×
Ad

ದಾಂಡೇಲಿ: ಕುಟುಂಬಸ್ಥರಿಂದಲೇ ಸರಪಳಿಯಲ್ಲಿ ಬಂಧಿಸಲ್ಪಟ್ಟಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ

Update: 2025-07-16 11:06 IST

ಉತ್ತರ ಕನ್ನಡ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕನೋರ್ವನನ್ನು ಅವರ ಕುಟುಂಬಸ್ಥರೇ ವಾಸಕ್ಕೆ ಯೋಗ್ಯವಲ್ಲದ ಕಟ್ಟಡದಲ್ಲಿ ಸರಪಳಿಯಿಂದ ಕಟ್ಟಿ ಹಾಕಿದ್ದ ಅಮಾನವೀಯ ಘಟನೆ ದಾಂಡೇಲಿ ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ. ಸಂತ್ರಸ್ತ ಯುವಕನನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಜನಶಕ್ತಿ ವೇದಿಕೆಯು ಸಕಾಲಿಕ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.

ಆಲೂರು ಗ್ರಾಮದ ನಿವಾಸಿ ವಿನಾಯಕ ವಸಂತ ಸೋನಶೇಟ್ ರಕ್ಷಿಸಲ್ಪಟ್ಟ ಯುವಕ. ಅವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಹಿನ್ನೆಲೆ:

ವಿನಾಯಕ ವಸಂತ ಸೋನಶೇಟ್ ಕೆಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆನ್ನಲಾಗಿದೆ. ತಮ್ಮ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚುವಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆಂಬ ಕಾರಣಕ್ಕೆ ವಿನಾಯಕರನ್ನು ಅವರ ಕುಟುಂಬದ ಸದಸ್ಯರೇ ಹೊಲದ ಮಧ್ಯೆ ಇರುವ ವಾಸಕ್ಕೆ ಯೋಗ್ಯವಲ್ಲದ ಕಟ್ಟಡವೊಂದರಲ್ಲಿ ಕಾಲಿಗೆ ಸರಪಳಿ ಕಟ್ಟಿ ಕೂಡಿ ಹಾಕಿದ್ದರು.

ವಿನಾಯಕ ಅವರ ತಂದೆ ಅಂಚೆ ಇಲಾಖೆಯ ಸಿಬ್ಬಂದಿಯಾಗಿದ್ದು, ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ನಿಧನರಾಗಿದ್ದರು. ಈ ವೇಳೆ ಆರೋಗ್ಯದಿಂದಿದ್ದ ವಿನಾಯಕರಿಗೆ ಅನುಕಂಪದ ಆಧಾರದ ಮೇಲೆ ಪೋಸ್ಟ್ ಮ್ಯಾನ್ ನೌಕರಿ ಲಭಿಸಿತ್ತು. ಆದರೆ ಬಳಿಕ ಮಾನಸಿಕ ಅಸ್ವಸ್ಥರಾದ ವಿನಾಯಕ ಉಪಟಳ ನೀಡುತ್ತಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ ಬೇರೆ ದಾರಿ ಕಾಣದೆ ಕುಟುಂಬಸ್ಥರು ಅವರನ್ನು ಕಾಲಿಗೆ ಸರಪಳಿ ಬಿಗಿದು ಕಟ್ಟಡವೊಂದರಲ್ಲಿ ಕೂಡಿ ಹಾಕಿದ್ದರು ಎಂದು ತಿಳಿದುಬಂದಿದೆ.

ರಕ್ಷಣಾ ಕಾರ್ಯಾಚರಣೆ

ವಿನಾಯಕರನ್ನು ಅಮಾನವೀಯವಾಗಿ ಕೂಡಿ ಹಾಕಿರುವ ಬಗ್ಗೆ ಮಾಹಿತಿ ತಿಳಿದ ಭಾರತೀಯ ರೆಡ್ ಕ್ರಾಸ್ ಮತ್ತು ಜನಶಕ್ತಿ ವೇದಿಕೆಯು ಸಂಬಂಧಪಟ್ಟವರಿಗೆ ಮಾಹಿತಿ ನೀಡಿತ್ತು. ಪೊಲೀಸ್ ಇಲಾಖೆ, ಸಾರ್ವಜನಿಕ ಆರೋಗ್ಯ ಇಲಾಖೆ ಮತ್ತು ತಾಲೂಕಾಡಳಿತದ ಸಹಕಾರದಲ್ಲಿ ಮಂಗಳವಾರ ಸ್ಥಳಕ್ಕೆ ತೆರಳಿ ವಿನಾಯಕರನ್ನು ಸರಪಳಿಯಿಂದ ಮುಕ್ತಿಗೊಳಿಸಿ ರಕ್ಷಿಸಿದ್ದಾರೆ. ಬಳಿಕ ಅವರನ್ನು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಾನಸಿಕ ಚಿಕಿತ್ಸಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.

ಈ ಕಾರ್ಯಾಚರಣೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಿಪತ್ತು ನಿರ್ವಹಣಾ ಸಮಿತಿಯ ಜಿಲ್ಲಾ ಮುಖ್ಯಸ್ಥರು ಹಾಗೂ ಜನಶಕ್ತಿ ವೇದಿಕೆಯ ಜಿಲ್ಲಾಧ್ಯಕ್ಷ ಮಾಧವ ನಾಯ್ಕ, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ, ಪಿಎಸ್ಸೈ ಅಮೀನ್ ಅತ್ತಾರ, ಆರೋಗ್ಯ ನಿರೀಕ್ಷಕ ಗೋಪಿ ಚೌವ್ಹಾಣ್, ರೆಡ್ ಕ್ರಾಸ್ ಸಂಸ್ಥೆಯ ರಾಮಾ ನಾಯ್ಕ, ಜನಶಕ್ತಿ ವೇದಿಕೆಯ ಬಾಬು ಶೇಟ್, ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News