ಬೈಲೂರಿನಲ್ಲಿ ಮನೆಗಳ ಮೇಲೆ ಕಲ್ಲು ತೂರಾಟ: ಎಂಟು ಮಂದಿ ಬಾಲಕರು ವಶಕ್ಕೆ
ಭಟ್ಕಳ: ಮುರುಡೇಶ್ವರ ಸಮೀಪದ ಬೈಲೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ವರದಿಯಾಗಿದೆ. ಪ್ರಕರಣ ಸಂಬಂಧ ಪೊಲೀಸರು ಎಂಟು ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮಾಹಿತಿ ಪ್ರಕಾರ, ಕಳೆದ ಕೆಲವು ದಿನಗಳಿಂದ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಅಪ್ರಾಪ್ತರ ಗುಂಪು ಚೇಷ್ಟೆಗಾಗಿ ಮನೆಗಳ ಮೇಲೆ ಕಲ್ಲು ಹಾಗೂ ಇತರೆ ವಸ್ತುಗಳನ್ನು ತೂರಿ ಪರಾರಿಯಾಗುತ್ತಿತ್ತು ಎನ್ನಲಾಗಿದೆ. ಸೋಮವಾರ ರಾತ್ರಿ ಕಲ್ಲು ತೂರಲು ಬಂದಿದ್ದಾಗ ಸ್ಥಳೀಯರು ಬಾಲಕರನ್ನು ಹಿಡಿದು ಮುರುಡೇಶ್ವರ ಪೊಲೀಸರಿಗೆ ಒಪ್ಪಿಸಿದ್ದಾರೆ. ಒಂದು ದಿನ ಮೊದಲು ಇದೇ ಗುಂಪು ಕೆಲವು ವಾಸಸ್ಥಳಗಳಲ್ಲಿಯೂ ಕಲ್ಲು ತೂರಾಟ ನಡೆಸಿದರೆಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ.
ಘಟನೆ ತಿಳಿದು ಸ್ಥಳೀಯರು ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ. ಅವರು ಕಾರವಾರದಿಂದ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಎಲ್ಲ ಆರೋಪಿತರೂ ಅಪ್ರಾಪ್ತರಾಗಿರುವುದರಿಂದ ಅವರನ್ನು ಠಾಣೆಯಲ್ಲಿ ಇರಿಸದೇ, ನಿಯಮಾನುಸಾರ ಕಾರವಾರದ ಕಿಶೋರ ಸಂರಕ್ಷಣಾ ಕೇಂದ್ರಕ್ಕೆ ರವಾನಿಸಲಾಗಿದೆ. ಮಂಗಳವಾರ ಸಂಜೆ ಅವರನ್ನು ಬಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯಕೀಯ ಪರೀಕ್ಷೆಯಲ್ಲಿ ಕೆಲವರು ‘ವೈಪ್’ ಮೂಲಕ ನಶೆ ಮಾಡಿಕೊಂಡಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಅಪ್ರಾಪ್ತರಿಗೆ ವೈಪ್ ಮಾರಾಟ ಮಾಡಿದ ಅನುಮಾನದ ಮೇರೆಗೆ ಭಟ್ಕಳದ ಒಬ್ಬ ವ್ಯಕ್ತಿಯನ್ನು ವಿಚಾರಣೆಗಾಗಿ ಕರೆಯಲಾಗಿದೆ ಎನ್ನಲಾಗಿದೆ.
ಗ್ರಾಮದಲ್ಲಿ ಈಗ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಶಾಂತಿ ಕಾಪಾಡುವಂತೆ ಹಾಗೂ ಘಟನೆಗೆ ಯಾವುದೇ ರೀತಿಯ ಕೋಮು ಬಣ್ಣ ನೀಡಬಾರದೆಂದು ಪೊಲೀಸರು ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಸಹ ಸೂಚಿಸಲಾಗಿದೆ.