×
Ad

ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪೂರಕ ವಾತಾವರಣ ಕಲ್ಪಿಸಿ: ಅಧಿಕಾರಿಗಳಿಗೆ ಉಡುಪಿ ಜಿಲ್ಲಾಧಿಕಾರಿ ಸೂಚನೆ

Update: 2025-05-28 21:56 IST

ಉಡುಪಿ: ಮಕ್ಕಳ ಹಕ್ಕುಗಳ ರಕ್ಷಣೆಯೊಂದಿಗೆ ಮಕ್ಕಳು ಸಮಾಜದಲ್ಲಿ ಆರೋಗ್ಯಯುತ ಜೀವನ ನಡೆಸಿ, ಉತ್ತಮ ಭವಿಷ್ಯ ಕಟ್ಟಿ ಕೊಳ್ಳಲು ಅಗತ್ಯವಿರುವ ಪೂರಕ ವಾತಾವರಣ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿವಿಧ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಭಿಕ್ಷಾಟಣೆ ಮಾಡುತ್ತಿರುವ ಮಕ್ಕಳು, ಬಾಲಕಾರ್ಮಿಕ ಮಕ್ಕಳು, ಕಾಣೆಯಾದ ಮಕ್ಕಳು, ಮಾದಕವ್ಯಸನಿಯ ಮಕ್ಕಳು, ಪರಿತ್ಯಕ್ತ ಮಕ್ಕಳು, ಬಾಲ್ಯವಿವಾಹವಾದ ಮಕ್ಕಳು, ಹಿಂಸೆ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಶಿಕ್ಷಣದಿಂದ ವಂಚಿತರಾದ ಮಕ್ಕಳು ಕಂಡುಬಂದಲ್ಲಿ ಅಂತಹ ಮಕ್ಕಳ ರಕ್ಷಣೆಗಾಗಿ ಮಕ್ಕಳ ರಕ್ಷಣಾ ಘಟಕದ ಸಹಾಯವಾಣಿ ಸಂಖ್ಯೆ 1098/ 112ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಅವರು ತಿಳಿಸಿದರು.

ಮಕ್ಕಳನ್ನು ದತ್ತು ಪಡೆಯಲು ಇಚ್ಛಿಸುವವರು ಅಧಿಕೃತ ವೆಬ್‌ಸೈಟ್ -cara.wcd.gov.in- ಮುಖಾಂತರ ಅರ್ಜಿಯನ್ನು ಸಲ್ಲಿಸಿ ಕಾನೂನುಬದ್ಧ ವಾಗಿ ದತ್ತು ಪಡೆಯಲು ಅವಕಾಶಗಳಿವೆ. ಅನಧಿಕೃತ ದತ್ತು ಮಗುವನ್ನು ಪಡೆದುಕೊಂಡಲ್ಲಿ, ದತ್ತು ಪಡೆದುಕೊಂಡಿರುವ ಪೋಷಕರು, ದತ್ತು ನೀಡಿರುವ ಪೋಷಕರು ಹಾಗೂ ದತ್ತು ಪಡೆದುಕೊಳ್ಳಲು ಸಹಕರಿಸಿದವರಿಗೆ ಕಾನೂನಿ ನಡಿಯಲ್ಲಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದರು.

ಶಾಲಾ-ಕಾಲೇಜುಗಳಲ್ಲಿ ಬಾಲ್ಯವಿವಾಹ ಹಾಗೂ ಪೊಕ್ಸೋ ಕಾಯ್ದೆಯ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜಿಸಬೇಕು. ಶಾಲೆಯಲ್ಲಿ ಪೋಷಕರ ಸಭೆಯಲ್ಲಿಯೂ ಸಹ ಈ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ತಾಲೂಕು ಮಟ್ಟದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಕ್ಕಳ ರಕ್ಷಣಾ ಸಮಿತಿ, ಗ್ರಾಮ ಮಟ್ಟದ ಮಕ್ಕಳ ರಕ್ಷಣಾ ಸಮಿತಿ ಹಾಗೂ ಮಕ್ಕಳ ಕಾವಲು ಸಮಿತಿಯ ಸಭೆಗಳನ್ನು ನಿಯಮಿತವಾಗಿ ಪ್ರತಿ ತ್ರೈಮಾಸಿಕದಂತೆ ಕಡ್ಡಾಯವಾಗಿ ಮಾಡಬೇಕು ಎಂದ ಅವರು, ಮಲ್ಪೆ ಬಂದರಿನಲ್ಲಿ ಮೀನು ಆಯುವ ಮಕ್ಕಳ ರಕ್ಷಣೆಗೆ ಕಾರ್ಮಿಕ ಇಲಾಖೆಯಿಂದ ಕಾಲಕಾಲಕ್ಕೆ ಕಾರ್ಯಾಚರಣೆ ನಡೆಸಿ, ಮಕ್ಕಳ ರಕ್ಷಣೆ ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೀಶ್ ಪಿ.ಆರ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಾಗರತ್ನ ನಾಯಕ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.


 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News