×
Ad

ಕವಿ, ವಿಮರ್ಶಕ ಸುಬ್ರಾಯ ಚೊಕ್ಕಾಡಿಗೆ ಎಸ್.ವಿ.ಪಿ. ಪ್ರಶಸ್ತಿ

Update: 2026-01-29 20:59 IST

ಉಡುಪಿ: ಕನ್ನಡದ ಖ್ಯಾತ ಕವಿ ಎಸ್.ವಿ.ಪರಮೇಶ್ವರ ಭಟ್ಟರ ಹೆಸರಿನಲ್ಲಿ ನೀಡಲಾಗುವ ಕನ್ನಡ ಸಾಹಿತ್ಯ, ಅನುವಾದ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತಿಗಳಿಗೆ ನೀಡುವ ಪ್ರಶಸ್ತಿಗೆ ಈ ಬಾರಿ ಕನ್ನಡದ ಖ್ಯಾತನಾಮ ಸಮಕಾಲೀನ ಕವಿ, ವಿಮರ್ಶಕ ಸುಬ್ರಾಯ ಚೊಕ್ಕಾಡಿ ಅವರನ್ನು ಆಯ್ಕೆ ಮಾಡಲಾಗಿದೆ.

ಎಸ್.ಪಿ.ಪಿ.ಪ್ರತಿಷ್ಠಾನದಿಂದ ನೀಡುವ ಈ ಪ್ರಶಸ್ತಿಯನ್ನು 2026ನೇ ಸಾಲಿನಿಂದ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನ ಪ್ರಶಸ್ತಿಗೆ ಕನ್ನಡದ ಹಿರಿಯ ಕವಿ, ಕಥೆಗಾರ ಸುಬ್ರಾಯ ಚೊಕ್ಕಾಡಿ ಅವರನ್ನು ಪ್ರಶಸ್ತಿ ಸಮಿತಿ ಆಯ್ಕೆ ಮಾಡಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಬ್ರಾಯ ಚೊಕ್ಕಾಡಿ ಅವರು 1940ರ ಜೂನ್ 29ರಂದು ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಜನಿಸಿದರು. ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯ ಹಾಗೂ ತಾಯಿ ಸುಬ್ಬಮ್ಮ. ಸುಬ್ರಾಯ ಚೊಕ್ಕಾಡಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದು ಸುಳ್ಯ, ಪೈಲೂರು, ಕುಕ್ಕುಜಡ್ಕ ಶಾಲೆಗಳಲ್ಲಿ 39 ವಷರ್ಗಳ ಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ.

ಎಂ.ಗೋಪಾಲಕೃಷ್ಣ ಅಡಿಗ, ಯು.ಆರ್.ಅನಂತಮೂರ್ತಿ, ಲಂಕೇಶ ಮುಂತಾದವರ ನಿಕಟವರ್ತಿಯಾಗಿದ್ದ ಚೊಕ್ಕಾಡಿ, ಲಂಕೇಶರ ಮೊದಲ ನಾಟಕವನ್ನು ಪ್ರಕಟಿಸಿದ್ದರು. ಸಾಹಿತ್ಯದ ಹೊಸ ವಿಚಾರಗಳನ್ನು ಚರ್ಚಿಸಲು ಹಳ್ಳಿಯಲ್ಲಿ ‘ಸುಮನಸಾ’ ಎಂಬ ವಿಚಾರ ವೇದಿಕೆಯನ್ನು ಕಟ್ಟಿ ಬೆಳೆಸಿ ಹತ್ತಾರು ಉತ್ತಮ ಕೃತಿಗಳ ಪ್ರಕಟಣೆಗೆ ಕಾರಣರಾದರು. ಕಾವ್ಯ, ನಾಟಕ, ಯಕ್ಷಗಾನ, ಹರಿಕಥೆ, ಸಂಘಟನೆ, ಶಿಕ್ಷಣ, ಸಾಮಾಜಿಕ ಹೋರಾಟ, ಪ್ರಕಾಶನ, ಕೃಷಿ ಇತ್ಯಾದಿಯಾಗಿ ಅವರೊಬ್ಬ ಸಕ್ರಿಯ ಸವಾರ್ಂತರ್ಯಾಮಿ ಎನಿಸಿದ್ದರು.

ಸುಬ್ರಾಯ ಚೊಕ್ಕಾಡಿ ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು ಇತ್ಯಾದಿ ಕವನಸಂಕಲನ ಪ್ರಕಟಿಸಿದ್ದರು. ಕಾದಂಬರಿ (ಸಂತೆಮನೆ) ಕಥಾ ಸಂಕಲನ (ಬೇರುಗಳು), ಕಾವ್ಯ ಸಮೀಕ್ಷೆ, ಕೃತಿಶೋಧ, ಒಳಹೊರಗು, ಸಮಾಲೋಕ, ಅವಲೋಕನ ಇವರ ವಿಮರ್ಶಾ ಕೃತಿಗಳೊಂದಿಗೆ ಸಂಪಾದಿತ ಕೃತಿ (ದ.ಕ.ಕಾವ್ಯ) ಪ್ರಕಟಿಸಿದ್ದಾರೆ.

ಸುಬ್ರಾಯ ಚೊಕ್ಕಾಡಿ ಅವರಿಗೆ ಸಂದ ಗೌರ, ಪ್ರಶಸ್ತಿಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ವರ್ಧ ಮಾನ ಪ್ರಶಸ್ತಿ, ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ, ಮುದ್ದಣಕಾವ್ಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಕಲಾನಿಧಿ ಪ್ರಶಸ್ತಿ, ಸಂದೇಶ ಸಾಹಿತ್ಯ ಪ್ರಶಸ್ತಿ, ಮುಳಿಯ ಪ್ರಶಸ್ತಿ, ಕೆ.ಎಸ್.ನರಸಿಂಹ ಸ್ವಾಮಿ ಕಾವ್ಯ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಸ್ವರ್ಣ ಸಾಧನಾ ಪ್ರಶಸ್ತಿ ಪ್ರಮುಖವಾದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News