ಕುಮಟಾ: ಮೇಲಧಿಕಾರಿಯಿಂದ ಶೋಷಣೆ ಆರೋಪ; ಬೇಸತ್ತ ದಲಿತ ಕಂದಾಯ ನಿರೀಕ್ಷಕ ನಾಪತ್ತೆ
ಪುರಸಭೆಯ ಮುಖ್ಯ ಅಧಿಕಾರಿ ಎಂ.ಆರ್. ಸ್ವಾಮಿ ವಿರುದ್ಧ ಭುಗಿಲೆದ್ದ ಆಕ್ರೋಶ; ನೌಕರರಿಂದ ವರ್ಗಾವಣೆಗೆ ಆಗ್ರಹ
ವೆಂಕಟೇಶ್ ರಮೇಶ್ ಹರಿಜನ
ಭಟ್ಕಳ: ಕುಮಟಾ ಪುರಸಭೆಯಲ್ಲಿ ಕಂದಾಯ ನಿರೀಕ್ಷಕರಾಗಿ (ಆರ್.ಐ.) ಕಾರ್ಯನಿರ್ವಹಿಸುತ್ತಿದ್ದ ಯುವ ಅಧಿಕಾರಿಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದು, ಮುಖ್ಯ ಅಧಿಕಾರಿಯ (ಸಿ.ಓ.) ನಿರಂತರ ಮಾನಸಿಕ ಕಿರುಕುಳವೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಈ ಘಟನೆಯು ಸ್ಥಳೀಯರು ಮತ್ತು ಪುರಸಭೆ ನೌಕರರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿ ಅಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡುವಂತೆ ಒತ್ತಾಯ ಕೇಳಿಬಂದಿರುವ ಬಗ್ಗೆ ವರದಿಯಾಗಿದೆ.
ನಾಪತ್ತೆಯಾದ ಯುವ ಕಂದಾಯ ನಿರೀಕ್ಷಕನನ್ನು ಭಟ್ಕಳ ತಾಲೂಕಿನ ಕೋಟೇಶ್ವರ ಹರಿಜನಕೇರಿ ನಿವಾಸಿ, ವೆಂಕಟೇಶ್ ರಮೇಶ್ ಹರಿಜನ (25) ಎಂದು ಗುರುತಿಸಲಾಗಿದೆ. ಕುಮಟಾ ಪುರಸಭೆಯ ಮುಖ್ಯ ಅಧಿಕಾರಿ (ಸಿ.ಓ.) ಎಂ.ಆರ್. ಸ್ವಾಮಿಯಿಂದ ವೆಂಕಟೇಶ್ ಅವರು ದೀರ್ಘಕಾಲದ ಮಾನಸಿಕ ಕಿರುಕುಳವನ್ನು ಎದುರಿಸುತ್ತಿದ್ದರು ಎಂದು ಆರೋಪಿಸಲಾಗಿದ್ದು, ವೆಂಕಟೇಶ್ ಅವರ ತಾಯಿ ಆಶಾ ರಮೇಶ್ ಹರಿಜನ ಅವರು ಭಟ್ಕಳ ಟೌನ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಸಿ.ಓ. ಸ್ವಾಮಿ ಅವರ ನಿರಂತರ ಒತ್ತಡ ಮತ್ತು ಅವಮಾನವನ್ನು ಸಹಿಸಲಾರದೆ ವೆಂಕಟೇಶ್ ರಾತ್ರಿ ಯಾರಿಗೂ ತಿಳಿಸದೆ ಮನೆ ಬಿಟ್ಟು ಹೋಗಿದ್ದು, ಈವರೆಗೆ ಮರಳಿ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಾಪತ್ತೆಯಾಗುವ ಮುನ್ನ ಬರೆದಿಟ್ಟಿರುವ ಪತ್ರದಲ್ಲಿ ತಾನು ಅನುಭವಿಸಿದ ಕಿರುಕುಳದ ಕುರಿತು ವೆಂಕಟೇಶ್ ಅವರು ವಿವರ ನೀಡಿದ್ದಾರೆ. ಈ ಪತ್ರದಲ್ಲಿ, ಮುಖ್ಯ ಅಧಿಕಾರಿ ಎಂ.ಆರ್. ಸ್ವಾಮಿಯು ನನ್ನನ್ನು ಹಲವು ರೀತಿಯಲ್ಲಿ ಅವಮಾನಿಸುತ್ತಿದ್ದರು. ಮುಖ್ಯವಾಗಿ, ನಾನು ದಲಿತ ವ್ಯಕ್ತಿ (ಹರಿಜನ ಸಮುದಾಯ) ಎಂಬ ಕಾರಣಕ್ಕಾಗಿಯೇ ಪದೇ ಪದೇ ಅವಮಾನಕಾರಿ ಮತ್ತು ಜಾತಿ ನಿಂದನೆಯ ಮಾತುಗಳನ್ನು ಬಳಸುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ.
ಎಂ.ಆರ್. ಸ್ವಾಮಿಯು ತಮ್ಮ ಈ ಕಾನೂನುಬಾಹಿರ ಕಾರ್ಯಗಳನ್ನು ಸಮರ್ಥಿಸಿಕೊಳ್ಳಲು, ಕುಮಟಾ ಶಾಸಕ ದಿನಕರ ಶೆಟ್ಟಿ ಅವರ ಹೆಸರನ್ನು ಸುಳ್ಳಾಗಿ ಉಲ್ಲೇಖಿಸಿ, ಹೆಚ್ಚುವರಿ ಒತ್ತಡ ಹೇರುತ್ತಿದ್ದರು ಎಂದು ವೆಂಕಟೇಶ್ ಪತ್ರದಲ್ಲಿ ವಿವರಿಸಿದ್ದಾರೆ. ನಾಪತ್ತೆಯಾಗುವ ಮೊದಲು, ವೆಂಕಟೇಶ್ ಈ ಪತ್ರವನ್ನು ಕಚೇರಿ ಸಿಬ್ಬಂದಿಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಎಂ.ಆರ್. ಸ್ವಾಮಿಯು ಜಾತಿ ನಿಂದನೆಯ ಮಾತುಗಳನ್ನು ಬಳಸುತ್ತಿದ್ದುದಲ್ಲದೇ ಕಂದಾಯ ನಿರೀಕ್ಷಕ ವೆಂಕಟೇಶ್ ಮೇಲೆ ಭ್ರಷ್ಟಾಚಾರಕ್ಕೆ ಒತ್ತಡ (ರೂ.4 ಲಕ್ಷ ಲಂಚದ ಬೇಡಿಕೆ) ಹೇರುವುದು ಹಾಗೂ ಸರ್ಕಾರಿ ಕಟ್ಟಡ ದಾಖಲೆಗಳನ್ನು (ಬಿ ಖಾತೆಯಿಂದ ಎ ಖಾತೆಗೆ) ಬದಲಾಯಿಸಲು ಬಲವಂತಪಡಿಸುತ್ತಿದ್ದರು ಎಂ ಆರೋಪವೂ ಕೇಳಿ ಬಂದಿದೆ.
ಈ ಬಗ್ಗೆ ಭಟ್ಕಳ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೆಂಕಟೇಶ್ ಅವರ ಹುಡುಕಾಟಕ್ಕಾಗಿ ಕಾರ್ಯಾಚರಣೆ ನಡೆಯುತ್ತಿದೆ.
ಕಚೇರಿ ಸಿಬ್ಬಂದಿಯಿಂದ ಆಕ್ರೋಶ
ಕುಮಟಾ ಪುರಸಭೆಯ ನೌಕರರು ಮುಖ್ಯ ಅಧಿಕಾರಿಯ ಅಕ್ರಮ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಎಂ.ಆರ್ ಸ್ವಾಮಿ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಪುರಸಭಾ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಸ್ಥಳೀಯ ನಿವಾಸಿಗಳು ಮತ್ತು ಸರ್ಕಾರಿ ನೌಕರರು ಕೂಡಾ ಸಿ.ಓ. ಅವರ ವರ್ತನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಹಿರಿಯ ಅಧಿಕಾರಿಯೊಬ್ಬರು ಅಧೀನ ಅಧಿಕಾರಿಯನ್ನು ಇಷ್ಟೊಂದು ಅವಮಾನ ಮತ್ತು ಮಾನಸಿಕ ಒತ್ತಡಕ್ಕೆ ಗುರಿಪಡಿಸಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.