ಭಟ್ಕಳ: ಸೀರತ್ ಅಭಿಯಾನದ ಅಂಗವಾಗಿ “ಪ್ರವಾದಿಯನ್ನು ಅರಿಯಿರಿ” ಪುಸ್ತಕ ಬಿಡುಗಡೆ
ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ವತಿಯಿಂದ ಸೆ. 3ರಿಂದ 13ರವರೆಗೆ ನಡೆಯುತ್ತಿರುವ “ಪ್ರವಾದಿ ಮುಹಮ್ಮದ್ – ನ್ಯಾಯದ ಹರಿಕಾರ” ಸೀರತ್ ಅಭಿಯಾನದ ಅಂಗವಾಗಿ, ಶುಕ್ರವಾರದ ಪ್ರಾರ್ಥನೆಯ ನಂತರ ತಾಲೂಕಿನ ವಿವಿಧ ಮಸೀದಿಗಳಲ್ಲಿ “ಪ್ರವಾದಿ ಮುಹಮ್ಮದ್ (ಸ)ರನ್ನು ಅರಿಯಿರಿ” ಮತ್ತು “ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದ್ (ಸ)ರ ಆದರ್ಶದ ಔಚಿತ್ಯ” ಎಂಬ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಭಟ್ಕಳದ ತಂಝೀಮ್ ಮಿಲ್ಲಿಯಾ ಜಾಮಿಯಾ ಮಸೀದಿಯಲ್ಲಿ ಮೌಲಾನ ಅನ್ಸಾರ್ ಮದನಿ, ಕಾಸರಗೋಡ್ ರೋಷನ್ ಮೊಹಲ್ಲಾ ಜಾಮಿಯಾ ಮಸೀದಿಯಲ್ಲಿ ಮೌಲಾನ ಶಾಫೆ ನದ್ವಿ ಹಾಗೂ ಹೊನ್ನಾವರದ ಟೋಂಕಾ ಖಿಝರ್ ಜಾಮಿಯಾ ಮಸೀದಿಯಲ್ಲಿ ಮೌಲಾನ ಸಲ್ಮಾನ್ ಬಂಗಾಲಿ ನದ್ವಿ ಪುಸ್ತಕ ಬಿಡುಗಡೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಂಝೀಮ್ ಮಿಲ್ಲಿಯಾ ಜಾಮಿಯಾ ಮಸೀದಿ ಕಮಿಟಿ ಅಧ್ಯಕ್ಷ ಹಾಗೂ ಅನಿವಾಸಿ ಉದ್ಯಮಿ ಅತಿಕುರ್ರಹ್ಮಾನ್ ಮುನಿರಿ, “ಪ್ರವಾದಿ ಮುಹಮ್ಮದ್ ಪೈಗಂಬರರ ಸಂದೇಶಗಳು ಸರ್ವಕಾಲಿಕ ಸತ್ಯವಾಗಿದ್ದು, ಅವುಗಳನ್ನು ಅನುಸರಿಸಿದರೆ ಸಮಾಜದಲ್ಲಿ ಶಾಂತಿ ಮತ್ತು ನ್ಯಾಯ ಸ್ಥಾಪನೆ ಸಾಧ್ಯ,” ಎಂದು ಅಭಿಪ್ರಾಯಪಟ್ಟರು.
ಇದಕ್ಕೂ ಮುನ್ನ ಬೆಳಿಗ್ಗೆ ಸಾಗರ್ ರಸ್ತೆ, ಬಸ್ ನಿಲ್ದಾಣ ಹಾಗೂ ಆಟೋ ನಿಲ್ದಾಣದ ಬಳಿ ಸಾರ್ವಜನಿಕರಿಗೆ ಸಿಹಿ ಹಂಚಿ, ಅಭಿಯಾನದ ಮಾಹಿತಿಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ., ಮುಜಾಹಿದ್ ಮುಸ್ತಫಾ, ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್, ಇಂಜಿನಿಯರ್ ನಝೀರ್ ಆಹ್ಮದ್ ಖಾಝಿ, ಸೈಯ್ಯದ್ ಶಕೀಲ್ ಎಸ್.ಎಂ., ಮೌಲಾನ ಯಾಸಿರ್ ಬರ್ಮಾವರ್ ನದ್ವಿ, ಮೌಲಾನ ಝಿಯಾ ರುಕ್ನುದ್ದೀನ್ ನದ್ವಿ, ಲಿಯಾಖತ್ ಅಲಿ ಸೇರಿದಂತೆ ಅನೇಕರು ಹಾಜರಿದ್ದರು.
ಮೂಲ ಕೃತಿ “ಮುಹಮ್ಮದ್ (ಸ) ಕೌನ್?” ಎಂಬುದನ್ನು ಡಾ. ಅಬ್ದುಲ್ ಹಮೀದ್ ಜಾಸಿಮ್ ಅಲ್ ಬಿಲಾಲಿ ಬರೆದಿದ್ದು, ಮಂಗಳೂರಿನ ಸಬಿಹಾ ಫಾತಿಮ ಅವರು ಅದನ್ನು ಕನ್ನಡಕ್ಕೆ ಅನುವಾದಿಸಿ “ಪ್ರವಾದಿ ಮುಹಮ್ಮದ್ (ಸ)ರನ್ನು ಅರಿಯಿರಿ” ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿದ್ದಾರೆ. ಇದೇ ಸಂದರ್ಭದಲ್ಲಿ ಎ. ಫೌಝಿಯಾ ಪುತ್ತಿಗೆ ಬರೆದ “ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದ್ (ಸ)ರ ಆದರ್ಶದ ಔಚಿತ್ಯ” ಕೃತಿಯನ್ನೂ ಬಿಡುಗಡೆ ಮಾಡಲಾಯಿತು.