ಯುವಕ ನಾಪತ್ತೆ
Update: 2025-10-19 20:33 IST
ಭಟ್ಕಳ: ಮದುವೆ ಸಿದ್ಧತೆಗೆ ಚಿನ್ನ ಖರೀದಿಸಲು ಭಟ್ಕಳಕ್ಕೆ ಬಂದಿದ್ದ ಕುಮಟಾದ ಯುವಕನೊಬ್ಬ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕಾಣೆಯಾಗಿರುವ ವ್ಯಕ್ತಿ ಕುಮಟಾ ತಾಲೂಕಿನ ಮದ್ಗುಣಿ ಹಳ್ಳಾರ ಚಿತ್ರಗಿಯ ನಿವಾಸಿ, ವಿದೇಶದಲ್ಲಿ ಉದ್ಯೋಗ ದಲ್ಲಿರುವ ಜಾಕೀರ ಬುಡಾನ ಬೇಗ್ (33) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಜಾಕೀರ ಅವರು ಅಣ್ಣ, ಅತ್ತಿಗೆ ಹಾಗೂ ಅವರ ಮಗಳೊಂದಿಗೆ ಭಟ್ಕಳಕ್ಕೆ ಬಂದಿದ್ದರು. ಬಳಿಕ ಅವರನ್ನು ಗುಳ್ಮಿ ಯಲ್ಲಿರುವ ಸಹೋದರನ ಮಾವನ ಮನೆಗೆ ಕಳುಹಿಸಿ, ತಾವು ಶುಕ್ರವಾರದ ನಮಾಜ್‌ಗಾಗಿ ಭಟ್ಕಳ ಬಸ್ ನಿಲ್ದಾಣದ ಸಮೀಪದ ಮಸೀದಿಗೆ ತೆರಳಿದ್ದರು. ನಮಾಜ್ ಮುಗಿಸಿ ಹೊರಬಂದ ಬಳಿಕ ಅವರು ಕಾಣೆಯಾಗಿದ್ದಾರೆ ಎಂದು ಅವರ ಸಹೋದರ ಗಫೂರ್ ಬೇಗ್ ಭಟ್ಕಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.