×
Ad

ವಿಶ್ವ ಬಂಟರ ಸಮ್ಮೇಳನ: ಉಡುಪಿ ನಗರದಲ್ಲಿ ವೈಭವದ ಶೋಭಾಯಾತ್ರೆ

Update: 2023-10-28 18:49 IST

ಉಡುಪಿ : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಎರಡು ದಿನಗಳ ಕಾಲ ನಡೆಯುವ ವಿಶ್ವ ಬಂಟರ ಸಮ್ಮೇಳನ 2023ರ ಪ್ರಯುಕ್ತ ಇಂದು ಬೆಳಗ್ಗೆ ಹಮ್ಮಿಕೊಳ್ಳಲಾದ ಶೋಭಾಯಾತ್ರೆಗೆ ನಗರದ ಬೋರ್ಡ್ ಹೈಸ್ಕೂಲ್ ಎದುರು ಚಾಲನೆ ನೀಡಲಾಯಿತು.

ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, ಬಾರ್ಕೂರು ಭಾರ್ಗವ ಮಹಾಸಂಸ್ಥಾನದ ಶ್ರೀಡಾ.ವಿಶ್ವ ಸಂತೋಷ್ ಭಾರತಿ ಸ್ವಾಮೀಜಿ, ಶ್ರೀಕ್ಷೇತ್ರ ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷ್ಮೀ ನಾರಾಯಣ ಅಸ್ರಣ್ಣ ದೀಪ ಪ್ರಜ್ವಲಿಸಿ, ತೆಂಗಿನ ಒಡೆಯುವ ಮೂಲಕ ಮೆರವಣಿಗೆಗೆ ಹಸಿರು ನಿಶಾನೆ ತೋರಿಸಿದರು.

ಬೋರ್ಡ್ ಹೈಸ್ಕೂಲ್‌ನಿಂದ ಹೊರಟ ಮೆರವಣಿಗೆಯು ಕೆ.ಎಂ ಮಾರ್ಗ, ಕೋರ್ಟ್ ರಸ್ತೆ, ಜೋಡುಕಟ್ಟೆ ಅಜ್ಜರಕಾಡು ಮಾರ್ಗ ವಾಗಿ ಸಾಗಿ ಬಂಟರ ಕ್ರೀಡೋತ್ಸವ ನಡೆಯುವ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾಪ್ತಿಗೊಂಡಿತು. ಮೆರವಣಿಗೆಯಲ್ಲಿ ನೂರಾರು ಕ್ರೀಡಾಪಟುಗಳು, ಬಂಟ ಬಂಧುಗಳು ನಾನಾ ಉಡುಗೆಗಳೊಂದಿಗೆ ಹೆಜ್ಜೆ ಹಾಕಿದರು.

ಕಡೆಗೋಲು ಶ್ರೀಕೃಷ್ಣ, ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವರ ಸ್ಥಬ್ಧ ಚಿತ್ರಗಳು, ಕಂಬಳ ಓಟದ ಕೋಣ, ಚಂಡೆ, ಕೀಲುಕುದುರೆ, ಕೇರಳದ ತೈಯಂ, ಹುಲಿವೇಷ, ಬ್ಯಾಂಡ್ ಸೆಟ್, ಡೋಲು, ವಾದ್ಯ, ನಾದಸ್ವರ, ವೇಷಧಾರಿಗಳು ಗಮನ ಸೆಳೆದರು. ಕ್ರೀಡಾಂಗಣದಲ್ಲಿ ಬಂಟರ ಸಮುದಾಯದ ಕ್ರೀಡಾಪಟುಗಳ ಆಕರ್ಷಕ ಪಥಸಂಚಲನ ನಡೆಯಿತು. ಆ ಬಳಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ಯಶಪಾಲ್ ಎ.ಸುವರ್ಣ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಜತೆ ಕಾರ್ಯದರ್ಶಿ ಚಂದ್ರಹಾಸ ಡಿ. ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಡಾ. ರೋಶನ್ ಕುಮಾರ್ ಶೆಟ್ಟಿ, ಕರ್ನೂರು ಮೋಹನ್ ರೈ, ಸುಪ್ರಸಾದ್ ಶೆಟ್ಟಿ ಬೈಕಾಡಿ, ಮೋಹನ್ ಶೆಟ್ಟಿ ಉಡುಪಿ, ಪುರುಷೋತ್ತಮ್ ಪಿ.ಶೆಟ್ಟಿ, ಮನೋಹರ್ ಎಸ್. ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News