು. ಹಿಂದೆ ಆಸ್ಟ್ರೇಲಿಯ-ಇಂಗ್ಲೆಂಡ್ ನಡುವಣ ಆಷಸ್ ಸೀರಿಸ್ ಎಂದರೆ ರೋಚಕವೆಂದಿತ್ತು. ಕ್ರಿಕೆಟ್ ಇತಿಹಾಸದಲ್ಲೇ ಬಾಡಿಲೈನ್ ಬೌಲಿಂಗ್ ಹೆಸರಿಗೆ ಬಂದದ್ದು ಮತ್ತು ಕ್ರಿಕೆಟಿಗೆ ಸ್ಪರ್ಧೆಯ ಬದಲಿಗೆ ಹೊಸ ವೈರದ ದಾಖಲೆಯನ್ನು ಸೇರಿಸಿದ್ದು ಈ ಸೀರಿಸಿನಲ್ಲೇ. ಆದರೆ ಭಾರತ-ಪಾಕಿಸ್ತಾನದ ನಡುವಣ ಸ್ಪರ್ಧೆಯು ರಾಜಕೀಯ ಮಲಿನತೆಯನ್ನು ಹೊದ್ದು ಅದು ಸ್ಪರ್ಧೆಯ ಬದಲು ಯುದ್ಧವಾಗಿರುವುದು ಒಂದು ಸಾಂಸ್ಕೃತಿಕ ದುರಂತ. ಆದರೆ ಭಾರತಕ್ಕೆ ಇದು ಹೊಸದಲ್ಲ. ಮಹಾಭಾರತದ ಕೌರವ-ಪಾಂಡವರ ನಡುವಣ ಶಸ್ತ್ರಾಸ್ತ್ರ ಸ್ಪರ್ಧೆಯೂ ಹೀಗೆಯೇ ಮಾತ್ಸರ್ಯದ, ವೈರದ ಮೊಳಕೆಯಾಗಿ ಕುರುಕ್ಷೇತ್ರಕ್ಕೆ ಕಾರಣವಾದದ್ದು ಇತಿಹಾಸವಲ್ಲದಿದ್ದರೂ ಬಹುಪಾಲು ಭಾರತೀಯರು ನಂಬುವ ಪುರಾಣ. (ಪುರಾಣಗಳಿಗೆ ಇತಿಹಾಸವನ್ನೂ ವಾಸ್ತವತೆಯನ್ನು ಕಲ್ಪಿಸುವುದರಲ್ಲಿ ಭಾರತೀಯರು ಪರಿಣತರು!)
ಭಾರತ-ಪಾಕಿಸ್ತಾನದ ನಡುವಣ ರಾಜಕೀಯ ವೈರವು ವಿಶ್ವಪ್ರಸಿದ್ಧ. ಇದಕ್ಕೆ ಕ್ರೀಡೆಯನ್ನು ಮತೀಯ ಸಂಘಟನೆಗಳು ಮತೀಯ/ಮತಾಂಧ ಆಡಳಿತವು ಜೋಡಿಸಿತು. ಕೆಲವೇ ಸಮಯದ ಹಿಂದೆ ಭಾರತ-ಪಾಕಿಸ್ತಾನದ ನಡುವಣ ಪಂದ್ಯಗಳನ್ನು ದುಬೈಯಂತಹ ಅಲಿಪ್ತ ಕ್ಷೇತ್ರದಲ್ಲಿ ಆಡಿಸಲಾಯಿತು. ಆನಂತರ ಇತ್ತೀಚೆಗೆ ಭಾರತದ ಕ್ರಿಕೆಟ್ ತಂಡವು ರಾಜಕೀಯ ಕಾರಣವನ್ನು ನೀಡಿ ಪಾಕಿಸ್ತಾನದ ಕ್ರಿಕೆಟ್ ತಂಡದೊಂದಿಗೆ ಕ್ರಿಕೆಟ್ ಆಡಿತಾದರೂ ಆ ತಂಡದ ಆಟಗಾರರೊಂದಿಗೆ ಕೈಕುಲುವುದಕ್ಕೆ ನಿರಾಕರಿಸಿತು. ಇಷ್ಟಕ್ಕೂ ಅವರೊಂದಿಗೆ ಆಡಿದರೇಕೆ ಎಂಬುದಕ್ಕೆ ನಮ್ಮ ರಾಜಕೀಯ ಪರಿಣತರು ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಮದುವೆಯಾದರೂ ಪ್ರಸ್ತವನ್ನು ನಿರಾಕರಿಸಿದ ಖಾಸಗಿತನವನ್ನು ಸಾರ್ವಜನಿಕ ಮೈದಾನದಲ್ಲಿ ಎಳೆತಂದು ಪ್ರದರ್ಶಿಸಿತು. (ವೈರದ ಶಿಶುಗಳು ಹುಟ್ಟುತ್ತಾವೆಂಬ ಭಯವಿದ್ದರೆ ಅದಕ್ಕೆ ಬೇಕಾದ ರೀತಿಯ ರಕ್ಷಕ ಕವಚಗಳನ್ನು ಬಳಸಿ ಕೈಕುಲುಕಬಹುದಿತ್ತೆಂದು ಹಾಸ್ಯಮಾಡಿದವರೂ ಇದ್ದಾರೆ!)
ಕಳೆದ ಕೆಲವು ವರ್ಷಗಳಿಂದ ಭಾರತದ ಐಪಿಎಲ್ ಎಂಬ ಕ್ರಿಕೆಟ್ ಜೂಜು ದೇಶದೇಶಗಳ ನಡುವಣ ಅಧಿಕೃತ ಕ್ರಿಕೆಟ್‌ಗಿಂತಲೂ ಹೆಚ್ಚು ಅಧಿಕೃತತೆಯನ್ನು ಪಡೆದುಕೊಂಡಿದೆ. ದೇಶದ ಹತ್ತಾರು ಉದ್ಯಮಪತಿಗಳು ವಿವಿಧ ತಂಡಗಳ ಸಾರಥ್ಯವನ್ನು, ಮಾಲಕತ್ವವನ್ನು ಹೊಂದಿದ್ದಾರೆ. ಲಲಿತ್ ಮೋದಿ ಎಂಬ ದೇಶಭ್ರಷ್ಟ ಇದರ ಹರಿಕಾರ. ಇದರಲ್ಲಿ ಎಲ್ಲ ದೇಶದ ಆಟಗಾರರೂ ಹರಾಜಿನ ಮೂಲಕ ವಿವಿಧ ತಂಡಗಳಿಗೆ ಆಯ್ಕೆಯಾಗುತ್ತಿದ್ದರು. ಇದು ಪ್ರತಿಭಾ ಪ್ರದರ್ಶನವಲ್ಲ; ಬದಲಿಗೆ ಕೋಳಿಅಂಕದಂತೆ, ಕುದುರೆ ರೇಸಿನಂತೆ, ಒಂದರ್ಥದಲ್ಲಿ ಕ್ಯಾಸಿನೋ ಮನರಂಜನೆ.
ಇತ್ತೀಚೆಗೆ ಪಾಕಿಸ್ತಾನ ಮಾತ್ರವಲ್ಲ, ನೆರೆಯ ಎಲ್ಲ ದೇಶಗಳೊಂದಿಗೂ ಈ ಭಾರತದ ಸಂಬಂಧವು ಕಲಕಿದೆ. ಕ್ರಿಕೆಟ್‌ನ ಮಟ್ಟಿಗೆ ಹೇಳುವುದಾದರೆ ಈ ಪೈಕಿ ಬಾಂಗ್ಲಾದೇಶವು ಮಹತ್ವದ ನೆರೆ. ಆದರೆ ಕಳೆದ ಒಂದುವರ್ಷಕ್ಕೂ ಮಿಕ್ಕಿ ಸಮಯದಿಂದ ಅದರೊಂದಿಗೆ ಭಾರತದ ಸಂಬಂಧವು ಹಳಸಿದೆ. 2026ರ ವಿಶ್ವ ಕಪ್ ಸಾರಥ್ಯವನ್ನು ಭಾರತ-ಶ್ರೀಲಂಕಾಗಳು ವಹಿಸಿದ ಈ ಹಂತದಲ್ಲಿ ಭಾರತದ ಕ್ರಿಕೆಟ್ ಮಂಡಳಿಯು ಬಾಂಗ್ಲಾದೇಶದ ಆಟಗಾರನೊಬ್ಬನನ್ನು ಹೊರಹಾಕಲು ಐಪಿಎಲ್ ತಂಡವೊಂದಕ್ಕೆ ಆದೇಶಿಸಿದ್ದು ಎಲ್ಲ ಸಾಮರಸ್ಯವನ್ನೂ ಕೆಡಿಸಿತು; ಪಂದ್ಯದ ಹವೆಯನ್ನು ಹದಗೆಡಿಸಿತು. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶವು ತಾನು ಭಾರತದಲ್ಲಿ ಆಡಲು ನಿರಾಕರಿಸಿತು. ಪ್ರತಿಯಾಗಿ ಪಾಕಿಸ್ತಾನವು ಬಾಂಗ್ಲಾದೇಶಕ್ಕೆ ನೆರವಾಗಿ ತಾನು ಭಾರತದೊಂದಿಗೆ ಆಡುವುದಿಲ್ಲವೆಂದು ನಿರಾಕರಿಸಿತು. ಬಾಂಗ್ಲಾದೇಶಕ್ಕೆ ಬದಲಾಗಿ ಇನ್ನೊಂದು ಪುಟಗೋಸಿ ದೇಶದ ತಂಡಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ವರನಲ್ಲದಿದ್ದರೆ ಇನ್ನೊಬ್ಬ; ಅಂತೂ ಮದುವೆ ಗ್ಯಾರಂಟಿ!
ಬಾಂಗ್ಲಾದೇಶವೊಂದೇ ಅಗಿರುತ್ತಿದ್ದರೆ ಇದೊಂದು ಸಾಮಾನ್ಯ ನಿರಾಕರಣೆಯಾಗುತ್ತಿತ್ತು. ಆದರೆ ಭಾರತ-ಪಾಕಿಸ್ತಾನದ ನಡುವಣ ಪಂದ್ಯವೆಂದರೆ ಅದು ಕರ್ಣಾರ್ಜುನ ಯುದ್ಧ; ರಾಮರಾವಣರ ಯುದ್ಧ. ಇಕ್ಕಡೆಗಳಲ್ಲೂ ದೇವದೇವತೆಗಳು ನೋಡುವ ಪಂದ್ಯ. ಭಾರತದ ಕ್ರಿಕೆಟ್ ಹುಚ್ಚು ಕಾರಣವಾಗಿ ಅತೀ ಹೆಚ್ಚು ಹಣವನ್ನು ತರುವ ಪಂದ್ಯ. ಇದನ್ನು ಕಳೆದುಕೊಳ್ಳಲು ಧನಾಗ್ರಹಿ ಕ್ರಿಕೆಟ್ ಮಂಡಳಿ ಸಿದ್ಧವಿರಲಿಲ್ಲ. ಪರಿಣಾಮವಾಗಿ ಟ್ರಂಪ್ ರಾಜಕೀಯಕ್ಕಿಂತಲೂ ತೀಕ್ಷ್ಣವಾಗಿ ಸಂಧಾನಪ್ರಕ್ರಿಯೆಗಳು ಆರಂಭವಾದವು. ಆರಂಭದಲ್ಲಿ ಕಠಿನ ಕಪಿಮುಷ್ಟಿಯನ್ನು ಹಿಡಿದಿದ್ದ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ ತನ್ನ ಪಟ್ಟನ್ನು ಸಡಿಲಿಸಿ ಮುಕ್ತವಾತಾವರಣವನ್ನು ಸೃಷ್ಟಿಸಿತು.
ಈಗ ಪಂದ್ಯ ನಡೆಯಲಿದೆ. ಬಾಂಗ್ಲಾದೇಶಕ್ಕೆ ವಿಧಿಸಿದ್ದ ಎಲ್ಲ ದಂಡ-ದಂಡನೆಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಪಾಕಿಸ್ತಾನವು ಇನ್ನಷ್ಟು ಬಿಗಿಯಾಗಿರುತ್ತಿದ್ದರೆ ಬಾಂಗ್ಲಾ ದೇಶದ ಐಪಿಎಲ್ ಆಟಗಾರನಿಗೂ ಬಹಿಷ್ಕಾರದಿಂದ ಬಿಡುಗಡೆಯಾಗುತ್ತಿತ್ತು.
ಕೊನೆಗೂ ಸಾಬೀತಾದದ್ದು ಇಷ್ಟೇ: ಕ್ರಿಕೆಟ್ ಎಂಬ ಕ್ರೀಡೆ ಕಾಂಚಾಣಕ್ಕೆ ಶರಣಾಗಿದೆ! ಕ್ರಿಕೆಟನ್ನು ಕ್ರಿಕೆಟಿನಂತೆ ನೋಡದೆ ಬಿಳಿ-ಕಪ್ಪು, ಹಿಂದೂ-ಮುಸ್ಲಿಮ್ ಮುಂತಾದ ಅಸಂಬದ್ಧ ರಾಜಕಾರಣದ ಕನ್ನಡಕದಲ್ಲಿ ನೋಡಿದರೆ ಇದೇ ಗತಿ. ಈಚೆಗೆ ಸರ್ವೋಚ್ಚ ನ್ಯಾಯಾಲಯವು ಕ್ರಿಕೆಟ್‌ನ ಸಂದರ್ಭದಲ್ಲಿ ಕ್ರಿಕೆಟನ್ನು ಕ್ರಿಕೆಟ್ ಬಲ್ಲವರೇ ಆಳಬೇಕೆಂದು ಹೇಳಿದ್ದು ಅರ್ಥವಾದರೆ ಎಲ್ಲವೂ ಸರಿಯಾದೀತು. ನಮ್ಮ ಹಿರಿಯ ಕ್ರಿಕೆಟ್ ಆಟಗಾರರೂ ಕ್ರೀಡಾಸ್ಫೂರ್ತಿಯನ್ನು ಮಾತ್ರ ಗಮನಿಸಿದರೆ ದೇಶಕ್ಕೂ ಕ್ಷೇಮ; ಕ್ರಿಕೆಟ್‌ಗೂ ಕ್ಷೇಮ. ಭಾರತ-ಅಮೆರಿಕ ವ್ಯವಹಾರದಂತೆ ಇಲ್ಲಿ ಪ್ರತ್ಯಕ್ಷವಾಗಿ ಕಾಣಿಸದ ‘ಟ್ರಂಪ್-ಮೋದಿ’ಗಳು ವ್ಯವಹರಿಸಿವೆ. ಎಲ್ಲ ಕ್ರೀಡೆಗಳಲ್ಲಿ ಸದ್ದುಮಾಡುವ ಧನಕ್ರೀಡೆಗೇ ಸಿಂಹಾಸನ! ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರೀಡಾಮನೋಭಾವದ ರಾಜಕೀಯಕ್ಕೆ ಗೆಲುವೋ ಅಥವಾ ರಾಜಕೀಯ ಮನೋಭಾವದ ಕ್ರೀಡೆಗೆ ಗೆಲುವೋ ಎಂಬುದನ್ನು ಕಾದು ನೋಡೋಣ.