×
Ad

ಕೊಳಲಗಿರಿ -ಸರಳೇಬೆಟ್ಟು ಮಾರ್ಗದಲ್ಲಿ ನರ್ಮ್ ಬಸ್ ಸೇವೆ ಆರಂಭಿಸಲು ಉಡುಪಿ ಜಿಲ್ಲಾಧಿಕಾರಿಗೆ ಮನವಿ

Update: 2024-01-02 18:21 IST

ಉಡುಪಿ: ಕೊಳಲಗಿರಿ-ಪರಾರಿ ರಿಂಗ್ ರೋಡ್ ಕಾಮಗಾರಿ ಪೂರ್ಣಗೊಂಡಿರುವುದರಿಂದ ಈ ಮಾರ್ಗದಲ್ಲಿ ಸರಕಾರಿ ನರ್ಮ್ ಬಸ್ ಸೇವೆ ಆರಂಭಿಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತರ ನಿಯೋಗ ಇಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿತು.

ಈ ಮಾರ್ಗದಲ್ಲಿ ಬಸ್ ಸೇವೆ ಆರಂಭಿಸಿದರೆ ಕೊಳಲಗಿರಿ, ಹಾವಂಜೆ ಕೀಳಂಜೆಯ ಬಿವಿ ಹೆಗ್ಡೆ ಶಾಲೆ, ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನ, ಶಿಂಬ್ರಾ ಇಂದಿರಾ ಶಿವರಾಮ್ ಪಾಲಿಟೆಕ್ನಿಕ್ ಕಾಲೇಜು, ಭಾರತೀಯ ವಿಕಾಸ ಕೇಂದ್ರ, ಕಾಯಿನ್ ಸರ್ಕಲ್, ಮಣಿಪಾಲ ಟೈಗರ್ ಸರ್ಕಲ್, ಸರಳೇಬೆಟ್ಟು ಜಂಕ್ಷನ್, ಸರಳೇಬೆಟ್ಟುವಿನ ಕೊಡಿಯಲ್ಲಿ ನಗರಸಭೆ ಯಿಂದ ನಿರ್ಮಿಸಿರುವ ವಸತಿ ಸಮುಚ್ಚಯದಲ್ಲಿ ನಿವಾಸಿಗಳಿಗೆ ತುಂಬಾ ಅನುಕೂಲವಾಗುತ್ತದೆ.

ಅದರಂತೆಯೇ ಕೊಳಲಗಿರಿಯಿಂದ ಮಣಿಪಾಲ ಡಿಸಿ, ಆರ್‌ಟಿಓ ಕಚೇರಿಗೆ ಹೋಗುವವರಿಗೆ, ಮಣಿಪಾಲ ಆಸ್ಪತ್ರೆಗೆ ಬರುವ ವರಿಗೆ ತುಂಬಾ ಪ್ರಯೋಜನ ವಾಗಲಿದೆ. ಈ ಬಸ್ ಸೇವೆಯಿಂದ ಸರಳಬೆಟ್ಟುವಿನಿಂದ ಮಣಿಪಾಲಕ್ಕೆ ಬರುವ ಕಾರ್ಮಿಕ ವರ್ಗದವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಬೆಳಗ್ಗಿನ ಶಾಲಾ ಹಾಗೂ ಕಚೇರಿಯ ಸಮಯದಲ್ಲಿ ಹಾಗೂ ಸಂಜೆ ಮನೆ ಸೇರುವಂತಹ ಸಮಯವನ್ನು ನೋಡಿ ಬಸ್ ಓಡಾಟ ನಡೆಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ನಿಯೋಗದಲ್ಲಿ ಸಾಮಾಜಿಕ ಕಾರ್ಯಕರ್ತ ಗಣೇಶ ರಾಜ್ ಸರಳೇಬೆಟ್ಟು, ಕಾಂಗ್ರೆಸ್ ಹಿರಿಯ ಮುಖಂಡ ಜಯಶೆಟ್ಟಿ ಬನ್ನಂಜೆ, ಸುರೇಶ್ ನಾರಾಯಣ ಶೆಟ್ಟಿ, ರತ್ನಾಕರ ಮೊಗವೀರ ಹಾವಂಜೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News