ಭಟ್ಕಳ: ನಕಲಿ ವೈದ್ಯನ ವಿರುದ್ಧ ಪ್ರಕರಣ ದಾಖಲು
Update: 2025-10-16 18:18 IST
ಭಟ್ಕಳ: ಎಂಬಿಬಿಎಸ್ ವೈದ್ಯ ಎಂದು ಹೇಳಿಕೊಂಡು ನಕಲಿ ಪ್ರಮಾಣಪತ್ರದ ಆಧಾರದಲ್ಲಿ ಪಟ್ಟಣದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅರೆಕಾಲಿಕ ವೈದ್ಯರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಯನ್ನು ಉಡುಪಿ ಜಿಲ್ಲೆಯ ಗಂಗೊಳ್ಳಿ ಮೂಲದ ಅಬುಮಹ್ಮದ್ ಉಸಾಮಾ ಖಾಜಿ ಅಬ್ದುಲ್ ಹಮೀದ್ ಎಂದು ಗುರುತಿಸಲಾಗಿದೆ. ಸೆ. 2ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ವೇಳೆ, ಆರೋಪಿಯು ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನ ನಕಲಿ ಪ್ರಮಾಣ ಪತ್ರವನ್ನು ಬಳಸಿಕೊಂಡು ಉದ್ಯೋಗ ಪಡೆದಿರುವುದು ಪತ್ತೆಯಾಗಿದೆ.
ಆರೋಪಿಯು ಆಸ್ಪತ್ರೆಯಿಂದ ಸಂಬಳ ಪಡೆಯುತ್ತ ವಂಚನೆ ಎಸಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಸಂಬಂಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.