ಕುಮಟಾ: ನಾಪತ್ತೆಯಾಗಿದ್ದ ದಲಿತ ಕಂದಾಯ ನಿರೀಕ್ಷಕ ಬೆಳಗಾವಿಯಲ್ಲಿ ಪತ್ತೆ
ಮುಖ್ಯಾಧಿಕಾರಿಯ ವಿರುದ್ಧ ಜಾತಿ ನಿಂದನೆ, ಲಂಚದ ಒತ್ತಡದ ಆರೋಪ
ಭಟ್ಕಳ: ಕುಮಟಾ ಪುರಸಭೆಯಲ್ಲಿ ಕಂದಾಯ ನಿರೀಕ್ಷಕರಾಗಿ (ಆರ್.ಐ.) ಕಾರ್ಯನಿರ್ವಹಿಸುತ್ತಿದ್ದ ಯುವ ಅಧಿಕಾರಿಯೊಬ್ಬರು ಮುಖ್ಯ ಅಧಿಕಾರಿಯ (ಸಿ.ಓ.) ನಿರಂತರ ಮಾನಸಿಕ ಕಿರುಕುಳದಿಂದ ಬೇಸತ್ತು ನಾಪತ್ತೆಯಾಗಿದ್ದ ಘಟನೆಗೆ ಸಂಬಂಧಿಸಿದಂತೆ ಇದೀಗ ಹೊಸ ಬೆಳವಣಿಗೆ ಕಂಡುಬಂದಿದೆ. ಮಂಗಳವಾರ ರಾತ್ರಿ ಭಟ್ಕಳದಲ್ಲಿರುವ ತಮ್ಮ ಮನೆಯಿಂದ ನಾಪತ್ತೆಯಾಗಿದ್ದ ಸಿಬ್ಬಂದಿ ವೆಂಕಟೇಶ ರಮೇಶ್ ಹರಿಜನ (25) ಅವರು ಗುರುವಾರ ಬೆಳಗಾವಿ ನಗರದಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಕಂದಾಯ ನಿರೀಕ್ಷಕರಾದ ವೆಂಕಟೇಶ್ ರಮೇಶ್ ಹರಿಜನ ಅವರು ಮಂಗಳವಾರ ರಾತ್ರಿ ಯಾರಿಗೂ ತಿಳಿಸದೆ ಮನೆ ಬಿಟ್ಟು ಹೋಗಿದ್ದರು. ನಾಪತ್ತೆಯಾಗುವುದಕ್ಕೂ ಮುನ್ನ ಅವರು, ಪುರಸಭೆಯ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಅವರ ಕಿರುಕುಳದ ಕುರಿತು ಪತ್ರವೊಂದನ್ನು ಬರೆದು ಪುರಸಭೆಯ ಸದಸ್ಯರ ಹಾಗೂ ಕಚೇರಿ ಸಿಬ್ಬಂದಿಯ ವಾಟ್ಸಾಪ್ ಗ್ರೂಪ್‌ಗೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಾಪತ್ತೆಯಾಗಿದ್ದ ವೆಂಕಟೇಶ ಆರ್. ಅವರು ಬೆಳಗಾವಿಯಿಂದ ತಮ್ಮ ಮನೆಯವರಿಗೆ ದೂರವಾಣಿ ಕರೆ ಮಾಡಿ, ತಾನು ಬೆಳಗಾವಿಯಲ್ಲಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಭಟ್ಕಳ ಪೊಲೀಸರು ಬೆಳಗಾವಿಗೆ ತೆರಳಿದ್ದು, ಸದ್ಯ ವೆಂಕಟೇಶ್ ಅವರು ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಇರುವುದು ತಿಳಿದುಬಂದಿದೆ.
ಈ ಘಟನೆಯು ಸ್ಥಳೀಯರು ಮತ್ತು ಪುರಸಭೆ ನೌಕರರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕುಮಟಾ ಪುರಸಭೆಯ ನೌಕರರು ಸಿ.ಓ. ಸ್ವಾಮಿ ಅವರ ಅಕ್ರಮ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಅವರನ್ನು ತಕ್ಷಣ ವರ್ಗಾವಣೆ ಮಾಡುವಂತೆ ಪುರಸಭಾ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಮುಖ್ಯಾಧಿಕಾರಿಯ ಕಿರುಕುಳದ ಗಂಭೀರ ಆರೋಪದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆ ಇದೆ.