ಭಟ್ಕಳ| ಗಾಂಜಾ ಮಾರಾಟ ಪ್ರಕರಣ: ಓರ್ವ ಆರೋಪಿ ಸೆರೆ
ಭಟ್ಕಳ: ಭಟ್ಕಳ ನಗರ ಪೊಲೀಸ್ ಠಾಣೆಯ ತಂಡವು ತೆಂಗಿನಗುಂಡಿ ಕ್ರಾಸ್ ಬಳಿ ದಾಳಿ ನಡೆಸಿ, ಗಾಂಜಾ ಮಾರಾಟದ ಯತ್ನದಲ್ಲಿ ತೊಡಗಿದ್ದ ಆರೋಪಿಯೊಬ್ಬನನ್ನು ಬಂಧಿಸಿದ್ದು, ಗಾಂಜಾದ ಜೊತೆಗೆ ಕಾರು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಪಿಎಸ್‌ಐ ನವೀನ್ ಎಸ್. ನಾಯ್ಕ, ನೇತೃತ್ವದ ತಂಡವು ಬುಧವಾರ ಸಂಜೆ 6 ಗಂಟೆ ಸುಮಾರಿಗೆ ತೆಂಗಿನಗುಂಡಿ ಕ್ರಾಸ್‌ನಲ್ಲಿ ಕಾರ್ಯಾಚರಣೆ ನಡೆಸಿತು. ಹೊನ್ನಾವರದ ಕಾಸರಕೋಡಿನಿಂದ ರೆನಾಲ್ಟ್ ಕ್ವಿಡ್ ಕಾರಿನಲ್ಲಿ ಮಾರಾಟ ಕ್ಕಾಗಿ ತರಲಾಗಿದ್ದ 50 ಸಾವಿರ ರೂ. ಮೌಲ್ಯದ 1.750 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಯಿತು. ಇದರ ಜೊತೆಗೆ 5 ಲಕ್ಷ ರೂ. ಮೌಲ್ಯದ ಕಾರು, ಡಿಜಿಟಲ್ ತಕ್ಕಡಿ, ಮತದಾರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಆರ್‌ಸಿ ಪ್ರತಿ ಸೇರಿದಂತೆ ಇತರ ವಸ್ತುಗಳನ್ನೂ ವಶಕ್ಕೆ ಪಡೆಯಲಾಗಿದೆ.
ಪ್ರಕರಣದಲ್ಲಿ ಬಳಸಲಾದ ಕಾರಿನ ಮಾಲಕ ಕಾಸರಕೋಡಿನ ಟೊಂಕಾದ ನಿವಾಸಿ ಸೈಯದ್ ಗುಲ್ಜಾರ್ (22) ಮತ್ತು ಸೈಯದ್ ಮುಖ್ತಿಯಾರ್ ಎಂದು ಗುರುತಿಸಲಾಗಿದೆ.
ಗಾಂಜಾವನ್ನು ಭಟ್ಕಳದಲ್ಲಿ ಮಾರಾಟ ಮಾಡಲು ತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ದಾಳಿ ನಡೆಸಿದಾಗ, ಆರೋಪಿ ಸೈಯದ್ ಗುಲ್ಜಾರ್ ಪರಾರಿಯಾಗಲು ಯಶಸ್ವಿಯಾದರೆ, ಮುಖ್ತಿಯಾರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಭಟ್ಕಳ ನಗರ ಪೊಲೀಸ್ ಠಾಣೆಯ ಪಿಎಸ್‌ಐ ತಿಮ್ಮಪ್ಪ ಎಸ್. ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ.