ಲೋಕಾಯುಕ್ತದಂತಹ ಸಾಂವಿಧಾನಿಕ ಸಂಸ್ಥೆಗಳ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ: ಡಿ.ಕೆ.ಶಿವಕುಮಾರ್
ಕಾರವಾರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಉದ್ಘಾಟನಾ ಸಮಾರಂಭ
ಕಾರವಾರ: ಲೋಕಾಯುಕ್ತ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಅದರ ವಿಚಾರಗಳಲ್ಲಿ ನಾವು ಯಾರೂ ತಲೆ ಹಾಕುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.
ಕಾರವಾರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಉಪಮುಖ್ಯಮಂತ್ರಿಗಳು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಲೋಕಾಯುಕ್ತದಂತಹ ಸಾಂವಿಧಾನಿಕ ಸಂಸ್ಥೆಗಳ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಯಾರು ಸಿಕ್ಕಿಬಿದ್ದಿದ್ದಾರೆ, ಏನು ತಪ್ಪಾಗಿದೆ ಎನ್ನುವುದರ ಕುರಿತು ಆಯಾ ವ್ಯಕ್ತಿಗಳೇ ಅಥವಾ ಬಿಜೆಪಿ ನಾಯಕರು ಸ್ಪಷ್ಟನೆ ನೀಡಬೇಕು. ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ದೂರು ದಾಖಲಾದ ನಂತರ ಸ್ವತಂತ್ರ ಸಂಸ್ಥೆಯಾದ ಲೋಕಾಯುಕ್ತ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಇದೇ ವೇಳೆ, ಪಕ್ಷದ ಕೆಲವು ನಾಯಕರ ಹೇಳಿಕೆಗಳ ಬಗ್ಗೆಯೂ ಎಚ್ಚರಿಕೆ ನೀಡಿದ ಡಿಸಿಎಂ, ಇಕ್ಬಾಲ್ ಹುಸೇನ್, ರವಿ ಹಾಗೂ ಶಿವಗಂಗ ಅವರು ಬಾಯಿ ಮುಚ್ಚಿಕೊಂಡಿರಬೇಕು. ಅವರು ಮೌನವಾಗಿದ್ದರೆ ತಮಗೆ ಒಳ್ಳೆಯದಾಗುತ್ತದೆ ಎಂದು ಖಡಕ್ ಸಂದೇಶ ರವಾನಿಸಿದರು. ಇದಲ್ಲದೆ, ಶಾಸಕರ ವಿದೇಶ ಪ್ರವಾಸದ ಕುರಿತಾದ ಪ್ರಶ್ನೆಗೆ ಸಂಕ್ಷಿಪ್ತವಾಗಿ ಉತ್ತರಿಸಿದ ಅವರು, ಹೋದವರೆಲ್ಲ ನಮ್ಮವರೇ ಆಗಿದ್ದು, ಅವರು ಮರಳಿದ ಬಳಿಕ ಮಾತನಾಡುವುದಾಗಿ ಹೇಳಿದರು.