×
Ad

ರೈತರು, ಮೀನುಗಾರರು, ನೇಕಾರರಿಗೆ ಡಿಸೆಂಬರ್ ಒಳಗಾಗಿ ಕೆಸಿಸಿ ಕಾರ್ಡ್ ವಿತರಣೆ ಮಾಡಬೇಕು : ನಿರ್ಮಲಾ ಸೀತಾರಾಮನ್

Update: 2025-10-17 22:14 IST

ವಿಜಯನಗರ (ಹೊಸಪೇಟೆ) : ರೈತರು, ಮೀನುಗಾರರು ಮತ್ತು ನೇಕಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ವಿತರಣೆ ಪ್ರಕ್ರಿಯೆಯನ್ನು ಡಿಸೆಂಬರ್ ಅಂತ್ಯದೊಳಗೆ ಮಿಷನ್ ಮೋಡ್‌ನಲ್ಲಿ ಪೂರ್ಣಗೊಳಿಸಬೇಕು ಎಂದು ಕೇಂದ್ರ ಹಣಕಾಸು ಹಾಗೂ ಕಂಪನಿ ವ್ಯವಹಾರಗಳ ಸಚಿವೆಯಾದ ನಿರ್ಮಲಾ ಸೀತಾರಾಮನ್ ಸೂಚಿಸಿದ್ದಾರೆ.

ಶುಕ್ರವಾರ ಅವರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕಾಸಾಪುರ ಗ್ರಾಮದಲ್ಲಿ ಬಾರ್ಡ್ ಮತ್ತು ಸಂಸದ ನಿಧಿಯಿಂದ ನಿರ್ಮಿಸಲಾದ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರ, ಶೇಂಗಾ ಮತ್ತು ಹುಣಸೇ ಹಣ್ಣಿನ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಕೆಸಿಸಿ ಕಾರ್ಡ್‌ನಿಂದ ರೈತರು, ಮೀನುಗಾರರು ಮತ್ತು ನೇಕಾರರಿಗೆ ಬಹು ಉಪಯೋಗವಾಗಿದೆ. ಆದರೆ ಅನೇಕ ಫಲಾನುಭವಿಗಳು ಇದರಿಂದ ವಂಚಿತರಾಗಿದ್ದಾರೆ. ಎಲ್ಲ ಬ್ಯಾಂಕ್‌ಗಳು ಅರ್ಹರನ್ನು ಗುರುತಿಸಿ ಕಾರ್ಡ್ ವಿತರಣೆ ಮಾಡಲು ಮುಂದಾಗಬೇಕು. ಜಿಲ್ಲಾಧಿಕಾರಿಯವರು ಲೀಡ್ ಬ್ಯಾಂಕ್ ಮೂಲಕ ಎಲ್ಲ ಬ್ಯಾಂಕ್‌ಗಳ ಸಭೆ ನಡೆಸಿ ನಿರ್ದೇಶನ ನೀಡಬೇಕು ಎಂದರು.

ವಿಜಯನಗರ ಜಿಲ್ಲೆಯಲ್ಲಿ ಈಗಾಗಲೇ 1,80,234 ಕೆಸಿಸಿ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಕೂಡ್ಲಿಗಿ ತಾಲ್ಲೂಕಿನಲ್ಲಿ 21,372 ರೈತರು ಕಿಸಾನ್ ಸಮ್ಮಾನ್ ಯೋಜನೆಯಡಿ ಲಾಭ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಕಾಸಾಪುರದಲ್ಲಿ ಸ್ಥಾಪಿಸಲಾದ ಘಟಕದಲ್ಲಿ ಶೇಂಗಾ ಚಿಕ್ಕಿ ಹಾಗೂ ಹುಣಸೇ ಹಣ್ಣಿನ ಉಪ ಉತ್ಪನ್ನಗಳು ತಯಾರಿಸಲಾಗುತ್ತಿದ್ದು, ಇದು ರೈತರ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗಲಿದೆ. ಘಟಕವು 400 ಮೆಟ್ರಿಕ್ ಟನ್ ಶೇಂಗಾ ಮತ್ತು 200 ಮೆಟ್ರಿಕ್ ಟನ್ ಹುಣಸೇ ಹಣ್ಣು ಸಂಸ್ಕರಿಸಬಲ್ಲ ಸಾಮರ್ಥ್ಯ ಹೊಂದಿದೆ. ಕೂಡ್ಲಿಗಿ ತಾಲ್ಲೂಕಿನಲ್ಲಿ ಮಹಿಳೆಯರು ಶೇಂಗಾ ಮತ್ತು ಹುಣಸೇ ಸಂಸ್ಕರಣಾ ಘಟಕಗಳನ್ನು ಮುನ್ನಡೆಸಬೇಕು ಎಂದು ಅವರು ಓನಕೆ ಓಬವ್ವನ ಧೈರ್ಯದಿಂದ ಪ್ರೇರಣೆ ಪಡೆಯುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಈ.ತುಕಾರಾಮ, ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್, ರಾಜ್ಯಾಭಿವೃದ್ಧಿ ಆಯುಕ್ತೆ ಉಮಾ ಮಹದೇವನ್, ನಬಾರ್ಡ್ ಅಧ್ಯಕ್ಷ ಕೆ.ವಿ. ಶಾಜಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಸಿಇಓ ಮೊಹಮ್ಮದ್ ಅಲಿ ಅಕ್ರಮ್ ಷಾ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News