×
Ad

ಸಾರಿಗೆ ಇಲಾಖೆ ನಿರಾಕ್ಷೇಪಣಾ ಪತ್ರ (ಸಿಸಿ) ನೀಡದಿದ್ದರೆ ಹೋರಾಟ: ಕರವೇ ಎಚ್ಚರಿಕೆ

Update: 2026-01-29 19:09 IST

ಉಡುಪಿ, ಜ.29: ಜಿಲ್ಲೆಯ ಆರ್‌ಟಿಓ ಕಚೇರಿಯಲ್ಲಿ ಸುಮಾರು 8 ತಿಂಗಳಿನಿಂದ ವಾಹನಗಳ ಮಾಲಕರಿಗೆ ನೀಡದೇ ಸತಾಯಿಸುತ್ತಿರುವ ವಾಹನದ ನಿರಾಕ್ಷೇಪಣಾ ಪತ್ರವನ್ನು ಇನ್ನು 15 ದಿನದಲ್ಲಿ ನೀಡದೇ ಇದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಯ ಉಡುಪಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಅನ್ಸಾರ್ ಅಹಮ್ಮದ್ ಎಚ್ಚರಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸುಮಾರು ಎಂಟು ತಿಂಗಳಿನಿಂದ ಸಾವಿರಕ್ಕೂ ಅಧಿಕ ನಿರಾಕ್ಷೇಪಣಾ ಪತ್ರದ ಕಡತಗಳು ವಿಲೇವಾರಿಯಾಗದೆ ಉಳಿದು ಕೊಂಡಿದೆ. 15 ದಿನಗಳೊಳಗೆ ಬಾಕಿ ಇರುವ ಎಲ್ಲಾ ನಿರಾಕ್ಷೇಪಣಾ ಪತ್ರದ ಕಡತಗಳನ್ನು ವಿಲೇವಾರಿ ಮಾಡಿ ಕೊಡಬೇಕು. ಇಲ್ಲದಿದ್ದರೆ ಸಂಘಟನೆಯಿಂದ ಮಣಿಪಾಲದಲ್ಲಿರುವ ಆರ್‌ಟಿಓ ಕಚೇರಿಯ ಮುಂದೆ ಅನಿರ್ಧಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದವರು ತಿಳಿಸಿದರು.

ಈ ಸಮಸ್ಯೆಗೆ ಅಧಿಕಾರಿಗಳು 2020ಕ್ಕಿಂತ ಮೊದಲಿನ ವಾಹನದ ಆರ್.ಸಿ. ಪತ್ರದಲ್ಲಿ ವೀಲ್ ಬೆಸ್ ಹಾಗೂ ಎಚ್.ಪಿ ಅನ್ನು ನಮೂದಿಸಿಲ್ಲ. ಹೀಗಾಗಿ ನಿರಾಕ್ಷೇಪಣಾ ಪತ್ರ ನೀಡಲು ಬರುವುದಿಲ್ಲ ಎಂಬ ಕಾರಣ ನೀಡುತ್ತಿದ್ದಾರೆ. 2020ನೇ ಇಸವಿಗಿಂತ ಮೊದಲಿನ ವಾಹನಗಳ ಆರ್.ಸಿ. ಪತ್ರದಲ್ಲಿ ಬಿಟ್ಟು ಹೋಗಿರುವ ವಿಚಾರಗಳನ್ನು ನಮೂದಿಸುವ ಜವಾಬ್ದಾರಿ ಸರಕಾರದ್ದು ಅಥವಾ ಸಂಬಂಧಪಟ್ಟ ಇಲಾಖೆಯದ್ದು. ಇವರ ಬೇಜವಾಬ್ದಾರಿಯಿಂದ ಆಗಿರುವ ಲೋಪ ದೋಷಕ್ಕೆ ವಾಹನ ಮಾಲಕರನ್ನು ಬಲಿಪಶು ಮಾಡುವುದು ಎಷ್ಟು ಸರಿ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳಗಳಲ್ಲಿ 580 ರೂ. ಶುಲ್ಕ ಕಟ್ಟಿಸಿಕೊಂಡು ಆರ್‌ಟಿಓ ನಿರೀಕ್ಷಕರು ತಮ್ಮ ಮೊಬೈಲ್ ಆ್ಯಪ್‌ನಲ್ಲಿಯೇ ಬಿಟ್ಟುಹೋಗಿರುವ ಅಂಶಗಳನ್ನು ತುಂಬಿಸಿ ಕೇವಲ 5 ದಿನಗಳಲ್ಲಿ ಹೊಸ ಆರ್‌ಸಿ ಪತ್ರವನ್ನು ತರಿಸಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಉಡುಪಿ ಜಿಲ್ಲೆಯ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಇದು ಏಕೆ ಸಾಧ್ಯವಾಗುತ್ತಿಲ್ಲ ಎಂದವರು ಪ್ರಶ್ನಿಸಿದರು.

ಆರ್‌ಟಿಓ ಅಧಿಕಾರಿಗಳು 15 ದಿನಗಳ ಒಳಗೆ ಬಾಕಿ ಇರುವ ಎಲ್ಲಾ ನಿರಾಕ್ಷೇಪಣಾ ಪತ್ರದ ಕಡತಗಳನ್ನು ವಿಲೇವಾರಿ ಮಾಡಿ ಕೊಡಬೇಕು. ಇಲ್ಲದಿದ್ದರೆ ಆರ್.ಟಿ.ಓ. ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಅಲ್ಲದೇ ಕೆಲವು ತಿಂಗಳ ಹಿಂದೆ ಲೋಕಾಯುಕ್ತ ದಾಳಿಗೊಳಗಾಗಿ ಅಕ್ರಮ ಪತ್ತೆಯಾದ ಆರ್‌ಟಿಓ ಅಧಿಕಾರಿ ಅದೇ ಸ್ಥಾನದಲ್ಲಿ ಮುಂದುವರಿದಿದ್ದು, ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು ಅಥವಾ ವರ್ಗಾವಣೆ ಮಾಡಬೇಕು ಎಂದೂ ಅವರು ಸರಕಾರವನ್ನು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಪ್ರಸನ್ನ ಕುಮಾರ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಲಾಲ್, ಜಿಲ್ಲಾ ಮಹಿಳಾ ಸಮಿತಿಯ ಅಧ್ಯಕ್ಷೆ ಜ್ಯೋತಿ ಶೇರಿಗಾರ್ತಿ, ಉಪಾಧ್ಯಕ್ಷರಾದ ಸೈಯದ್ ನಿಜಾಮ್, ಸುಧೀರ್ ಪೂಜಾರಿ, ಉಡುಪಿ ತಾಲೂಕು ಅಧ್ಯಕ್ಷ ಸತೀಶ್ ಸನಿಲ್, ಮಹಿಳಾ ಸಮಿತಿ ಉಪಾಧ್ಯಕ್ಷೆ ದೇವಕಿ ಬಾರ್ಕೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News