×
Ad

ಭಟ್ಕಳ: ಅಕ್ರಮ ಪಡಿತರ ಅಕ್ಕಿ ಸಾಗಾಟ ಪ್ರಕರಣ; ಏಳು ಮಂದಿ ಸೆರೆ

Update: 2025-10-24 17:51 IST

ಭಟ್ಕಳ: ಪಡಿತರ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಿಸುತ್ತಿದ್ದ 7 ಮಂದಿಯನ್ನು ಭಟ್ಕಳ ಗ್ರಾಮೀಣ ಪೊಲೀಸ್ ತಂಡ ಪತ್ತೆಹಚ್ಚಿ ಬಂಧಿಸಿದೆ.

ಈ ದಾಳಿಯನ್ನು ಸಿಪಿಐ ಮಂಜುನಾಥ ಲಿಂಗಾರೆಡ್ಡಿ ನೇತೃತ್ವದಲ್ಲಿ ಮತ್ತು ಆಹಾರ ನಿರೀಕ್ಷಕ ಉದಯ ತಳವಾರ ಅವರ ಸಹಯೋಗದಲ್ಲಿ ನಡೆಸಲಾಗಿದೆ.

ಬಂಧಿತ ಆರೋಪಿಗಳಲ್ಲಿ ಸಮೀರ ಮುಗಳಿಹೊಂಡ (ಗಣೇಶನಗರ), ಮಲ್ಲಿಕಾರ್ಜುನ ಆರ್.ಮಾಗಡಿ (ರಾಮನಗರ), ನಿತೀನ್ ಹೆಚ್.ಎನ್. (ಹೊಂಬೆಗೌಡನಹಳ್ಳಿ), ಸಬೂಲ್ ಮುಗಳಿಹೊಂಡ (ಗಣೇಶನಗರ) ಸೇರಿದ್ದಾರೆ. ಅಲ್ಲದೆ, ಮಾರುತಿ ಓಮ್ಮಿ ವಾಹನದ ಮಾಲಿಕ, ಅಶೋಕ ಲೈಲೆಂಡ್ ದೋಸ್ತ್ ವಾಹನದ ಚಾಲಕ ಮತ್ತು ಮಾಲಿಕ ಕೂಡ ಆರೋಪಿಗಳ ಪಟ್ಟಿಯಲ್ಲಿ ಸೇರಿದ್ದಾರೆ.

ಪೊಲೀಸರ ಪತ್ತೆಯಲ್ಲಿ ಒಟ್ಟು 228 ಚೀಲಗಳಲ್ಲಿ (ಪ್ರತಿ ಚೀಲ 50 ಕೆ.ಜಿ) 11,400 ಕ್ವಿಂಟಲ್ ಪಡಿತರ ಅಕ್ಕಿ ವಶಪಡಿಸಲಾಗಿದೆ. ಇದರ ಮೌಲ್ಯ ಸುಮಾರು ರೂ. 3,87,600 ಎಂದು ಅಂದಾಜಿಸಲಾಗಿದ್ದು, ಎಲ್ಲವೂ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಅಕ್ಕಿ ಸಾಗಿಸಲು ಬಳಸಲಾಗಿದ್ದ ಅಶೋಕ ಲೈಲೆಂಡ್ ಲಾರಿ, ಮಾರುತಿ ಓಮ್ಮಿ, ಅಶೋಕ ಲೈಲೆಂಡ್ ದೋಸ್ತ್ ವಾಹನಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಆಹಾರ ನಿರೀಕ್ಷಕ ಉದಯ ದ್ಯಾಮಪ್ಪ ತಳವಾರ ಅವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ದಾಖಲಿಸಿಕೊಂಡ ಪಿಎಸ್‌ಐ ರನ್ನು ಗೌಡ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News