ಭಟ್ಕಳ | ನ್ಯೂ ಶಮ್ಸ್ ಸ್ಕೂಲ್ ಮತ್ತು ಶಮ್ಸ್ ಪಿಯು ಕಾಲೇಜಿನಲ್ಲಿ ನೂತನ ಪ್ರಯೋಗಶಾಲೆಗಳ ಉದ್ಘಾಟನೆ
ಭಟ್ಕಳ : ಇಲ್ಲಿನ ತರಬಿಯತ್ ಎಜುಕೇಶನ್ ಸೊಸೈಟಿ ಅಡಿ ನಡೆಯುತ್ತಿರುವ ನ್ಯೂ ಶಮ್ಸ್ ಸ್ಕೂಲ್ ಮತ್ತು ಶಮ್ಸ್ ಪಿಯು ಕಾಲೇಜಿನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಕಂಪ್ಯೂಟರ್ ವಿಭಾಗಗಳ ನಾಲ್ಕು ನೂತನ ಪ್ರಯೋಗಶಾಲೆಗಳ ಉದ್ಘಾಟನೆ ರವಿವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಮ್ಸ್ ಸಂಸ್ಥೆಗಳ ಅಧ್ಯಕ್ಷ ಇಂಜಿನಿಯರ್ ನಝೀರ್ ಅಹ್ಮದ್ ಕಾಜಿ , “ಪ್ರಯೋಗಶಾಲೆಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲವನ್ನು ಬೆಳೆಸುತ್ತದೆ. ಪ್ರಾಯೋಗಿಕ ಅಧ್ಯಯನದ ಮೂಲಕ ಕಲಿಕೆಯನ್ನು ಬಲಪಡಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ” ಎಂದು ಹೇಳಿದರು.
ಮಂಗಳೂರು ಕಾಲೇಜಿನ ದಂತ ವೈದ್ಯಕೀಯ ಪ್ರಾಧ್ಯಾಪಕ ಹಾಗೂ ಸಂಸ್ಥೆಯ ಹಳೆಯ ವಿದ್ಯಾರ್ಥಿ ಡಾ.ಇಮ್ರಾನ್ ಮೊಹ್ತಶಮ್, ಇಂಜಿನಿಯರ್ ಸಫ್ವಾನ್ ಸಾದಾ ಮತ್ತು ಇಸ್ಹಾಕ್ ರುಕ್ನುದ್ದೀನ್ ಪ್ರಯೋಗ ಶಾಲೆಗಳನ್ನು ಉದ್ಘಾಟಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ.ಇಮ್ರಾನ್ ಮೊಹ್ತಶಮ್, “ಮಾಹಿತಿ ಯುಗದಲ್ಲಿ ಜ್ಞಾನ ಸುಲಭವಾಗಿ ಲಭ್ಯ, ಆದರೆ ಅದನ್ನು ಸೂಕ್ತವಾಗಿ ಬಳಸುವುದು ನಿಜವಾದ ಸವಾಲು” ಎಂದರು.
ಖಾದಿರ್ ಮೀರಾ ಪಟೇಲ್, ಸೈಯದ್ ಶಕೀಲ್ ಎಸ್ಎಂ, ಸೈಯದ್ ಯಾಸಿರ್ ಬರ್ಮಾವರ್ ನದ್ವಿ, ಸೈಯದ್ ಕುತುಬ್ ಬರ್ಮಾವರ್ ನದ್ವಿ, ಜಿಯಾ ಉರ್ ರಹಮಾನ್ ರುಕ್ನುದ್ದೀನ್ ನದ್ವಿ, ಮೌಲಾನ ಅಝೀಝುರ್ ರಹಮಾನ್ ನದ್ವಿ, ಶಮ್ಸ್ ಪಿಯು ಕಾಲೇಜಿನ ಆಡಳಿತ ಪ್ರಾಂಶುಪಾಲ ಎಂ.ಆರ್.ಮಾನ್ವಿ ಮತ್ತಿತರರು ಇದ್ದರು.
ನ್ಯೂ ಶಮ್ಸ್ ಸ್ಕೂಲ್ ಪ್ರಾಂಶುಪಾಲ ಲಿಯಾಖತ್ ಅಲಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿ ಆಫ್ಹಾಮ್ ಮಿಸ್ಬಾಹ್ ಅವರ ಕುರ್‌ಆನ್ ಪಠಣದಿಂದ ಕಾರ್ಯಕ್ರಮ ಆರಂಭಗೊಂಡು, ಹಾಫೀಝ್ ಅಬ್ದುಲ್ ಘನಿ ರುಕ್ನುದ್ದೀನ್ ಅವರ ಪ್ರಾರ್ಥನೆಯೊಂದಿಗೆ ಸಮಾರೋಪಗೊಂಡಿತು.