×
Ad

ಭಟ್ಕಳ: ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ; ಲಾರಿ ಚಾಲಕ ಬಂಧನ

Update: 2025-10-15 17:43 IST

 ಭಟ್ಕಳ: ಸರ್ಕಾರದ ಅನ್ನಭಾಗ್ಯ ಯೋಜನೆಗೆ ಮೀಸಲಾಗಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕಂಟೇನರ್ ಲಾರಿಯನ್ನು ಅಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. 

ಖಚಿತ ಮಾಹಿತಿಯ ಮೇರೆಗೆ ಆಹಾರ ನಿರೀಕ್ಷಕ ಉದಯ ದ್ಯಾಮಪ್ಪ ತಳವಾರ ಹಾಗೂ ಡಿವೈಎಸ್ಪಿ ಮಹೇಶ್ ಕೆ.ಎಂ. ಅವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಸುಮಾರು 9,500 ಕಿಲೋಗ್ರಾಂ (9.5 ಟನ್) ಪಡಿತರ ಅಕ್ಕಿಯನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಕಂಟೇನರ್ ಮೂಲಕ ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು, ವಶಪಡಿಸಿಕೊಂಡ ಅಕ್ಕಿಯ ಅಂದಾಜು ಮೌಲ್ಯ ರೂ.3.23 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಟ್ಕಳದ ಸಮೀರ್ ಎಂಬಾತನೇ ಈ ಅಕ್ರಮ ಸಾಗಾಟದ ಮುಖ್ಯ ಶಂಕಿತನೆಂದು ಪೊಲೀಸರು ಮಾಹಿತಿ ನೀಡಿದ್ದು, ಶಂಕಿತ ವ್ಯಕ್ತಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸ್ಥಳದಲ್ಲಿದ್ದ ವಾಹನದ ಚಾಲಕ ಪ್ರವೀಣ್ ಎನ್.ಆರ್. (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಆಹಾರ ನಿರೀಕ್ಷಕ ಉದಯ ದ್ಯಾಮಪ್ಪ ತಳವಾರ ಅವರು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪಿಎಸೈ ನವೀನ ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಕಂಟೇನರ್ ಮತ್ತು ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಪ್ರಮುಖ ಆರೋಪಿ ಸೇರಿದಂತೆ ಇತರರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News