ಕುಂದಾಪುರ: ಉಚಿತ ನೇತ್ರ ತಪಾಸಣಾ ಶಿಬಿರ; ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2026
ಕುಂದಾಪುರ, ಜ.29: ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಕುಂದಾಪುರ ಪೊಲೀಸ್ ಠಾಣೆ, ತಾಲೂಕು ಕಾನೂನು ಸೇವೆಗಳ ಸಮಿತಿ, ಕುಂದಾಪುರ ವಕೀಲರ ಸಂಘ, ಅಭಿಯೋಗ ಇಲಾಖೆ ಹಾಗೂ ಪ್ರಸಾದ್ ನೇತ್ರಾಲಯ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಒನ್ ಸೈಟ್ ಎಸ್ಸಿಲಾರ್ ಲಕ್ಸೋಟಿಕಾ ಫೌಂಡೇಶನ್ ಬೆಂಗಳೂರು ಮತ್ತು ಕುಂದಾಪುರ ತಾಲೂಕು ಆಸ್ಪತ್ರೆ ಇವರ ಸಹಭಾಗಿತ್ವದಲ್ಲಿ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2026’ ಅಂಗವಾಗಿ ಪೊಲೀಸ್ ಅಧಿಕಾರಿ ಸಿಬ್ಬಂದಿ, ಖಾಸಗಿ ಬಸ್, ಶಾಲಾ ಬಸ್, ಟೆಂಪೋ, ರಿಕ್ಷಾ ಹಾಗೂ ಇತರ ವಾಹನ ಚಾಲಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಆರೋಗ್ಯ ಮಾಹಿತಿ ಕಾರ್ಯಗಾರ ಕುಂದಾಪುರ ಪೊಲೀಸ್ ಲೈನ್‌ನಲ್ಲಿರುವ ಶ್ರೀರಕ್ತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಕುಂದಾಪುರ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಜಯರಾಮ್ ಡಿ. ಗೌಡ, ಸಂಚಾರ ಠಾಣೆಯ ಉಪ ನಿರೀಕಕ್ಷಕರಾದ ಅನೂಪ್ ನಾಯಕ್, ಸುಧಾ ಪ್ರಭು, ಪ್ರಸಾದ ನೇತ್ರಾಲಯದ ನೇತ್ರ ತಜ್ಞೆ ಡಾ. ಕ್ರೀನಾ, ಸಾರ್ವಜನಿಕ ಸಂಪರ್ಕಾಧಿಕಾರಿ ಮೋಹನ್‌ದಾಸ್, ಕುಂದಾಪುರ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಮೇದಿನಿ, ತಾಲೂಕು ಕಾನೂನು ಸೇವೆಗಳ ಸಮಿತಿ ಅಧಿಕಾರಿ ಗಾಯತ್ರಿ, ಕಾನೂನು ಸೇವಾ ಪ್ರಾಧಿಕಾರದ ನ್ಯಾಯವಾದಿ ರಮೀಜಾ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.
ಕಾರ್ಯಗಾರದಲ್ಲಿ ರಸ್ತೆ ಅಪಘಾತ ತಡೆಗಟ್ಟುವಲ್ಲಿ ಆರೋಗ್ಯ ಮತ್ತು ಕಣ್ಣಿನ ದೃಷ್ಟಿಯ ಮಹತ್ವದ ಬಗ್ಗೆ ಸೂಕ್ತ ಮಾಹಿತಿ ನೀಡಿ, ರಸ್ತೆ ಅಪಘಾತಗಳನ್ನು ತಡೆಗಟ್ಟುವ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ತಿಳಿಹೇಳಿ ವಾಹನ ಚಾಲಕರಿಗೆ ಅರಿವು ಮೂಡಿಸಲಾಯಿತು.
ಶಿಬಿರದಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ, ವಾಹನದ ಚಾಲಕರಿಗೆ ಉಚಿತವಾಗಿ ನೇತ್ರ ತಪಾಸಣೆ ಮಾಡಿ ,ಕನ್ನಡಕದ ಅಗತ್ಯವಿದ್ದಲ್ಲಿ, ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಇದರೊಂದಿಗೆ ಎಲ್ಲಾ ವಾಹನ ಚಾಲಕರಿಗೆ ಉಚಿತವಾಗಿ ರಕ್ತದೊತ್ತಡ, ಮಧುಮೇಹ ಪರೀಕ್ಷೆ ನಡೆಸಿ, ಆರೋಗ್ಯ ಸಮಸ್ಯೆಗಳ ಬಗ್ಗೆ ಸೂಕ್ತ ಮಾಹಿತಿ ನೀಡಲಾಯಿತು.
ಶಂಕರನಾರಾಯಣ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್ ಮಧುಸೂದನ್ ಕಾರ್ಯಕ್ರಮ ನಿರೂಪಿಸಿದರು.