ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡಿಲ್ಲ: ಶಾಸಕ ಆರ್.ವಿ.ದೇಶಪಾಂಡೆ ಸ್ಪಷ್ಟನೆ
ʼʼನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆʼʼ
ಆರ್.ವಿ.ದೇಶಪಾಂಡೆ
ಉತ್ತರ ಕನ್ನಡ : ದಾಂಡೆಲಿಯಲ್ಲಿ ನಡೆದ ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡಿಲ್ಲ ಎಂದು ಶಾಸಕ ಆರ್.ವಿ.ದೇಶಪಾಂಡೆ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಸರಕಾರದ ಗ್ಯಾರಂಟಿ ಯೋಜನೆಗಳನ್ನು ಶ್ಲಾಘಿಸಿರುವುದಾಗಿ ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರ ಹಿತಕ್ಕಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರು ಅನುಭವಸಂಪನ್ನ ಹಾಗೂ ಜನಪರ ನಾಯಕರಾಗಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದು ಅವರ ಶಕ್ತಿ ಮತ್ತು ಬಡವರ ಪರವಾದ ಮನೋಭಾವದ ಸಂಕೇತ ಎಂದು ತಿಳಿಸಿದ್ದಾರೆ.
ನನ್ನ ಮಾತುಗಳನ್ನು ಕೆಲವು ಮಂದಿ ತಪ್ಪಾಗಿ ಅರ್ಥೈಸಿ, ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡಿದಂತೆ ಸುದ್ದಿ ಪ್ರಸಾರ ಮಾಡಿರುವುದು ವಿಷಾದನೀಯ. ನಾನು ಎಲ್ಲಿಯೂ ಸರಕಾರಕ್ಕೆ ಆರ್ಥಿಕ ಸಂಕಷ್ಟ ಉಂಟಾಗಿದೆ ಎಂದು ಹೇಳಿಲ್ಲ. ಸಿದ್ದರಾಮಯ್ಯ ಸರಕಾರದ ಜನಪರ ಆಡಳಿತವನ್ನು ಮಾತ್ರ ಹೊಗಳಿದ್ದೇನೆ, ಟೀಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.