ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀಧರ ಶೇಟ್ ಗೆ ಭಟ್ಕಳದಲ್ಲಿ ಸನ್ಮಾನ
ಭಟ್ಕಳ: ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಜಾಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶ್ರೀಧರ ಶೇಟ್ ಶಿರಾಲಿ ಅವರಿಗೆ ಶಾಲೆಯಲ್ಲಿ ಅಭಿನಂದನಾ ಸಮಾರಂಭ ಜರುಗಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ರೇಣುಕಾ ನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ ನಾಯ್ಕ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಂಕರ ಗೊಂಡ ಸೇರಿದಂತೆ ಅತಿಥಿಗಳು ಮಾತನಾಡಿ, ಶ್ರೀಧರ ಶೇಟ್ ರವರ ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಾಧನೆಗಳನ್ನು ಮೆಚ್ಚಿ, ಅವರು ಶಾಲೆಯ ಕೀರ್ತಿಯನ್ನು ಹೆಚ್ಚಿಸಿರುವುದಾಗಿ ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀಧರ ಶೇಟ್, ತಮ್ಮ ಗೌರವವನ್ನು ಸಂಪೂರ್ಣ ಶಿಕ್ಷಕ ವೃಂದಕ್ಕೆ ಅರ್ಪಿಸಿದರು. ಸಹೋದ್ಯೋಗಿಗಳ ಸಹಕಾರವೇ ತಮ್ಮ ಸಾಧನೆಗೆ ಕಾರಣವೆಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿ ದ್ದರು. ಶಿಕ್ಷಕ ಗಣೇಶ ಗೌಡ ಸ್ವಾಗತಿಸಿ ನಿರೂಪಿಸಿದರು, ಶಿಕ್ಷಕಿ ಜಯಂತಿ ನಾಯ್ಕ ವಂದಿಸಿದರು.