×
Ad

ಕಟ್ಟಡ ಪರವಾನಿಗೆ ಹಿಂದೆ ಡ್ಯೂಪ್ಲಿಕೇಟ್, ಡೀಲ್, ಭ್ರಷ್ಟಾಚಾರ!

Update: 2025-03-05 22:07 IST

ಕುಂದಾಪುರ, ಮಾ.5: ಕುಂದಾಪುರ ಪುರಸಭೆಯ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೋಡಿಯಲ್ಲಿ ಖಾಸಗಿ ರೆಸಾರ್ಟ್ ಒಂದರ ನಿರ್ಮಾಣಕ್ಕೆ ಕಟ್ಟಡ ಪರವಾನಿಗೆ ನೀಡಿದ ವಿಚಾರವು ಬಹಳಷ್ಟು ಚರ್ಚೆಗಳಿಗೆ ಕಾರಣವಾಯಿತು.

ಕೋಡಿ ವಾರ್ಡ್ ಸದಸ್ಯ ಅಶ್ಫಕ್ ಕೋಡಿ ವಿಷಯ ಪ್ರಸ್ತಾಪಿಸಿ, ಕೋಡಿಯಲ್ಲಿ ಖಾಸಗಿ ರೆಸಾರ್ಟ್ ಒಂದರ ನಿರ್ಮಾಣಕ್ಕೆ ಕಟ್ಟಡ ಪರವಾನಿಗೆ ನೀಡಿದ ಬಗ್ಗೆ ಕಳೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಪ್ರಶ್ನೆ ಎತ್ತಿದ್ದು ಈ ಬಾರಿ ಅದನ್ನು ಅನುಪಾಲನ ವರದಿಯಲ್ಲಿ ಉಲ್ಲೇಖಿಸಿಲ್ಲ. ಸದಸ್ಯರು ಕೇಳಿದ ಪ್ರಶ್ನೆಗೆ ಬೆಲೆಯಿಲ್ಲವೇ? ಭ್ರಷ್ಟಾಚಾರಕ್ಕೆ ಪುರಸಭೆ ಪರೋಕ್ಷ ಬೆಂಬಲ ನೀಡುತ್ತಿದೆಯೇ? ಎಂದು ಆರೋಪಿಸಿದರು.

ಕಟ್ಟಡ ಪರವಾನಿಗೆ ನೀಡಿದ ಬಗ್ಗೆ ಈ ಹಿಂದೆ ಪುರಸಭೆಗೆ ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಸಿ.ಆರ್.ಝಡ್ ಹಾಗೂ ಪ್ರಾಧಿಕಾ ರದ ನಿರಪೇಕ್ಷಣಾ ಪತ್ರ ಸಲ್ಲಿಸಿಲ್ಲ ಎಂದು ದಾಖಲಾತಿ ನೀಡಿದ್ದರು. ಆದರೆ ಮತ್ತೆ ನೀಡಿದ ವರದಿಯಲ್ಲಿ ಸಿ.ಆರ್.ಝಡ್, ಪ್ರಾಧಿಕಾರದ ವರದಿ ಸಲ್ಲಿಸಿದ್ದಕ್ಕೆ ಕಟ್ಟಡ ಪರವಾನಿಗೆ ನೀಡಿದ್ದಾಗಿ ದಾಖಲೆ ನೀಡಲಾಗಿದೆ. ಹಾಗಾದರೆ ಮೊದಲು ನೀಡಿದ ದಾಖಲೆ ಡ್ಯೂಪ್ಲಿಕೇಟ್ ಎಂದಾಯಿತು ಎಂದು ವಿರೋಧಪಕ್ಷದ ಸದಸ್ಯ ಅಶ್ಪಕ್ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಪುರಸಭಾ ಅಧ್ಯಕ್ಷ ಮೋಹನದಾಸ್ ಶೆಣೈ, ನೀವು ಮೊದಲಿಗೆ ಆರ್.ಟಿ.ಐ ಅರ್ಜಿ ಸಲ್ಲಿಸುವ ವೇಳೆ ಕಟ್ಟಡದವರು ಕೆಲ ದಾಖಲೆ ನೀಡಿರಲಿಲ್ಲ. ಬಳಿಕ ದಾಖಲೆ ನೀಡಿದ್ದಾರೆ. ಪ್ರಾಧಿಕಾರ ಎನ್.ಒ.ಸಿ ನೀಡಿದ ಬಳಿಕವೇ ಎಲ್ಲಾ ಪರಿಶೀಲಿಸಿ ಕಟ್ಟಡ ರಚನೆಗಷ್ಟೆ ಪುರಸಭೆ ಪರವಾನಿಗೆ ನೀಡಿದೆ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಕೂತು ಮಾತುಕತೆ ನಡೆಸಲಾಗುವುದು ಎಂದರು.

ಇದಕ್ಕೆ ಆಕ್ಷೇಪಿಸಿದ ಪುರಸಭೆ ವಿಪಕ್ಷದ ಸದಸ್ಯ ಶ್ರೀಧರ್ ಶೇರುಗಾರ್ ’ಕೂರಿಸಿ ಮಾತನಾಡುವುದು’ ಎಂದರೆ ಇದು ಯಾವ ರೀತಿಯ ’ಡೀಲಿಂಗ್’ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು. ಇದಕ್ಕೆ ಸದಸ್ಯ ಕೆ.ಜಿ ನಿತ್ಯಾನಂದ ಧ್ವನಿಗೂಡಿಸಿದರು. ಆಡಳಿತ ಪಕ್ಷದ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ ಮಧ್ಯೆ ಪ್ರವೇಶಿಸಿ ಮಾತನಾಡಿ, ಆಡಳಿತದ ಮೇಲೆ ಭ್ರಷ್ಟಾಚಾರ ಆರೋಪ ಮಾಡುವುದಿದ್ದರೆ ಸೂಕ್ತ ದಾಖಲೆಗಳನ್ನು ನೀಡಿರಿ. ಭ್ರಷ್ಟಾಚಾರ ಮಾಡಿದವರ ಹೆಸರು ಬಹಿರಂಗಪಡಿಸಿ ಎಂದು ತಾಕೀತು ಮಾಡಿದರು. ಸದಸ್ಯರು ನೀಡಿದ ದೂರಿಗೆ ಸೂಕ್ತ ಹಿಂಬರಹ ನೀಡಿ ಎಂದು ಸದಸ್ಯ ಗಿರೀಶ್ ಜಿ.ಕೆ. ಹೇಳಿದ ಬಳಿಕ ಕೋಲಾಹಲಕ್ಕೆ ತೆರೆಬಿತ್ತು.

ಕಾಂಡ್ಲಾವನ ಬಗ್ಗೆ ಚರ್ಚೆ: ಕೋಡಿ, ಮದ್ದುಗುಡ್ಡೆ, ಚರ್ಚ್ ರಸ್ತೆಯಲ್ಲಿ ಕೃಷಿಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿದೆ. ಕಾಂಡ್ಲಾ ವನದಿಂದಾಗಿ ನೀರಿನ ಹರಿವಿಗೆ ತೊಡಕಾಗಿದೆ. ಕಾಂಡ್ಲಾವನ ತೆರವುಗೊಳಿಸಿ, ಹೂಳೆತ್ತಲು ವ್ಯವಸ್ಥೆ ಮಾಡಬೇಕು ಎಂದು ಸದಸ್ಯ ರಾಘವೇಂದ್ರ ಖಾರ್ವಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪ ವಲಯಾರಣ್ಯಾಧಿಕಾರಿ ವಿನಯ್, ಕಾಂಡ್ಲಾಗಳು ಸುನಾಮಿಯಂತಹ ಸಂದರ್ಭಗಳಲ್ಲಿ ದೊಡ್ಡ ಅಲೆಗಳನ್ನು ತಡೆಯುವುದಲ್ಲದೆ ಮಣ್ಣಿನ ಸವಕಳಿ ಉಂಟಾಗದಂತೆ, ಜಲಚರಗಳಿಗೆ, ಪಕ್ಷಿಗಳಿಗೆ ಸಂತಾನೋತ್ಪತ್ತಿಗೆ ಅನುಕೂಲವಾಗುವಂತೆ ಕಾಂಡ್ಲಾ ಗಿಡಗಳನ್ನು ಬೆಳೆಸಲಾಗಿದೆ. ಇದರಿಂದ ಯಾವುದೇ ತೊಂದರೆಗಳಿಲ್ಲ ಎಂದರು.

ಸದಸ್ಯೆ ಶ್ವೇತಾ ಮಾತನಾಡಿ, ತಾತ್ಕಾಲಿಕ ದಂಡೆ ನಿರ್ಮಿಸಲು ಕೃಷಿಭೂಮಿ ಯಿಂದ ಮಣ್ಣೆತ್ತಲು ಸಾಧ್ಯವಿಲ್ಲ. ಹೀಗಾಗಿ ನದಿಯಿಂದಲೇ ಹೂಳೆತ್ತಿ ದಂಡೆ ನಿರ್ಮಿಸಬೇಕು. ನದಿಯ ದಡದಲ್ಲೇ ಕಾಂಡ್ಲಾ ಮರ ಬೆಳೆಸಿದ್ದರಿಂದ ಹೂಳೆತ್ತಿ ಮೇಲೆ ಹಾಕಲು ಸಾಧ್ಯವಿಲ್ಲ ಎಂದರು.

ಸಭೆಯಲ್ಲಿ ಕುಂದಾಪುರ ಒಂಬತ್ತು ದಂಡಿಗೆಯ 4 ರಸ್ತೆಗಳ ದುರಸ್ಥಿ ಬಗ್ಗೆ ಹಲವು ಸಭೆಗಳಲ್ಲಿ ಮಾತನಾಡಿದರೂ ಈವರೆಗೂ ಸರಿಪಡಿಸಿಲ್ಲ. ಮುಂದಿನ ಸಭೆಯೊಳಗೆ ರಸ್ತೆ ಸಮಸ್ಯೆಗೆ ಮುಕ್ತಿ ನೀಡಿ ಎಂದು ಆಡಳಿತ ಪಕ್ಷದ ಸದಸ್ಯೆ ಅಶ್ವಿನಿ ಪ್ರದೀಪ್ ಒತ್ತಾಯಿಸಿದರು.

ಕುಂದಾಪುರ ನೆಹರು ಮೈದಾನ, ರಿಕ್ಷಾ ನಿಲ್ದಾಣಗಳ ಸಮಸ್ಯೆ, ಸಂಗಂ ಪ್ರದೇಶದಲ್ಲಿನ ಹಿಂದೂ ರುಧ್ರಭೂಮಿ, ಪುರಸಭಾ ವ್ಯಾಪ್ತಿಯ ಪ್ರಮುಖ ರಸ್ತೆ ಹಾಗೂ ಒಳರಸ್ತೆಗಳಲ್ಲಿರುವ ಅಪಾಯಕಾರಿ ಮರ ಮತ್ತು ಗೆಲ್ಲುಗಳ ತೆರವು ಕುರಿತಂತೆ ಸದಸ್ಯರಾದ ಜಿ.ಕೆ. ಗಿರೀಶ್, ಸಂತೋಷ್ ಶೆಟ್ಟಿ, ನಾಮನಿರ್ದೇಶಿತ ಸದಸ್ಯ ಗಣೇಶ್ ಶೇರಿಗಾರ್ ವಿಸ್ತೃತ ಚರ್ಚೆ ನಡೆಯಿತು.

ಪುರಸಭಾ ಅಧ್ಯಕ್ಷ ಮೋಹನದಾಸ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್.ವಿ, ಮುಖ್ಯಾಧಿಕಾರಿ ಆನಂದ ಜೆ. ಉಪಸ್ಥಿತರಿದ್ದರು.

ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಆಗ್ರಹ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಕುಂದಾಪುರದ ಪಾರಿಜಾತ ವೃತ್ತದಲ್ಲಿ ನಿರ್ಮಿಸುವುದಲ್ಲದೆ ಅದಕ್ಕೆ ’ಅಂಬೇಡ್ಕರ್ ವೃತ್ತ’ ಎಂದು ಹೆಸರಿಡಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ. ಸಭೆಯಲ್ಲಿ ಆಗ್ರಹಿಸಿದರು.

ಇದಕ್ಕೆ ಆಡಳಿತ ಪಕ್ಷದ ಸದಸ್ಯ ಗಿರೀಶ್ ಜಿ.ಕೆ. ಧ್ವನಿಗೂಡಿಸಿ ಶೀಘ್ರದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಕ್ರಮವಹಿಸಿ ಎಂದರು. ಪುರಸಭೆ ಮುಖ್ಯಾಧಿಕಾರಿ ಆನಂದ್ ಜೆ. ಉತ್ತರಿಸಿ ವೃತ್ತ ನಿರ್ಮಾಣ ಹಾಗೂ ಪುತ್ಥಳಿ-ಪ್ರತಿಮೆ ವಿಚಾರದಲ್ಲಿ ಮುಂದಿನ ಸಭೆಯಲ್ಲಿ ಸದಸ್ಯರು ಸೂಚಿಸಿದಂತೆ ಕ್ರಮವಹಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News