ಹೊನ್ನಾವರ: ಬಸ್–ಕಾರು ಢಿಕ್ಕಿ; ಓರ್ವ ಸ್ಥಳದಲ್ಲೇ ಮೃತ್ಯು, ಹತ್ತು ಮಂದಿಗೆ ಗಂಭೀರ ಗಾಯ
ಹೊನ್ನಾವರ (ಉತ್ತರ ಕನ್ನಡ): ಹೊನ್ನಾವರ ತಾಲ್ಲೂಕಿನ ಸೂಳೆಮುರ್ಕಿ ಕ್ರಾಸ್ ಬಳಿ ಶನಿವಾರ ಬೆಳಿಗ್ಗೆ ಖಾಸಗಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಓರ್ವ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹತ್ತು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದವರಿಗೂ ಗಾಯಗಳಾಗಿವೆ.
ಮಾಹಿತಿ ಪ್ರಕಾರ, ಬೆಂಗಳೂರಿನಿಂದ ಭಟ್ಕಳ–ಗೇರುಸೊಪ್ಪ ಮಾರ್ಗವಾಗಿ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ಹೊನ್ನಾವರದಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಬಸ್ ನಿಯಂತ್ರಣ ತಪ್ಪಿ ಪಕ್ಕದ ಕಂದಕಕ್ಕೆ ಉರುಳಿದೆ.
ಅಪಘಾತದ ಸಮಯದಲ್ಲಿ ಬಸ್‌ನಲ್ಲಿ ಸುಮಾರು ಮೂವತ್ತು ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಗಾಯಾಳುಗಳನ್ನು ತಕ್ಷಣವೇ ಆಂಬುಲೆನ್ಸ್ ಮೂಲಕ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಹೊನ್ನಾವರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.