ಪೆಟ್ರೋಲ್ ಕೊರತೆ ಆತಂಕ: ಭಟ್ಕಳದಲ್ಲಿ ಬಂಕ್‌ಗಳ ಮುಂದೆ ವಾಹನಗಳ ಸಾಲು
ಭಟ್ಕಳ: ಪಶ್ಚಿಮ ಏಷ್ಯಾ ಭಾಗದಲ್ಲಿ ಯುದ್ಧ ವಾತಾವರಣ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಕೊರತೆ ಉಂಟಾಗಬಹುದು ಎಂಬ ಮಾತು ಹರಿದಾಡುತ್ತಿದ್ದು, ಬುಧವಾರ ಭಟ್ಕಳ ಪಟ್ಟಣದ ಹಲವು ಪೆಟ್ರೋಲ್ ಬಂಕ್‌ಗಳಲ್ಲಿ ಜನರು ದೀರ್ಘ ಸಾಲಿನಲ್ಲಿ ನಿಂತು ಇಂಧನ ತುಂಬಿಸಿಕೊಂಡ ದೃಶ್ಯ ಕಂಡುಬಂದಿತು.
ಅಮೆರಿಕಾ–ಇಸ್ರೇಲ್ ದಾಳಿ ಮತ್ತು ಇರಾನ್ ಪ್ರತಿದಾಳಿಯ ಸುದ್ದಿಗಳು ಹರಿದಾಡುತ್ತಿದ್ದಂತೆಯೇ ಜನರಲ್ಲಿ ಆತಂಕ ಹೆಚ್ಚಾಗಿದೆ. ಇರಾನ್ ಹೋರ್ಮುಜ್ ಜಲಸಂಧಿಯಲ್ಲಿ ನೌಕಾಯಾನಕ್ಕೆ ಅಡ್ಡಿಪಡಿಸಿದೆ ಎಂಬ ವರದಿಗಳೂ ಹೊರ ಬಂದಿವೆ. ಈ ಜಲಸಂಧಿಯ ಮೂಲಕವೇ ಜಗತ್ತಿನ ದೊಡ್ಡ ಪ್ರಮಾಣದ ಕಚ್ಚಾ ತೈಲ ಸಾಗಾಟವಾಗುತ್ತದೆ ಎಂದು ತಿಳಿದುಬಂದಿದೆ. ಇದರಿಂದಲೇ ತೈಲ ಪೂರೈಕೆ ಬಗ್ಗೆ ಅನಿಶ್ಚಿತತೆ ಉಂಟಾಗಿದೆ.
ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳ ಸಾಲು ಬೆಳಗ್ಗಿನಿಂದಲೇ ಕಾಣಿಸಿಕೊಂಡಿತು. ಕೆಲವರು ತಮ್ಮ ಬೈಕ್, ಕಾರು ಗಳಿಗೆ ಮಾತ್ರವಲ್ಲದೆ ಬಾಟಲಿಗಳಲ್ಲಿಯೂ ಪೆಟ್ರೋಲ್ ತುಂಬಿಸಿಕೊಂಡು ಹೋಗುತ್ತಿರುವುದು ಗಮನ ಸೆಳೆಯಿತು. “ಮುಂದೆ ಬೆಲೆ ಏರಿದರೆ ಕಷ್ಟ” ಎಂಬ ಮಾತು ಜನರಲ್ಲಿತ್ತು.
ಮಾಧ್ಯಮ ವರದಿಗಳ ಪ್ರಕಾರ ಕಚ್ಚಾ ತೈಲದ ಬೆಲೆ 85 ಡಾಲರ್ ದಾಟಿದೆ ಎನ್ನಲಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಭಾರತ ಖಡಿ ರಾಷ್ಟ್ರಗಳಿಂದಲೇ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಅಲ್ಲಿ ಸಮಸ್ಯೆ ಉಂಟಾದರೆ ದೇಶೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀಳಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಆದರೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ದೇಶದಲ್ಲಿ ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಸಾಕಷ್ಟು ಸಂಗ್ರಹವಿದೆ ಎಂದು ತಿಳಿಸಿದ್ದಾರೆ. ಸರ್ಕಾರಿ ಮೂಲಗಳ ಪ್ರಕಾರ ಸುಮಾರು 25 ದಿನಗಳ ಕಚ್ಚಾ ತೈಲ ಮತ್ತು 25 ದಿನಗಳ ಶುದ್ಧೀಕೃತ ಇಂಧನ ಸಂಗ್ರಹವಿದೆ ಎನ್ನಲಾಗಿದೆ.
ಇದರ ನಡುವೆಯೂ ಜನರಲ್ಲಿ ಆತಂಕ ಕಡಿಮೆಯಾಗಿಲ್ಲ. ತಜ್ಞರು, ಅನಗತ್ಯವಾಗಿ ಹೆಚ್ಚು ಸಂಗ್ರಹಿಸುವುದು ಸ್ಥಳೀಯ ಮಟ್ಟದಲ್ಲಿ ಕೃತಕ ಕೊರತೆಯನ್ನು ಉಂಟುಮಾಡಬಹುದು ಎಂದು ಎಚ್ಚರಿಸಿದ್ದಾರೆ. ಸದ್ಯಕ್ಕೆ ಪೆಟ್ರೋಲ್ ಪೂರೈಕೆ ಸಾಮಾನ್ಯವಾಗಿದ್ದರೂ ಜಾಗತಿಕ ಬೆಳವಣಿಗೆಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.