×
Ad

ಕೊಂಕಣ ರೈಲು ಮಾರ್ಗದ ವಿದ್ಯುದ್ದೀಕರಣದಿಂದ144 ಕೋಟಿ ರೂ. ಉಳಿತಾಯ: ಸಂತೋಷ್‌ ಕುಮಾರ್ ಝಾ

Update: 2025-08-18 20:06 IST

ಉಡುಪಿ, ಆ.18: ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಶೇ.80ರಿಂದ 90ರಷ್ಟು ರೈಲುಗಳು ವಿದ್ಯುತ್ ವ್ಯವಸ್ಥೆಯಲ್ಲಿ ಸಂಚರಿಸುತಿದ್ದು, ಇದರಿಂದಾಗಿ ಈ ವರ್ಷದ ಜ.1ರಿಂದ ಜುಲೈ 15ರವರೆಗೆ ನಿಗಮಕ್ಕೆ (ಕೆಆರ್‌ಸಿಎಲ್) 144 ಕೋಟಿ ರೂ.ಮೌಲ್ಯದ ಇಂಧನ ಉಳಿತಾಯವಾಗಿದೆ ಎಂದು ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಂತೋಷ ಕುಮಾರ್ ಝಾ ತಿಳಿಸಿದ್ದಾರೆ.

ನವಿಮುಂಬಯಿ ನೆರುಲಾದ ಕೊಂಕಣ ರೈಲ್ವೆ ವಿಹಾರದಲ್ಲಿ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನೀಡಿದ ಸಂದೇಶದಲ್ಲಿ ಅವರು ಕೊಂಕಣ ರೈಲ್ವೆಯ ಸಾಧನೆಗಳ ಬಗ್ಗೆ ವಿವರಿಸಿದರು. ಇದೇ ಜನವರಿ 1ರಿಂದ ಜುಲೈ ಕೊನೆಯವರೆಗೆ ಕೊಂಕಣ ರೈಲ್ವೆ ಮಾರ್ಗದಲ್ಲಿ 11,751 ಪ್ರಯಾಣಿಕರ ಹಾಗೂ ಅಂಚೆಟಪ್ಪಾಲು ರೈಲುಗಳೊಂದಿಗೆ 3,861 ಗೂಡ್ಸ್ ರೈಲುಗಳು ಸಂಚರಿಸಿವೆ ಎಂದರು.

ಅಲ್ಲದೇ ಕೊಂಕಣ ರೈಲು ಮಾರ್ಗದಲ್ಲಿ ಒಟ್ಟು 174 ಬೇಸಿಗೆ ವಿಶೇಷ ರೈಲುಗಳನ್ನು ಸಹ ಓಡಿಸಲಾಗಿದೆ. ಇದೀಗ ನಿಗಮವು ರೋ-ರೋ ಟ್ರಕ್ ಸೇವೆಯ ಯಶಸ್ಸಿನ ಬಳಿಕ ರೋ-ರೋ ಕಾರು ಸೇವೆಯನ್ನು ಇದೇ ಆ.23ರಿಂದ ಸೆ.11ರವರೆಗೆ ಮಹಾರಾಷ್ಟ್ರದ ಕೋಲಾಡ್ ಹಾಗೂ ಗೋವಾದ ವೆರ್ಣ ನಡುವೆ ನೀಡಲಿದೆ. ಈ ರೈಲಿಗೆ ನಂದಗಾಂವ್‌ನಲ್ಲಿ ನಿಲುಗಡೆ ಇರುತ್ತದೆ ಎಂದವರು ಹೇಳಿದರು.

ಕೊಂಕಣ ರೈಲುಗಳ ಮೂಲಕ ಮನೆಯಿಂದ ಓಡಿಹೋಗುತಿದ್ದ 66 ಮಂದಿ ಮಕ್ಕಳನ್ನು ರಕ್ಷಿಸಲಾಗಿದೆ. ಇವುಗಳಲ್ಲಿ 24 ಮಂದಿ ಅಪ್ರಾಪ್ತ ಬಾಲಕಿಯರೂ ಸೇರಿದ್ದಾರೆ. ಇವರನ್ನು ಸುರಕ್ಷಿತವಾಗಿ ಮಕ್ಕಳ ಹೆತ್ತವರಿಗೆ ಅಥವಾ ಮಕ್ಕಳ ಸಹಾಯವಾಣಿಗೆ ಸೇರಿಸಲಾಗಿದೆ ಎಂದು ಝಾ ತಿಳಿಸಿದರು.

ಕೊಂಕಣ ರೈಲ್ವೆ ಒಟ್ಟು 3,860.99 ಕೋಟಿ ರೂ.ಮೌಲ್ಯದ ಹೊಸ ಪ್ರಾಜೆಕ್ಟ್‌ಗಳನ್ನು ಪಡೆದುಕೊಂಡಿದೆ. ಇವುಗಳಲ್ಲಿ 1,619.50 ಕೋಟಿ ರೂ. ಮೌಲ್ಯದ 14 ಯೋಜನೆಗಳನ್ನು ಈ ಆರ್ಥಿಕ ವರ್ಷದಲ್ಲೇ ಪಡೆಯಲಾಗಿದೆ. ಜಮ್ಮು ಕಾಶ್ಮೀರದಲ್ಲಿ ನಿರ್ಮಾಣಗೊಂಡ ಉದಮ್‌ಪುರ, ಶ್ರೀನಗರ, ಬಾರಮುಲ್ಲಾ ರೈಲ್ವೆ ಲಿಂಗ್ ಯೋಜನೆ (ಯುಎಸ್‌ಬಿಆರ್‌ಎಲ್)ಯನ್ನು ಕಳೆದ ಜೂನ್ 6ರಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಅರ್ಪಿಸಿದ್ದು, ಇದರಲ್ಲಿ ಕತ್ರಾ ಹಾಗೂ ಸಂಗಲ್ಡನ್ ವಿಭಾಗದ 63ಕಿ.ಮೀ. ಸೇತುವೆಯನ್ನು ಕೊಂಕಣ ರೈಲ್ವೆ ನಿರ್ಮಿಸಿತ್ತು ಎಂದವರು ಹೇಳಿದರು.

ಕೊಂಕಣ ರೈಲ್ವೆಯಲ್ಲಿ 79 ಹುದ್ದೆಗಳ ಭರ್ತಿಗೆ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸಂತೋಷ ಕುಮಾರ್ ಝಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News