ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞರ ಕೊರತೆ: ಕ್ರಮಕ್ಕೆ ಆಗ್ರಹ
ಭಟ್ಕಳ: ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳ ತೀವ್ರ ಕೊರತೆ ಉಂಟಾಗಿದ್ದು, ಸಾರ್ವಜನಿಕರು ಗಂಭೀರ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ಆಟೋ ಚಾಲಕರ ಸಂಘ ಮತ್ತು ಸಾಮಾಜಿಕ ಹೋರಾಟಗಾರರು ಪ್ರತ್ಯೇಕವಾಗಿ ಮನವಿ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯ ಆಟೋ ಚಾಲಕರ ಸಂಘದ ವತಿಯಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಆಸ್ಪತ್ರೆಯಲ್ಲಿ ಮೂಳೆ (ಆರ್ಥೋಪೆಡಿಕ್) ಹಾಗೂ ಹೆರಿಗೆ ಸಂಬಂಧಿತ ತಜ್ಞ ವೈದ್ಯರ ಕೊರತೆ ಉಂಟಾಗಿರುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಒಂದು ಕಾಲದಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದ ಈ ಆಸ್ಪತ್ರೆ, ಇದೀಗ ತಜ್ಞರ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ತಿಳಿಸಿದ್ದಾರೆ.
ವೈದ್ಯರ ಕೊರತೆಯಿಂದ ತುರ್ತು ಚಿಕಿತ್ಸೆಗೆ ಭಟ್ಕಳದ ಬಡ ರೋಗಿಗಳು ದೂರದ ಖಾಸಗಿ ಆಸ್ಪತ್ರೆಗಳಿಗೆ ತೆರಳ ಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ವೆಚ್ಚವನ್ನು ಭರಿಸಲು ಆಗದೆ ಅನೇಕರು ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ ಎಂದು ಆಟೋ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ. ದಿನಗೂಲಿ ಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಇನ್ನೊಂದೆಡೆ, ‘ಯಂಗ್‌ಓನ್‌ಇಂಡಿಯಾ’ ಸಂಸ್ಥೆಯ ಮಾಲಕರು ಹಾಗೂ ಸಾಮಾಜಿಕ ಹೋರಾಟಗಾರರಾದ ಮಾಸ್ತಪ್ಪ ನಾಯ್ಕ ಅವರು ತಹಶೀಲ್ದಾರರು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಆಸ್ಪತ್ರೆ ಯಲ್ಲಿ ಸ್ತ್ರೀರೋಗ ತಜ್ಞರು, ಕಣ್ಣಿನ ತಜ್ಞರು, ಅಸ್ಥಿ ತಜ್ಞರು, ಫಾರ್ಮಸಿಸ್ಟ್‌ಗಳು, ಗ್ರೂಪ್-ಡಿ ನೌಕರರು ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳ ಕೊರತೆ ತೀವ್ರವಾಗಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಗುಣಮಟ್ಟದ ಔಷಧಿಗಳ ಅಭಾವವೂ ಇರುವುದಾಗಿ ಅವರು ತಿಳಿಸಿದ್ದಾರೆ.
ತಾಲೂಕಿನ ಬಹುತೇಕ ಬಡ ಮತ್ತು ಮಧ್ಯಮ ವರ್ಗದ ಜನರು ಸರ್ಕಾರಿ ಆಸ್ಪತ್ರೆಗೆ ಅವಲಂಬಿತರಾಗಿರುವ ಹಿನ್ನೆಲೆ ಯಲ್ಲಿ, ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರೆಯದೆ ಗರ್ಭಿಣಿಯರು, ವೃದ್ಧರು ಹಾಗೂ ತುರ್ತು ಚಿಕಿತ್ಸೆಗೆ ಒಳಪಡುವ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆ ಅಪಘಾತಗಳಂತಹ ತುರ್ತು ಸಂದರ್ಭಗಳಲ್ಲಿ ತಕ್ಷಣ ಚಿಕಿತ್ಸೆ ಸಿಗದಿದ್ದರೆ ಸಾವು-ನೋವುಗಳಂತಹ ದುರ್ಘಟನೆಗಳು ಸಂಭವಿಸುವ ಸಾಧ್ಯತೆ ಹೆಚ್ಚುತ್ತಿದೆ ಎಂಬ ಆತಂಕವೂ ವ್ಯಕ್ತವಾಗಿದೆ.
ಆದ್ದರಿಂದ ತಕ್ಷಣವೇ ಅಗತ್ಯ ತಜ್ಞ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಬೇಕು, ಆಸ್ಪತ್ರೆಯಲ್ಲಿ ಗುಣ ಮಟ್ಟದ ಔಷಧಿಗಳ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಶೀಘ್ರ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹಿರಿಯ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಕಚೇರಿಯ ಶಿರಸ್ತೇದಾರ ಪ್ರವೀಣ್ ಕುಮಾರ್, ರಾಧಿಕಾ ಶಾಸ್ತ್ರೀ ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿ ಅರುಣ್ ಕುಮಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆಟೋ ಚಾಲಕರಾದ ಗಣೇಶ ಹಳ್ಳೇರ, ಪರಮೇಶ್ವರ ನಾಯ್ಕ, ಮಂಜುನಾಥ ನಾಯ್ಕ, ಶಂಕರ್ ನಾಯ್ಕ, ಸುರೇಶ್ ನಾಯ್ಕ, ಶ್ರೀದರ್ ನಾಯ್ಕ, ಸೋಮಯ್ಯ ನಾಯ್ಕ ಹಾಗೂ ಸಾರ್ವಜನಿಕರಾದ ವಿನಾಯಕ ನಾಯ್ಕ, ಬಾಬು, ಕೃಷ್ಣ ನಾಯ್ಕ, ಅಶೋಕ ನಾಯ್ಕ, ವಿಶ್ವ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.