×
Ad

ಬೇಸಿಗೆ ಬಂದಿದೆ... ಸಾಂಕ್ರಾಮಿಕ ರೋಗಗಳ ಬಗ್ಗೆ ಕಟ್ಟೆಚ್ಚರ ವಹಿಸಿ: ಆರೋಗ್ಯ ಇಲಾಖೆಗೆ ಉಡುಪಿ ಡಿಸಿ ಸೂಚನೆ

Update: 2025-03-11 20:37 IST

ಉಡುಪಿ, ಮಾ.11: ಬೇಸಿಗೆ ಪ್ರಾರಂಭಗೊಂಡಿದೆ. ಜಿಲ್ಲೆಯಲ್ಲಿ ಜಾತ್ರೆ, ರಥೋತ್ಸವ, ಊರ ಹಬ್ಬ ಸೇರಿ ದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ಕಲುಷಿತ ನೀರು, ಕಲುಷಿತ ಆಹಾರ ಸೇವನೆಯಿಂದ ಕರುಳು ಬೇನೆ, ಕಾಲರಾ, ವಿಷಮಶೀತ ಜ್ವರ, ಕಾಮಾಲೆ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಸ್ಪೋಟಗೊಳ್ಳುವ ಅಥವಾ ಹರಡುವ ಸಾಧ್ಯತೆಗಳಿರುತ್ತವೆ. ಇವುಗಳ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಹಾಗೂ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಸೂಚನೆಗಳನ್ನು ನೀಡಿ ಅವರು ಮಾತನಾಡುತ್ತಿದ್ದರು.

ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಸರಕಾರ ಜಾರಿಗೆ ತಂದಿರುವ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಪ್ರತಿಶತಃ ನೂರರಷ್ಟು ಅನುಷ್ಠಾನಗೊಳಿಸಿ, ಜನರು ಆರೋಗ್ಯವಂತರಾ ಗಿರುವಂತೆ ನೋಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಕೆ.ಪಿ.ಎಂ.ಇ ಅಡಿ ಅನುಮತಿ ಪಡೆದ ಕ್ಲಿನಿಕ್‌ಗಳು ಹಾಗೂ ಆರೋಗ್ಯ ಸಂಸ್ಥೆಗಳು ವೈದ್ಯಕೀಯ ವೆಚ್ಚದ ದರಪಟ್ಟಿ ಪ್ರದರ್ಶನ ಮಾಡುವುದು ಕಡ್ಡಾಯವಾಗಿದ್ದು, ಒಂದು ವೇಳೆ ಪ್ರದರ್ಶನ ಮಾಡದಿದ್ದಲ್ಲಿ ಮೊದಲ ಬಾರಿ ನೋಟೀಸ್ ನೀಡಿ, ಮತ್ತೊಮ್ಮೆ ಪುನರಾವರ್ತಿಸಿದಲ್ಲಿ ಅಂತಹ ಆರೋಗ್ಯ ಸಂಸ್ಥೆ ಅಥವಾ ಕ್ಲಿನಿಕ್‌ಗಳ ಪರವಾನಿಗೆಯನ್ನು ರದ್ದುಪಡಿಸಬೇಕು. ಕ್ಲಿನಿಕ್‌ಗಳು ಹಾಗೂ ನರ್ಸಿಂಗ್‌ಹೋಂಗಳಲ್ಲಿ ನಿರ್ವಹಣೆ ಕೆ.ಪಿ.ಎಂ.ಇ ಕಾಯ್ದೆಯ ನಿಯಮಾನುಸಾರ ಆಗುತ್ತಿದೆಯೇ ಎಂಬ ಬಗ್ಗೆ ಆಗಾಗ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.

11 ಅಂಗಡಿಗಳ ಪರವಾನಿಗೆ ರದ್ದು: ತಂಬಾಕು ಉತ್ಪನ್ನಗಳನ್ನು ಶಾಲಾ ಕಾಲೇಜುಗಳ 100ಮೀ. ವ್ಯಾಪ್ತಿ ಯಲ್ಲಿ ಮಾರಾಟ ಮಾಡುವುದಕ್ಕೆ ನಿರ್ಬಂಧ ವಿದೆ. ಇವುಗಳನ್ನು ಉಲ್ಲಂಘನೆ ಮಾಡಿದ ಮಣಿಪಾಲ ವ್ಯಾಪ್ತಿಯ 11 ಅಂಗಡಿಗಳ ಪರವಾನಿಗೆಯನ್ನು ರದ್ದುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೋಟ್ಪಾ ದಾಳಿ ವೇಳೆ ಈ ಪ್ರಕರಣಗಳು ಕಂಡುಬಂದಲ್ಲಿ ತಪ್ಪದೇ ಅಂತಹ ಅಂಗಡಿಗಳ ಪರವಾನಿಗೆ ಯನ್ನು ರದ್ದುಪಡಿಸಬೇಕು. ಬೈಂದೂರು-ಭಟ್ಕಳ ತಾಲೂಕಿನ ಗಡಿ ಭಾಗದ ಕೆಲವು ಪ್ರದೇಶಗಳಲ್ಲಿ ಕೋಟ್ಪಾ ಕಾಯಿದೆ ಉಲ್ಲಂಘನೆ ಪ್ರಕರಣಗಳು ಹೆಚ್ಚೆಚ್ಚು ಕಂಡುಬರುತ್ತಿವೆ. ಇವುಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ‘ಕೂಲ್ ಲಿಪ್’ ಮೌತ್ ಫ್ರೆಶ್‌ನರ್ ಉತ್ಪನ್ನವು ಮೇಲ್ನೋಟಕ್ಕೆ ತಂಬಾಕು ಉತ್ಪನ್ನವೇ ಆಗಿದ್ದು, ಇವುಗಳ ಬಗ್ಗೆ ಜಾಹಿರಾತು ಪ್ರಚಾರ ಪಡಿಸುವುದು ಹಾಗೂ ಮಾರಾಟಗಾರರು ಮಕ್ಕಳಿಗೆ ಅದನ್ನು ಮಾರಾಟ ಮಾಡುವಂತಿಲ್ಲ. ಈ ಬಗ್ಗೆ ಸೂಕ್ತ ಕ್ರಮತೆಗೆದುಕೊಳ್ಳಬೇಕು ಎಂದರು.

ಮಾಹಿತಿ ನೀಡಿದರೆ ಒಂದು ಲಕ್ಷ ರೂ.

ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ನಿಯಮ ಗಳನ್ನು ಪದೇ ಪದೇ ಉಲ್ಲಂಘನೆ ಮಾಡಿದ ಸ್ಕ್ಯಾನಿಂಗ್ ಸೆಂಟರ್‌ಗಳ ಅನುಮತಿಯನ್ನು ರದ್ದುಪಡಿಸ ಬೇಕು ಎಂದು ಹೇಳಿದ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಯಾವುದೇ ಸೆಂಟರ್ ಕಾನೂನು ಬಾಹಿರವಾಗಿ ಭ್ರೂಣಲಿಂಗ ಪತ್ತೆ ಹಚ್ಚುವ ಬಗ್ಗೆ ಖಚಿತ ಮಾಹಿತಿ ನೀಡಿದವರಿಗೆ 1 ಲಕ್ಷ ರೂ.ವರೆಗೆ ಬಹುಮಾನ ನೀಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News