ಅಹಿಂದ ಮುಖ್ಯಮಂತ್ರಿಯಿಂದ ದಲಿತರಿಗೆ ಮಹಾ ಘೋರ ಅನ್ಯಾಯ: ರವಿ ಕುಮಾರ್ ಆರೋಪ
ಉಡುಪಿ, ಫೆ.28: ಅಹಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ದಲಿತರಿಗೆ ಮಹಾ ಘೋರ ಅನ್ಯಾಯ ಮಾಡಿದ್ದಾರೆ. ಎರಡು ವರ್ಷಗಳಲ್ಲಿ 25 ಸಾವಿರ ಕೋಟಿಗಿಂತ ಹೆಚ್ಚು ಎಸ್‌ಸಿ ಎಸ್‌ಟಿಗಳಿಗೆ ಮೀಸಲಿಟ್ಟ ಹಣವನ್ನು ಸರಕಾರ ದುರ್ಬಳಕೆ ಮಾಡಿದೆ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಒಂದು ರುಪಾಯಿ ಮುಟ್ಟಲ್ಲ. ಯಾಕೆ ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿಲ್ಲ? ದಲಿತರ ಉದ್ಧಾರ ಇದೇನಾ? ಈ ಬಾರಿಯ ಬಜೆಟ್‌ನಲ್ಲಿ 15 ಸಾವಿರ ಕೋಟಿ ಹಣ ತೆಗೆಯಲು ಹೊರಟಿದ್ದಾರೆ. ಇದರ ವಿರುದ್ಧ ಹೋರಾಟ ಮಾಡಿದ ಒಂದು ಪೈಸೆ ಮುಟ್ಟಲು ಬಿಡಲ್ಲ ಎಂದರು.
ರಾಜ್ಯದಲ್ಲಿನ ವಿಶ್ವವಿದ್ಯಾನಿಲಯ ಮುಚ್ಚಲು ಹೊರಟಿರುವ ರಾಜ್ಯ ಸರಕಾರದ ನಡೆಯಿಂದ ದಲಿತರಿಗೆ ಅನ್ಯಾಯವಾಗಲಿದೆ. ಇದೀಗ ರಾಜ್ಯದ ಶಿಕ್ಷಣ ವ್ಯವಸ್ಥೆ ಚಿಂತಾಜನಕವಾಗಿದೆ. ದಲಿತ ಹಿಂದುಳಿದ ವರ್ಗದ ಹಾಸ್ಟೆಲ್ ಶಿಕ್ಷಣ ವ್ಯವಸ್ಥೆ ಪೂರ್ಣ ಹದಗೆಟ್ಟಿದೆ ಎಂದು ಅವರು ಆರೋಪಿಸಿದರು.
ಸಂಸದ ರಮೇಶ್ ಜಿಗಜಿಣಗಿ ಮಾತನಾಡಿ, ರಾಜ್ಯ ಸರಕಾರ ದಲಿತರಿಗೆ ಮೀಸಲಿಟ್ಟ 29 ಸಾವಿರ ಕೋಟಿ ಹಣ ದುರ್ಬಳಕೆ ಮಾಡಿದೆ. ಈ ಬಗ್ಗೆ ರಾಜ್ಯದ ಕೇಂದ್ರದ ದಲಿತ ಕಾಂಗ್ರೆಸ್ ನಾಯಕರು ಬಾಯಿ ಬಿಡುತ್ತಿಲ್ಲ. ಇದು ದಲಿತರ ಮೇಲಿನ ಅನ್ಯಾಯವಾಗಿದೆ. ಈ ಸರಕಾರ ದಲಿತರಿಗೆ ಕೊಡುವ ಗೌರವ ಜಗಜ್ಜಾಹಿರಾಗಿದೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಕಾಲದಿಂದ ಕಾಂಗ್ರೆಸ್ ದಲಿತರಿಗೆ ಮೋಸ ಮಾಡುತ್ತಿದೆ. ಒಬ್ಬ ದಲಿತ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಇರಬಾರದು. ಯಾವ ಪಕ್ಷದಿಂದಲೂ ಈ ಮಟ್ಟಿಗೆ ದಲಿತರಿಗೆ ಅನ್ಯಾಯ ಆಗಿಲ್ಲ. ಪ್ರಿಯಾಂಕ ಗಾಂಧಿ ನಾಮಪತ್ರ ಸಲ್ಲಿಕೆ ದಿನದಂದು ಖರ್ಗೆ ಅವರನ್ನು ಅಗೌರವದಿಂದ ಕಂಡು ಅವಮಾನ ಮಾಡಲಾಗಿದೆ ಎಂದು ಅವರು ದೂರಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಯಶ್‌ಪಾಲ್ ಸುವರ್ಣ, ಕುಯಿಲಾಡಿ ಸುರೇಶ್ ನಾಯಕ್, ಉದಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.