ಫೆ. 22ರಂದು ಅಂಕೋಲ–ಕಾರವಾರ ಭಾಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ
ಭಟ್ಕಳ: ಫೆ. 22ರಂದು ಅಂಕೋಲ–ಕಾರವಾರ ಭಾಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಅರಣ್ಯವಾಸಿಗಳಲ್ಲಿ ಹೊಸ ನಿರೀಕ್ಷೆ ಮೂಡಿದೆ. “ಜಿಲ್ಲೆಯಲ್ಲಿ ಲಕ್ಷಕ್ಕೂ ಮಿಕ್ಕಿ ಅರಣ್ಯವಾಸಿಗಳು ಸಾಗುವಳಿ ಹಕ್ಕಿನಿಂದ ವಂಚಿತರಾಗುವ ಭೀತಿಯಲ್ಲಿದ್ದಾರೆ. ಮುಖ್ಯಮಂತ್ರಿಗಳ ಈ ಭೇಟಿ ನಿರ್ಣಾಯಕ ಹಂತವಾಗ ಬೇಕು,” ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಸಾವಿರಾರು ಅರ್ಜಿಗಳಲ್ಲಿ ಬಹುತೇಕವು ತಿರಸ್ಕೃತವಾಗಿರುವುದು ಅರಣ್ಯವಾಸಿಗಳಲ್ಲಿ ಆತಂಕ ಉಂಟುಮಾಡಿದೆ. “ಸುಮಾರು 72 ಸಾವಿರ ಅರ್ಜಿಗಳು ತಿರಸ್ಕಾರವಾಗಿವೆ. ಇನ್ನೊಂದೆಡೆ ಅರಣ್ಯ ಇಲಾಖೆ ಒಕ್ಕಲೆಬ್ಬಿಸುವ ಕ್ರಮ ಕೈಗೊಳ್ಳುತ್ತಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ,” ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.
1978ರ ಪೂರ್ವದಿಂದ ಸಾಗುವಳಿ ಮಾಡುತ್ತಿರುವ 2,513 ಕುಟುಂಬಗಳ 3,235 ಎಕರೆ ಭೂಮಿಗೆ ಕೇಂದ್ರ ಸರ್ಕಾರದ ಅಂತಿಮ ಅಧಿಸೂಚನೆ ಬಾಕಿಯಿದೆ. ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗಿಂತ ಮೊದಲು ಹಂಗಾಮಿ ಲಾಗಣಿಯಾಗಿ ನೀಡಿದ ಭೂಮಿಯನ್ನು ಖಾಯಂ ಮಾಡುವ ವಿಚಾರವೂ ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪ ಟ್ಟಿದೆ. “ದಾಖಲೆಗಳ ಸಮಸ್ಯೆ ಹೇಳಿ ಜನರನ್ನು ಹಕ್ಕಿನಿಂದ ವಂಚಿಸುವುದು ಸರಿಯಲ್ಲ,” ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಸುಮಾರು 80 ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿ ಕುಟುಂಬಗಳಿವೆ. ಜಿಲ್ಲೆಯ ಒಟ್ಟು ಜನಸಂಖ್ಯೆಯೊಂದ ಮೂರರಷ್ಟು ಜನರು ಅರಣ್ಯಾಧಾರಿತ ಬದುಕು ನಡೆಸುತ್ತಿರುವುದು ಗಮನಾರ್ಹ. “ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಗಮನಕ್ಕೆ ನಮ್ಮ ಸಮಸ್ಯೆ ತರುತ್ತಾರೆ ಎಂಬ ವಿಶ್ವಾಸ ಇದೆ,” ಎಂದು ನಾಯ್ಕ ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯಾನಂತರ ಜಿಲ್ಲೆಯಲ್ಲಿ ವಿವಿಧ ಯೋಜನೆಗಳಿಗೆ 64 ಸಾವಿರ ಹೆಕ್ಟೇರ್‌ಗೂ ಅಧಿಕ ಅರಣ್ಯ ಭೂಮಿಯನ್ನು ಅರಣ್ಯೇತರ ಬಳಕೆಗೆ ನೀಡಲಾಗಿದೆ. “ದೇಶದ ಅಭಿವೃದ್ಧಿಗೆ ಭೂಮಿ ನೀಡಲಾಗಿದೆ. ಆದರೆ ಬದುಕಿಗಾಗಿ 53 ಸಾವಿರ ಎಕರೆ ಭೂಮಿ ಬಿಡುಗಡೆ ಮಾಡಲು ಸರ್ಕಾರ ಯಾಕೆ ಹಿಂಜರಿಯಬೇಕು?” ಎಂದು ಅವರು ಪ್ರಶ್ನಿಸಿದರು.
ಜಿಪಿಎಸ್ ಅಳತೆ, ಅರಣ್ಯ ಸಿಬ್ಬಂದಿಗಳ ಕಿರಿಕಿರಿ ಹಾಗೂ ಮಾರ್ಚ್ ಅಂತ್ಯದೊಳಗೆ 1,450 ಎಕರೆ ಪ್ರದೇಶದಲ್ಲಿ ಒಕ್ಕಲೆಬ್ಬಿಸುವ ಮಾನದಂಡದ ಚರ್ಚೆ ಅರಣ್ಯವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ.
“ನಾವು ಯಾರ ಭೂಮಿಯನ್ನೂ ಕಬಳಿಸಿಲ್ಲ. ನಮ್ಮ ಪೂರ್ವಜರು ಬದುಕಿದ ನೆಲದಲ್ಲೇ ಬದುಕುತ್ತಿದ್ದೇವೆ. ಕಾನೂನುಬದ್ಧವಾಗಿ ಹಕ್ಕು ನೀಡಬೇಕು,” ಎಂಬುದು ಅರಣ್ಯವಾಸಿಗಳ ಒತ್ತಾಯವಾಗಿದೆ.
ಮುಖ್ಯಮಂತ್ರಿಗಳ ಈ ಭೇಟಿ ಅರಣ್ಯವಾಸಿಗಳ ದೀರ್ಘಕಾಲದ ನಿರೀಕ್ಷೆಗೆ ಸ್ಪಷ್ಟ ಉತ್ತರ ನೀಡಬಹುದೇ ಎಂಬುದನ್ನು ಜಿಲ್ಲೆಯ ಜನರು ಕಾದುನೋಡುತ್ತಿದ್ದಾರೆ.
• ಎಂ.ಆರ್.ಮಾನ್ವಿ