ಹೊರ್ಮುಝ್ ಕೊಲ್ಲಿ ಮುಚ್ಚದಂತೆ ಇರಾನ್ ಗೆ ಅಮೆರಿಕ ಎಚ್ಚರಿಕೆ
ಮಾರ್ಕೊ ರುಬಿಯೊ PC: x.com/Currentreport
ವಾಷಿಂಗ್ಟನ್: ಇರಾನ್ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ, ಹೊರ್ಮುಝ್ ಕೊಲ್ಲಿಯನ್ನು ಮುಚ್ಚುವ ಪ್ರಸ್ತಾವವನ್ನು ಇರಾನ್ ಸಂಸತ್ತು ಅನುಮೋದಿಸಿದೆ. ಆದರೆ ಈ ನಿರ್ಧಾರವನ್ನು ಅಮೆರಿಕ ಖಂಡಿಸಿದ್ದು, ಹೊರ್ಮುಝ್ ಕೊಲ್ಲಿಯನ್ನು ಮುಚ್ಚುವುದು ಇರಾನ್ ಪಾಲಿಗೆ "ಆರ್ಥಿಕ ಆತ್ಮಹತ್ಯೆ"ಯಾದೀತು ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕೊ ರುಬಿಯೊ ಎಚ್ಚರಿಸಿದ್ದಾರೆ.
ಫೋಕ್ಸ್ ನ್ಯೂಸ್ ಜತೆ ರವಿವಾರ ಮಾತನಾಡಿದ ಅವರು, ಹೊರ್ಮುಝ್ ಕೊಲ್ಲಿಯನ್ನು ಮುಚ್ಚದಂತೆ ಚೀನಾ ಇರಾನ್ ಗೆ ಸಲಹೆ ಮಾಡಬೇಕು ಎಂದು ಆಗ್ರಹಿಸಿದರು.
ಇರಾನ್ ಮತ್ತು ಅದರ ಅರೇಬಿಯನ್ ಕೊಲ್ಲಿ ನೆರೆಯ ರಾಷ್ಟ್ರಗಳ ನಡುವೆ ಇರುವ ಹೊರ್ಮುಝ್ ಕೊಲ್ಲಿಯ ಮೂಲಕ ಪ್ರತಿದಿನ ಜಾಗತಿಕ ತೈಲ ಸರಬರಾಜಿನ ಶೇಕಡ 20ರಷ್ಟು ಪಾಲು ಸರಬರಾಜು ಆಗುತ್ತದೆ.
"ಚೀನಾ ಸರ್ಕಾರ ಈ ಬಗ್ಗೆ ಇರಾನ್ ಗೆ ಸೂಚನೆ ನೀಡಬೇಕು; ಏಕೆಂದರೆ ಆ ದೇಶ ತೈಲಕ್ಕಾಗಿ ಹೊರ್ಮುಝ್ ಕೊಲ್ಲಿಯನ್ನು ಅತಿಯಾಗಿ ಅವಲಂಬಿಸಿದೆ" ಎಂದು ರುಬಿಯೊ ಹೇಳಿದ್ದಾರೆ.
"ನೀವು ಅದನ್ನು ಮಾಡಿದರೆ ಅದು ಇನ್ನೊಂದು ಪ್ರಮಾದವಾಗುತ್ತದೆ. ಆ ಕ್ರಮ ಇರಾನ್ ಪಾಲಿಗೆ ಆರ್ಥಿಕ ಆತ್ಮಹತ್ಯೆಯಾಗುತ್ತದೆ. ಈ ಬಗ್ಗೆ ವ್ಯವಹರಿಸುವ ಆಯ್ಕೆಯನ್ನು ನಾವು ಉಳಿಸಿಕೊಳ್ಳುತ್ತೇವೆ; ಆದರೆ ಇತರ ದೇಶಗಳು ಕೂಡಾ ಈ ಬಗ್ಗೆ ಗಮನ ಹರಿಸಬೇಕು. ಇದು ನಮಗಿಂತ ಹೆಚ್ಚಾಗಿ ಇತರ ದೇಶಗಳ ಆರ್ಥಿಕತೆಗೆ ಹಾನಿ ಮಾಡುತ್ತದೆ" ಎಂದು ವಿಶ್ಲೇಷಿಸಿದ್ದಾರೆ.
ಈ ಕೊಲ್ಲಿಯನ್ನು ಮುಚ್ಚುವ ಕ್ರಮ ಮತ್ತಷ್ಟು ಉದ್ವಿಗ್ನತೆಗೆ ಕಾರಣವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಇರಾನ್ ನ ಅಣುಸ್ಥಾವರಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ ಬಳಿಕ ಹೊರ್ಮುಝ್ ಕೊಲ್ಲಿಯನ್ನು ಮುಚ್ಚಲು ಇರಾನ್ ಮುಂದಾಗಿದೆ.