×
Ad

ಕೂಡ್ಲಿಗಿ | ಟೀಕೆ ಮಾಡುತ್ತಿದ್ದವರು ನಮ್ಮ ಗ್ಯಾರಂಟಿಗಳನ್ನೇ ನಕಲು ಮಾಡುತ್ತಿದ್ದಾರೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2025-11-09 19:37 IST

ಕೂಡ್ಲಿಗಿ, ನ.9: ನಾವು ಕರ್ನಾಟಕದಲ್ಲಿ ನೀಡಿದ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಮೋದಿ ಟೀಕೆ ಮಾಡುತ್ತಿದ್ದರು. ಇದೀಗ ಹರ್ಯಾಣ, ಮಹಾರಾಷ್ಟ್ರ, ಉತ್ತರಪ್ರದೇಶ, ಬಿಹಾರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳನ್ನೇ ನಕಲು ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ರವಿವಾರ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದ 74 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕರ್ನಾಟಕದ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿದೆ. ಬೇರೆ ಪಕ್ಷದವರು ಈಗ ಜನರ ಕಲ್ಯಾಣದ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ. ಕರುನಾಡಿನ ಜನರ ಸೇವೆಯನ್ನು ಉತ್ತಮ ಸರಕಾರ ಮುನ್ನಡೆಸುತ್ತಿದೆ. ಭವಿಷ್ಯದಲ್ಲಿ ಇದಕ್ಕಿಂತ ಉತ್ತಮ ಆಡಳಿತ ನೀಡುತ್ತೇವೆ. 2028ಕ್ಕೆ ಕಾಂಗ್ರೆಸ್ ಪಕ್ಷವೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ನಿಮ್ಮ ಸೇವೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಭೂ ಒಡೆತನವನ್ನು ಆರನೇ ಗ್ಯಾರಂಟಿಯಾಗಿ ಮತ್ತು ಏಳನೇ ಗ್ಯಾರಂಟಿಯಾಗಿ ರೈತರಿಗೆ ನೀರನ್ನು ನೀಡುತ್ತಿದ್ದೇವೆ. ಗಂಗಾ ಸ್ನಾನ, ತುಂಗಾ ಪಾನ ಎನ್ನುವ ಮಾತಿದೆ. ಅಂದರೆ ತುಂಗಾನದಿ ನೀರು ಕುಡಿಯುವುದಕ್ಕೆ ಅಷ್ಟು ಪವಿತ್ರವಾದುದು. ಅಂತಹ ನೀರನ್ನು ಜನರ ಉಪಯೋಗಕ್ಕಾಗಿ ಕೆರೆಗಳಿಗೆ ಹರಿಸುತ್ತಿದ್ದೇವೆ ಎಂದು ಹೇಳಿದರು.

ಕೆರೆಗಳಿಗೆ ನೀರು ಹರಿಸಲು 800 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಈಗಾಗಲೆ ವೆಚ್ಚ ಮಾಡಲಾಗಿದೆ. ಎಲ್ಲಾ ಕೆರೆಗಳನ್ನು ತುಂಬಿಸುವ ಸಲುವಾಗಿ ವಾರ್ಷಿಕ ವಿದ್ಯುತ್ ವೆಚ್ಚವೇ 80 ಲಕ್ಷ ರೂ.ವರೆಗೆ ತಲುಪುತ್ತದೆ. ಸರಕಾರವು ಒಂದೆರಡು ವರ್ಷ ಈ ವೆಚ್ಚವನ್ನು ಭರಿಸಬಹುದು. ಆದ್ದರಿಂದ ಎಲ್ಲಾ ಕೆರೆಗಳನ್ನು ಮೀನುಗಾರಿಕೆ ನಡೆಸಲು ಹರಾಜು ಹಾಕಬೇಕು. ಈ ಮೂಲಕ ವೆಚ್ಚವನ್ನು ಸರಿದೂಗಿಸಬೇಕು ಎಂದು ಹೇಳಿದ್ದೇನೆ. ಇದರಿಂದ ಎಲ್ಲಾ ರೈತರಿಗೆ ಅನುಕೂಲವಾಗಲಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ತುಂಗಭದ್ರಾ ಅಣೆಕಟ್ಟಿನ ಎಲ್ಲ ಕ್ರೆಸ್ಟ್ ಗೇಟ್ ಗಳನ್ನು ಬದಲಾವಣೆ ಮಾಡಲಾಗುತ್ತಿದೆ. ಎರಡನೆ ಬೆಳೆ ವಿಚಾರವಾಗಿ ಕೆಲವರು ರಾಜಕಾರಣ ಮಾಡುತ್ತಿದ್ದಾರೆ. ನಾವೇನೂ ರೈತರಿಗೆ ನೀರು ಕೊಡಬಾರದು ಎನ್ನುವ ಧೋರಣೆ ಹೊಂದಿಲ್ಲ. ಆದರೆ ಅಣೆಕಟ್ಟು ಮುಖ್ಯವೋ? ಬೆಳೆ ಮುಖ್ಯವೋ ಎಂಬುದನ್ನು ರೈತರು ಆಲೋಚಿಸಬೇಕು. ಯಾರ ಒತ್ತಡಕ್ಕೂ ರೈತರು ಮಣಿಯಬಾರದು. ಕೇಂದ್ರ ಸರಕಾರ ರಚನೆ ಮಾಡಿರುವ ತುಂಗಭದ್ರಾ ಸಮಿತಿಯು ನೀರು ನೀಡುವ ಬಗ್ಗೆ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ಮಹಾತ್ಮ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಡೀ ರಾಜ್ಯದಾದ್ಯಂತ ನೂರು ಕಾಂಗ್ರೆಸ್ ಕಚೇರಿಗಳನ್ನು ನಿರ್ಮಾಣ ಮಾಡುವ ಉದ್ದೇಶಕ್ಕೆ ಹಲವಾರು ಶಾಸಕರು, ಸಚಿವರು ನಿವೇಶನ ಒದಗಿಸಿ ಸಹಕಾರ ನೀಡಿದ್ದಾರೆ. ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಉಚಿತವಾಗಿ ಬಳ್ಳಾರಿ ನಗರದಲ್ಲಿ ನಿವೇಶನವನ್ನು ಶಾಸಕರು ನೀಡಿದ್ದಾರೆ. ನಾಗೇಂದ್ರ, ಹರಪನಹಳ್ಳಿ ಶಾಸಕಿ ಲತಾ, ಪರಮೇಶ್ವರ ನಾಯ್ಕ್, ಸಿರಾಜ್ ಶೇಖ್ ತಮ್ಮ ಕ್ಷೇತ್ರದಲ್ಲಿ ನಿವೇಶನ ನೀಡಿದ್ದಾರೆ. ಬಿ.ಎಂ.ನಾಗರಾಜು ತಮ್ಮ ಸ್ವಂತ ಜಾಗವನ್ನು ಪಕ್ಷಕ್ಕಾಗಿ ದಾನ ಮಾಡಿದ್ದಾರೆ. ಈ ಜಿಲ್ಲೆಯ ಎಲ್ಲ ಶಾಸಕರು ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ ಕೋಟಿ ರೂ.ನೀಡಿದ್ದೇವೆ. ಇದಲ್ಲದೆ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲು 20 ಸಾವಿರ ಕೋಟಿ ರೂ., ಪಿಂಚಣಿಗಳಿಗೆ 9 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಬಿಜೆಪಿ ಸರಕಾರದ ಅವಧಿಯಲ್ಲೂ ಇಂತಹ ಯೋಜನೆಗಳನ್ನು ನೀಡಿಲ್ಲ. ಕೇಂದ್ರ ಸರಕಾರ ಒಂದು ರೂಪಾಯಿ ನೀಡದೆ ಇದ್ದರೂ ನಾವು ಕೆಲಸ ಮಾಡುತ್ತಿದ್ದೇವೆ ಎಂದು  ತಿಳಿಸಿದರು.

ಇಲ್ಲಿಗೆ ಬರುವುದಕ್ಕೆ ಮುಂಚಿತವಾಗಿ ಮುಖ್ಯಮಂತ್ರಿ ಜೊತೆ ಕೂಡ್ಲಿಗಿ ಕ್ಷೇತ್ರದಲ್ಲಿನ ರೇಶ್ಮೆ ಬೆಳೆಗಾರರ ಬಗ್ಗೆ ಚರ್ಚೆ ನಡೆಸುತ್ತಿದ್ದೆ. ಸುಮಾರು 4 ಸಾವಿರ ರೇಶ್ಮೆ ಬೆಳೆಗಾರರಿದ್ದಾರೆ. ರಾಮನಗರ ಮಾರುಕಟ್ಟೆಯಲ್ಲಿ ಇಲ್ಲಿನ ರೇಶ್ಮೆ ಗೂಡಿಗೆ ಹೆಚ್ಚು ಬೆಲೆಯಿದೆ. ಚೀನಾ ರೇಶ್ಮೆ ಬರುವುದು ಕಡಿಮೆಯಾದ ಮೇಲೆ ನಮ್ಮ ಬೆಲೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿಯೆ ಮಾರುಕಟ್ಟೆ ತೆರೆಯುವ ಬಗ್ಗೆ ಚಿಂತಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News