×
Ad

ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ : ತಹಶೀಲ್ದಾರ್‌ ನಾಗೇಂದ್ರ ಕೋಳಶೆಟ್ಟಿ

Update: 2025-11-01 15:26 IST

ಭಟ್ಕಳ: ಕನ್ನಡ ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಅಸ್ತಿತ್ವದ ಪ್ರತೀಕ. ಅದರ ಕೀರ್ತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ತಹಶೀಲ್ದಾರ್‌ ನಾಗೇಂದ್ರ ಕೋಳಶೆಟ್ಟಿ ಹೇಳಿದರು.

ಭಟ್ಕಳ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಜಾಲಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಇಂದು ನಾವು ಎಲ್ಲರೂ ಸೇರಿರುವುದು ಕನ್ನಡಿಗರ ಹೃದಯಕ್ಕೆ ಹತ್ತಿರವಾದ ಹಬ್ಬವನ್ನು ಆಚರಿಸಲು. 1956ರ ನವೆಂಬರ್ 1ರಂದು ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಕರ್ನಾಟಕ ರಾಜ್ಯ ಹುಟ್ಟಿಕೊಂಡಿತು. ಕನ್ನಡ ಹೋರಾಟಗಾರರ ಏಕತಾ ಪ್ರಯತ್ನದಿಂದ ಇಂದು ನಾವು ಹೆಮ್ಮೆಯ ಕರ್ನಾಟಕ ರಾಜ್ಯವನ್ನು ಪಡೆದಿದ್ದೇವೆ. ಇಂದಿನ ಕರ್ನಾಟಕ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಮತ್ತು ಕೈಗಾರಿಕೆ ಕ್ಷೇತ್ರಗಳಲ್ಲಿ ದೇಶದ ಮುಂಚೂಣಿಯಲ್ಲಿದೆ. ಆದರೆ ಈ ಅಭಿವೃದ್ಧಿಯ ನಡುವೆ ಕನ್ನಡವನ್ನು ಮರೆಯಬಾರದು. ಕಚೇರಿಗಳು, ಶಾಲೆಗಳು, ವ್ಯಾಪಾರ ಕ್ಷೇತ್ರಗಳಲ್ಲಿ ಕನ್ನಡ ಬಳಕೆ ಹೆಚ್ಚಿಸಬೇಕು ಎಂದು ಹೇಳಿದರು.

ಕನ್ನಡ ನಾಡು, ನುಡಿಯ ಕುರಿತು ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಉಪನ್ಯಾಸ ನೀಡಿದರು.

ಪತ್ರಿಕೋದ್ಯಮದಲ್ಲಿ ಇನಾಯತುಲ್ಲಾ ಗವಾಯಿ, ಸಂಗೀತದಲ್ಲಿ ಉದಯ ಪ್ರಭು ಮತ್ತು ಆದಿತ್ಯ ದೇವಡಿಗ, ಸಾಹಿತ್ಯದಲ್ಲಿ ಎಂ.ಡಿ.ಪಕ್ಕಿ, ಸುದರ್ಶನ ನಾಯ್ಕ, ಕ್ರೀಡಾ ಕ್ಷೇತ್ರದಲ್ಲಿ ವಾಸುದೇವ ಪೂಜಾರಿ, ಜನಪದ ಕಲೆಯಲ್ಲಿ ದುರ್ಗಯ್ಯ ಗೊಂಡ ಮತ್ತು ಸನ್ಮಾಸಿ ಅವರನ್ನು ಸನ್ಮಾನಿಸಲಾಯಿತು.

ಅತ್ಯುತ್ತಮ ದೀಪಾಲಂಕಾರಕ್ಕಾಗಿ ಜಾಲಿ ಪಟ್ಟಣ ಪಂಚಾಯತ್ ಪ್ರಥಮ ಬಹುಮಾನ ಪಡೆದುಕೊಂಡಿದೆ. ಟ್ಯಾಬ್ಲೋ ವಿಭಾಗದಲ್ಲಿ ಭಟ್ಕಳ ವಲಯ ಅರಣ್ಯ ಕಚೇರಿ ಮೊದಲ, ಹೆಸ್ಕಾಂ ಇಲಾಖೆ ದ್ವಿತೀಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತೃತೀಯ ಸ್ಥಾನಗಳಿಸಿವೆ.

ಕಾರ್ಯಕ್ರಮದ ಆರಂಭದಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಶ್ರೀ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ತಹಶೀಲ್ದಾರ್‌ ಕೋಳಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಖಾಜೀಯಾ ಅಫ್ಸಾ ಹುಜೈಫಾ,ತಾಲೂಕು ಪಂಚಾಯತ್ ಮುಖ್ಯಾಧಿಕಾರಿ ಸುನೀಲ್ ಬಿ., ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಂಜಪ್ಪ ಎನ್., ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಸಿಪಿಐ ಮಂಜುನಾಥ ಲಿಂಗಾರೆಡ್ಡಿ, ಸಿಡಿಪಿಒ ಸುಶೀಲಾ ಮೊಗೇರ, ಮಾರುಕೇರಿ ಪಂಚಾಯತ್ ಉಪಾಧ್ಯಕ್ಷ ಎಂ.ಡಿ.ನಾಯ್ಕ ಸೇರಿದಂತೆ ಪುರಸಭೆ ಸದಸ್ಯರು, ಜಾಲಿ ಪಟ್ಟಣ ಪಂಚಾಯತ್ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News