ಭಟ್ಕಳ: ಶಾಲಾ ವಾಹನ ಪಲ್ಟಿ; 13 ವಿದ್ಯಾರ್ಥಿಗಳಿಗೆ ಗಾಯ
ಭಟ್ಕಳ: ತಾಲೂಕಿನ ಬೆಳಲಖಂಡ ಗ್ರಾಮದ ಕಡಸಲಗದ್ದೆ ಪುರಸಭೆ ಕಸ ಹಾಕುವ ಸ್ಥಳದ ಸಮೀಪದ ರಾಜ್ಯ ಹೆದ್ದಾರಿ–50 ಭಟ್ಕಳ–ಸಾಗರ ರಸ್ತೆಯಲ್ಲಿ ಶಾಲಾ ವಾಹನ ಪಲ್ಟಿಯಾದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಮಾಹಿತಿ ಪ್ರಕಾರ, ನಾಗುವಳ್ಳಿ ಹಾಗೂ ಹಾಡುವಳ್ಳಿ, ಕುಂಟವಾಣಿ ಭಾಗದ ಶಾಲಾ ಮಕ್ಕಳನ್ನು ಭಟ್ಕಳದತ್ತ ಕರೆದುಕೊಂಡು ಬರುತ್ತಿದ್ದ ವೇಳೆ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಲಾಗುತ್ತಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಅಪಘಾತದ ಪರಿಣಾಮವಾಗಿ ವಾಹನದಲ್ಲಿದ್ದ 13 ಮಂದಿ ಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಗಾಯಗೊಂಡ ವಿದ್ಯಾರ್ಥಿಗಳಲ್ಲಿ ವಾಸುಕಿ (7), ಪ್ರದ್ವಿತ್ (12), ನಕ್ಷಾ (8), ಅಕಾಂಶ (11), ಅಭಿನಂದನ (6), ಜೋಸ್ಮಿನ್ (11), ಜಿಯೋನಾ ರೆಜಿ (12), ಟ್ರೇಸಾ (14), ದಿಶಾ (6), ತಮನ್ನಾ (10), ಸನಾತ್ (9), ಅರವ್ (5) ಹಾಗೂ ವಂಶಿತಾ (11) ಸೇರಿದ್ದಾರೆ.
ಚಾಲಕನಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನೆಲ್ಲ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ. ನಾಗುವಳ್ಳಿ ಮೂಲದ ಚಾಲಕ ಮಂಜುನಾಥ ಜಟ್ಟಪ್ಪ ನಾಯ್ಕ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.