×
Ad

ಅಕ್ಷರ ಜ್ಞಾನದ ಜೊತೆಗೆ ನಾಟಕಗಳು ದಾರಿದೀಪ: ಡಾ.ಕೋಟ್ಯಾನ್

Update: 2025-01-20 19:34 IST

ಉಡುಪಿ, ಜ.20: ಇಂದಿನ ಕಾಲಘಟ್ಟದಲ್ಲಿ ನಾಟಕಗಳು ಅಕ್ಷರ ಜ್ಞಾನದ ಜೊತೆಗೆ ವಿದ್ಯಾರ್ಥಿಗಳು ಮತ್ತು ಯುವಕರ ಬದುಕಿಗೆ ದಾರಿದೀಪವಾಗುತ್ತವೆ ಮತ್ತು ಮುಂದಿನ ಪೀಳಿಗೆಗೆ ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಕೋಟ್ಯಾನ್ ಹೇಳಿದ್ದಾರೆ.

ರವಿವಾರ ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್‌ನ ಬಯಲು ರಂಗಮಂದಿರದಲ್ಲಿ ಯಕ್ಷರಂಗಾಯಣ ಕಾರ್ಕಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಆಶ್ರಯದಲ್ಲಿ ನಡೆದ ಕಲ್ಲರಳಿ ಹೂವಾಗಿ-ಮೂರು ದಿನಗಳ ನಾಟಕೋತ್ಸ ವವನ್ನು ಜಂಬೆ ವಾದ್ಯ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ನಾಟಕ, ಭಾಷೆ, ಕನ್ನಡ ಹಾಗೂ ಸಂಸ್ಕೃತಿಗಳನ್ನು ಬದುಕಲ್ಲಿ ಅಳವಡಿಸಿ ಕೊಳ್ಳಬೇಕು. ನಾಟಕಗಳು ವ್ಯಕ್ತ-ಅವ್ಯಕ್ತ, ದೃಶ್ಯ-ಅದೃಶ್ಯ ಮತ್ತು ಶ್ರಾವ್ಯ- ಅಶ್ರಾವ್ಯವನ್ನು ಉದ್ದೀಕರಿಸುತ್ತವೆ. ಇಂದಿನ ಯುವಕರು ಪಠ್ಯದ ಹೊರತು ಯೋಚಿಸಿ, ಕನ್ನಡ ನಾಟಕಗಳನ್ನು ನೋಡಿ ಮನದಟ್ಟು ಮಾಡಿಕೊಂಡರೆ ಸಮಾಜಕ್ಕೆ ಉತ್ತಮ ಪ್ರಜೆಯಾಗುವುದರಲ್ಲಿ ಸಂಶಯವೇ ಇಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ ಮಾತನಾಡಿ, ಯಕ್ಷಗಾನದ ಜೊತೆಗೆ ನಾಟಕಗಳು ಕೂಡ ಜೀವನದಲ್ಲಿ ಜ್ಞಾನವನ್ನು ನೀಡುತ್ತವೆ. ಈ ನಾಟಕೋತ್ಸವದಲ್ಲಿ ಬಹಳಷ್ಟು ಮಂದಿ ಉತ್ತರ ಕರ್ನಾಟಕದ ಕಲಾವಿದರು ಭಾಗವಹಿಸಿದ್ದಾರೆ. ಅವರು ತಮ್ಮ ಜವಾರಿ ಭಾಷೆಯ ವಿಡಂಬನೆಯನ್ನು ಅರ್ಥೈಸಲಿದ್ದಾರೆ. ನಾಟಕಗಳನ್ನು ನೋಡುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ನಿರ್ದಿಗಂತ ಸಂಸ್ಥೆಯ ವ್ಯವಸ್ಥಾಪಕ ಗಣೇಶ್ ಭೀಮನಕೋಟೆ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮತ್ತು ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿ, ನಿವೃತ್ತ ಶಿಕ್ಷಕ ವಸಂತ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News