ಗಂಗೊಳ್ಳಿ ಸಮುದ್ರದಲ್ಲಿ ನಾಡದೋಣಿ ದುರಂತ: ಮೂವರು ಮೀನುಗಾರರು ಸಮುದ್ರಪಾಲು, ಓರ್ವನ ರಕ್ಷಣೆ
ಕುಂದಾಪುರ, ಜು.15: ಸಮುದ್ರದ ಅಲೆಗಳ ಅಬ್ಬರಕ್ಕೆ ನಾಡದೋಣಿ ಯೊಂದು ಮಗುಚಿ ಬಿದ್ದ ಪರಿಣಾಮ ಮೂವರು ಮೀನುಗಾರರು ನೀರು ಪಾಲಾಗಿದ್ದು, ಓರ್ವನನ್ನು ರಕ್ಷಿಸಿದ ಘಟನೆ ಮಂಗಳವಾರ ಬೆಳಗ್ಗೆ 8ಗಂಟೆ ಸುಮಾರಿಗೆ ಗಂಗೊಳ್ಳಿ ಸೀವಾಕ್ ಬಳಿ ನಡೆದಿದೆ.
ನಾಪತ್ತೆಯಾದ ಮೀನುಗಾರರನ್ನು ಗಂಗೊಳ್ಳಿ ನಿವಾಸಿಗಳಾದ ಸುರೇಶ್ ಖಾರ್ವಿ(48), ಜಗನ್ನಾಥ ಖಾರ್ವಿ(50), ಲೋಹಿತ್ ಖಾರ್ವಿ(39) ಎಂದು ಗುರುತಿಸಲಾಗಿದೆ. ಸಂತೋಷ್ ಖಾರ್ವಿ(35) ಎಂಬವರನ್ನು ರಕ್ಷಿಸುವ ಮೂಲಕ ಅಪಾಯದಿಂದ ಪಾರಾಗಿದ್ದಾರೆ.
ಇವರು ಬೆಳಿಗ್ಗೆ 6 ಗಂಟೆ ಸುಮಾರಿಗೆ ಶ್ರೀಹಕ್ರೇಮಠ ಯಕ್ಷೇಶ್ವರಿ ಎಂಬ ಗಿಲ್‌ನೆಟ್ ದೋಣಿಯಲ್ಲಿ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ಮುಗಿಸಿಕೊಂಡು ವಾಪಾಸ್ಸು ಗಂಗೊಳ್ಳಿ ಬಂದರು ಕಡೆ ಬರುತ್ತಿರುವಾಗ ಏಕಾಏಕಿ ಜೋರಾದ ಗಾಳಿ ಮಳೆಯಿಂದ ಬಲವಾದ ಅಲೆಯೊಂದು ದೋಣಿಗೆ ಅಪ್ಪಳಿಸಿತ್ತೆನ್ನಲಾಗಿದೆ.
ಇದರ ಪರಿಣಾಮ ದೋಣಿಯಲ್ಲಿದ್ದ ನಾಲ್ವರೂ ದೋಣಿ ಸಮೇತ ಸಮುದ್ರದ ನೀರಿನಲ್ಲಿ ಮುಳುಗಿದರು. ಅದರಲ್ಲಿ ಸಂತೋಷ ಖಾರ್ವಿ ಈಜಿಕೊಂಡು ಬಂದಿದ್ದು, ಬಳಿಕ ಅಲ್ಲೇ ಸಮೀಪದಲ್ಲಿರುವ ದೋಣಿಯವರು ಅವರನ್ನು ರಕ್ಷಣೆ ಮಾಡಿದರು. ಆದರೆ ಉಳಿದ ಮೂವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿ ದ್ದಾರೆ ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು, ಮೀನುಗಾರರು ದೌಡಾಯಿಸಿ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಸಮುದ್ರ ಪ್ರಕ್ಷುಬ್ಧವಾಗಿರುವುದ ರಿಂದ ಶೋಧ ಕಾರ್ಯಕ್ಕೆ ತೊಡಕು ಉಂಟಾಯಿತು. ಆದರೂ ನಾಪತ್ತೆ ಯಾದ ವರಿಗಾಗಿ ಹುಡುಕುವ ಕಾರ್ಯವನ್ನು ಮುಂದುವರೆಸಲಾಗಿದೆ. ರಾತ್ರಿಯವರೆಗೂ ಮೂವರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದುರಂತದಲ್ಲಿ ದೋಣಿ ಸಮುದ್ರ ಪಾಲಾಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ದೂರಲಾಗಿದೆ.
‘ಬೆಳಗ್ಗೆಯಿಂದಲೇ ಭಾರೀ ಗಾಳಿಮಳೆಯಾಗುತ್ತಿದ್ದು, ಇದರಿಂದ ಸಮುದ್ರ ದಲ್ಲಿ ಭಾರಿ ಗಾತ್ರದ ಅಲೆಗಳು ಅಪ್ಪಳಿಸುತ್ತಿದ್ದವು. ಇದರ ಪರಿಣಾಮ ನಾಪತ್ತೆ ಯಾದವರು ಶೋಧ ಕಾರ್ಯಾಚರಣೆಗೆ ತೊಡಕಾಗಿದೆ’ ಎಂದು ಸ್ಥಳೀಯ ಮೀನುಗಾರ ಮುಖಂಡ ರಾಮಪ್ಪಖಾರ್ವಿ ತಿಳಿಸಿದರು.
ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಯಶವಂತ ಖಾರ್ವಿ, ನಾಪತ್ತೆಯಾದವರ ಕುಟುಂಬಕ್ಕೆ ಸರಕಾರ ತಕ್ಷಣ ಸ್ಪಂದಿಸಿ, ಸಾಂತ್ವನದ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಕುಂದಾಪುರ ಎಸಿ ರಶ್ಮಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷ ಸುಧಾಕರ್ ನಾಯ್ಕ್, ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ಗಂಗೊಳ್ಳಿ ಎಸ್ಸೈ ಪವನ್ ನಾಯ್ಕ್, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಆಶಾ ಮೊದಲಾದವರು ಭೇಟಿ ನೀಡಿದ್ದಾರೆ.
"ಮೂರು ಜನ ಮೀನುಗಾರರು ನಾಪತ್ತೆಯಾಗಿರುವ ದುರಂತ ನೋವು ತಂದಿದೆ. ಬೈಂದೂರು ವ್ಯಾಪ್ತಿ ಯಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದೆ. ಹವಾಮಾನ ವೈಪರೀತ್ಯದಿಂದ ಇಂತಹ ದುರ್ಘಟನೆಗಳಾ ಗುತ್ತಿದ್ದು ಇಂತಹ ದುಸ್ಸಾಹಸ ಮಾಡಬಾರದು. ಉಪ್ಪುಂದ, ಮಲ್ಪೆ, ಮಂಗಳೂರಿನಲ್ಲಿ ಇಂತಹ ಘಟನೆ ಗಳಾಗಿದ್ದು ಮೀನುಗಾರರು ಎಚ್ಚೆತ್ತುಕೊಳ್ಳಬೇಕು. ಆ.1ರವರೆಗೆ ಕಡ್ಡಾಯವಾಗಿ ಸಮುದ್ರಕ್ಕೆ ತೆರಳಲೇ ಬಾರದು. ಈ ಬಗ್ಗೆ ಇಲಾಖೆ, ಸರಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಮೀನುಗಾರ ಸಂಘಟನೆಗಳು ಅರಿವು ಮೂಡಿಸಬೇಕು"
-ಗೋಪಾಲ ಪೂಜಾರಿ, ಮಾಜಿ ಶಾಸಕರು,
ತೀವ್ರ ಶೋಧಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ
ನಾಡದೋಣಿ ಮುಗುಚಿ ನೀರು ಪಾಲಾಗಿರುವ ಮೂವರು ಮೀನುಗಾರರು ಸುರಕ್ಷಿತವಾಗಿ ವಾಪಸ್ ಬರಲಿ ಎಂದು ಪ್ರಾರ್ಥಿಸುವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಘಟನೆ ತಿಳಿದ ತಕ್ಷಣವೇ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು, ಮೀನುಗಾರರ ಪತ್ತೆಗೆ ಅಗತ್ಯ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದೇನೆ. ಮೂವರನ್ನು ಸುರಕ್ಷಿತವಾಗಿ ಕರೆ ತರಲು ಕಾರ್ಯಾಚರಣೆ ನಡೆಸುವಂತೆ ಕರಾವಳಿ ಕಾವಲು ಪಡೆಗೂ ಸೂಚನೆ ನೀಡಲಾಗಿದೆ. ಹವಾಮಾನ ವೈಪರೀತ್ಯದ ಸಂದರ್ಭ ದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತುರ್ತು ಪರಿಹಾರಕ್ಕೆ ಶಾಸಕ ಗಂಟಿಹೊಳೆ ಆಗ್ರಹ
ದೋಣಿ ದುರಂತದಲ್ಲಿ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಅಗತ್ಯ ತುರ್ತು ಕ್ರಮಕ್ಕೆ ಈಗಾಗಲೇ ನಿರ್ದೇಶಿಸಲಾಗಿದೆ. ಮೀನುಗಾರ ಕುಟುಂಬಕ್ಕೆ ಮೀನುಗಾರಿಕೆ ಇಲಾಖೆಯ ಸಂಕಷ್ಟ ಪರಿಹಾರ ನಿಧಿಯಡಿ ಅಗತ್ಯ ಪರಿಹಾರ ಒದಗಿಸಲು ಶಾಸಕರಾದ ಯಶ್ ಪಾಲ್ ಸುವರ್ಣ ಸಹಿತ ಜಿಲ್ಲೆಯ ಶಾಸಕರ ಮೂಲಕ ಮೀನುಗಾರಿಕೆ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ.
ಇಲಾಖೆಯಿಂದ ಕುಟುಂಬಕ್ಕೆ ತಲಾ 10 ಲಕ್ಷ ರೂ.ಗಳ ಪರಿಹಾರವನ್ನು ತುರ್ತಾಗಿ ಒದಗಿಸುವ ವ್ಯವಸ್ಥೆ ಆಗಿದೆ. ಮಳೆಗಾಲದಲ್ಲಿ ಸಮುದ್ರದ ಅಲೆಗಳ ಅಬ್ಬರವೂ ಜೋರಾಗಿರುತ್ತದೆ. ಹೀಗಾಗಿ ನಾಡದೋಣಿ, ಟ್ರಾಲ್ ದೋಣಿ ಮೀನುಗಾರರು ವಿಶೇಷ ಎಚ್ಚರಿಕೆ ವಹಿಸಬೇಕು ಮತ್ತು ಲೈಫ್ ಜಾಕೇಟ್ ಬಳಸುವುದನ್ನು ಆದಷ್ಟು ಕಡ್ಡಾಯ ಮಾಡಿಕೊಳ್ಳುವುದು ಉತ್ತಮ ಎಂದು ಪ್ರಕಟಣೆಯಲ್ಲಿ ಅವರು ಮನವಿ ಮಾಡಿದ್ದಾರೆ.