×
Ad

ಭಟ್ಕಳ: ಶಮ್ಸುದ್ದೀನ್ ಸರ್ಕಲ್‌ನ ಕ್ಲಾಕ್‌ ಟವರ್‌ ನೆಲಸಮ

Update: 2026-03-01 11:26 IST

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ವಿಸ್ತರಣಾ ಕಾಮಗಾರಿಯ ಭಾಗವಾಗಿ ಭಟ್ಕಳದ ಶಮ್ಸುದ್ದೀನ್ ಸರ್ಕಲ್‌ನಲ್ಲಿ ಇದ್ದ ಕ್ಲಾಕ್‌ ಟವರ್‌ ಅನ್ನು ಶನಿವಾರ ನೆಲಸಮ ಮಾಡಲಾಯಿತು.

ಪೊಲೀಸ್‌ ಇನ್ಸ್‌ಪೆಕ್ಟರ್‌ ದಿವಾಕರ್ ಅವರ ನೇತೃತ್ವದಲ್ಲಿ ಮಧ್ಯಾಹ್ನ ಸುಮಾರು 3 ಗಂಟೆಗೆ ಜೆಸಿಬಿ ಯಂತ್ರಗಳ ಸಹಾಯದಿಂದ ಧ್ವಂಸ ಕಾರ್ಯ ಆರಂಭಿಸಲಾಯಿತು. ಟವರ್‌ನ ಮೇಲ್ಭಾಗದಲ್ಲಿ ಅಳವಡಿಸಿದ್ದ ಸುಮಾರು ಎರಡು ಟನ್‌ ತೂಕದ ಗ್ರಾನೈಟ್‌ ಕಲ್ಲನ್ನು ತೆರವುಗೊಳಿಸಲು ಎರಡು ಗಂಟೆಗೂ ಅಧಿಕ ಸಮಯ ಹಿಡಿಯಿತು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತಾತ್ಕಾಲಿಕ ವ್ಯತ್ಯಯ ಉಂಟಾಗಿದ್ದು, ಸಂಜೆ 6 ಗಂಟೆಯ ವೇಳೆಗೆ ಟವರ್‌ ಸಂಪೂರ್ಣವಾಗಿ ನೆಲಸಮಗೊಂಡಿತು.

ಈ ಕ್ಲಾಕ್‌ ಟವರ್‌ ಅಂದಿನ ಮೈಸೂರು ಸಂಸ್ಥಾನದ 1950ರ ದಶಕದ ಉಪ ಹಣಕಾಸು ಸಚಿವರಾಗಿದ್ದ ಜುಕಾಕೊ ಶಮ್ಸುದ್ದೀನ್ ಅವರ ಹೆಸರಿನಲ್ಲಿ ಶಮ್ಸುದ್ದೀನ್ ಸರ್ಕಲ್‌ನಲ್ಲಿ 2002ರಲ್ಲಿ ನಿರ್ಮಿಸಲಾಗಿತ್ತು. ಭಟ್ಕಳದ ಉದ್ಯಮಿ ಹಾಗೂ ಪ್ಯೂರ್‌ ಗೋಲ್ಡ್‌ ಸಂಸ್ಥೆಯ ಮಾಲೀಕ ಶಬೀಬ್‌ ಕೋಲಾ ಅವರು ಸುಮಾರು ರೂ.10 ಲಕ್ಷ ವೆಚ್ಚದಲ್ಲಿ ಇದನ್ನು ನಿರ್ಮಿಸಿದ್ದರು ಎನ್ನಲಾಗಿದೆ.

ನಾಲ್ಕು ಕಂಬಗಳ ಮೇಲೆ ನಿರ್ಮಿಸಲಾದ ಈ ಟವರ್‌ನ ಮೇಲ್ಭಾಗದಲ್ಲಿ ಭಾರೀ ಗ್ರಾನೈಟ್‌ ಕಲ್ಲು ಅಳವಡಿಸಲಾಗಿತ್ತು. ನಾಲ್ಕೂ ದಿಕ್ಕುಗಳಲ್ಲಿ ಗಡಿಯಾರಗಳನ್ನು ಅಳವಡಿಸಲಾಗಿದ್ದು, ಇದು ನಗರದ ಪ್ರಮುಖ ಗುರುತುಗಳಲ್ಲಿ ಒಂದಾಗಿ ಪರಿಣಮಿಸಿತ್ತು.

ಶಬೀಬ್‌ ಕೋಲಾ ಅವರ ಪ್ರಕಾರ, ಟವರ್‌ ನಿರ್ಮಾಣದ ಉದ್ದೇಶ ಭಟ್ಕಳದಲ್ಲಿ ವಿವಿಧ ಧರ್ಮೀಯರ ನಡುವಿನ ಏಕತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವುದಾಗಿತ್ತು.

ಹೆದ್ದಾರಿ ವಿಸ್ತರಣೆಯ ಬಳಿಕ ಶಮ್ಸುದ್ದೀನ್ ಸರ್ಕಲ್‌ನ ರೂಪರೇಖೆ ಬದಲಾಗುತ್ತಿರುವ ಹಿನ್ನೆಲೆಯಲ್ಲಿ, ಈ ಸ್ಥಳಕ್ಕೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಹೊಸ ವಿನ್ಯಾಸ ನೀಡಲಾಗುತ್ತದೆ ಎಂಬುದು ಗಮನಾರ್ಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News