ಉಡುಪಿ| ಬಸ್ ಬಾಗಿಲು ಅಳವಡಿಕೆಗೆ ಜೂ.1ರವರೆಗೆ ಕಾಲಾವಕಾಶ: ಎಸ್ಪಿ ಹರಿರಾಮ್ ಶಂಕರ್
ಉಡುಪಿ, ಜ.29: ತಾಂತ್ರಿಕ ಹಾಗೂ ಇತರ ಕಾರಣಗಳಿಗಾಗಿ ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ಸೇರಿ ದಂತೆ ಎಲ್ಲಾ ಬಸ್‌ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಕೆಗೆ ನೀಡಿರುವ ಕಾಲಾವಕಾಶವನ್ನು ಜೂನ್ 1ರವರೆಗೆ ವಿಸ್ತರಿಸಲಾಗಿದೆ ಎಂದು ಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಬಸ್ ಮಾಲಕರ ಸಂಘದೊಂದಿಗೆ ಇಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧ್ಯಕ್ಷತೆಯಲ್ಲಿ ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಎಸ್ಪಿ ಅವರು ತಿಳಿಸಿದ್ದಾರೆ.
ಮಾರ್ಚ್ ತಿಂಗಳವರೆಗೆ ಶಾಲೆಗಳು ಹಾಗೂ ಮಕ್ಕಳಿಗೆ ಪರೀಕ್ಷೆಗಳು ನಡೆಯ ಲಿರುವುದರಿಂದ ಹಾಗೂ ಜಿಲ್ಲೆಯ ಖಾಸಗಿ ಸೇರಿದಂತೆ ಎಲ್ಲಾ ಬಸ್‌ಗಳಿಗೆ ಹೊಸದಾಗಿ ಬಾಗಿಲುಗಳನ್ನು ಅಳವಡಿಸಲು ಸಾಕಷ್ಟು ಸಂಖ್ಯೆಯಲ್ಲಿ ಗ್ಯಾರೇಜ್‌ಗಳು ಇಲ್ಲದೇ ಇರುವುದರಿಂದ ಬಸ್ ಚಾಲಕರು ಹಾಗೂ ಮಾಲಕರ ಕೋರಿಕೆಯ ಮೇರೆಗೆ ಫೋಲ್ಡಿಂಗ್ ಮಾದರಿಯ ಬಾಗಿಲುಗಳನ್ನು ಅಳವಡಿಸಲು ಜೂನ್ 1ರವರೆಗೆ ಸಮಯವನ್ನು ನೀಡಲಾಯಿತು ಎಂದು ಅವರು ತಿಳಿಸಿದರು.
ಆದರೆ ಇಂದಿನಿಂದಲೇ ಎಲ್ಲಾ ಬಸ್‌ಗಳ ದೃಢತೆ ಸರ್ಟಿಫಿಕೇಟ್ (ಫಿಟ್‌ನೆಸ್ ಸರ್ಟಿಫಿಕೇಟ್-ಎಫ್‌ಸಿ)ಗಳನ್ನು ನವೀಕರಿಸಲಾಗುವುದು.ಇದಕ್ಕೆ ಮುನ್ನ ಬಸ್‌ಗೆ ಜೂನ್ 1ರೊಳಗೆ ಪೋಲ್ಡಿಂಗ್ ಮಾದರಿಯ ಬಾಗಿಲನ್ನು ಅಳವಡಿಸದಿದ್ದರೆ ಎಫ್‌ಸಿಯನ್ನು ರದ್ದುಪಡಿಸುವ ಷರತ್ತನ್ನು ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಅಲ್ಲದೇ ಜೂನ್1ರ ಬಳಿಕ ಯಾವುದೇ ಬಸ್ ಸುಸಜ್ಜಿತ ಬಾಗಿಲನ್ನು ಅಳವಡಿಸಿಕೊಳ್ಳದೇ ಇದ್ದರೆ ಅದನ್ನು ಮುಟ್ಟು ಗೋಲು ಹಾಕಿಕೊಳ್ಳುವ ಷರತ್ತಿಗೂ ಎಲ್ಲಾ ಖಾಸಗಿ ಬಸ್‌ಗಳ ಮಾಲಕರು ಸಂಪೂರ್ಣ ಒಪ್ಪಿಗೆಯನ್ನು ಸೂಚಿಸಿದ್ದು, ಜಿಲ್ಲಾಡಳಿತದ ಷರತ್ತನ್ನು ಶೇ.100ರಷ್ಟು ಅನುಷ್ಠಾನಗೊಳಿಸುವ ಭರವಸೆಯನ್ನೂ ಅವರು ನೀಡಿದ್ದಾರೆ ಎಂದು ಹರಿರಾಮ್ ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.