ಕಾರವಾರ: ದಾಖಲೆಯಿಲ್ಲದ 1 ಕೋಟಿ ರೂ. ಹಣ ಸಾಗಾಟ; ಇಬ್ಬರ ಬಂಧನ
ಕಾರವಾರ: ಗೋವಾದಿಂದ ಬೆಂಗಳೂರಿನ ಹೊಸೂರಿಗೆ ಸಾಗಿಸಲಾಗುತ್ತಿದ್ದ ದಾಖಲೆ ಇಲ್ಲದ ಒಂದು ಕೋಟಿ ರೂ. ನಗದನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಚೆಕ್‌ಪೋಸ್ಟ್ ಬಳಿ ಸೋಮವಾರ ತಡರಾತ್ರಿ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.
ಖಾಸಗಿ ಬಸ್‌ನಲ್ಲಿ ಹಣ ಸಾಗಿಸುತ್ತಿದ್ದ ರಾಜಸ್ಥಾನ ಮೂಲದ ಕಲ್ಲೇಶ್ ಕುಮಾರ್ ಮತ್ತು ಭಮ್ರು ಕುಮಾರ್ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು, ಪ್ರಯಾಣಿಕರ ಬ್ಯಾಗ್‌ಗಳನ್ನು ಪರಿಶೀಲಿಸುವಾಗ ಕಲ್ಲೇಶ್ ಕುಮಾರ ಎಂಬಾತನ ಬಳಿ ಇದ್ದ ಬ್ಯಾಗ್‌ನಲ್ಲಿ ಒಂದು ಕೋಟಿ ರೂಪಾಯಿ ಹಣ ಪತ್ತೆಯಾಗಿದೆ.
ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಶಪಡಿಸಿಕೊಂಡ ಹಣವು ಅಕ್ರಮ ವ್ಯವಹಾರಗಳಿಗೆ ಅಥವಾ ರಾಜಕೀಯ ನಂಟುಗಳಿಗೆ ಸಂಬಂಧಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದು, ಈ ಹಣ ಯಾರಿಗೆ ಸೇರಿದ್ದು, ಏಕೆ ಸಾಗಿಸಲಾಗುತ್ತಿತ್ತು ಎಂಬ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.