×
Ad

ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರಕಾರಕ್ಕೆ ಮನವರಿಕೆ ಮಾಡಿಸುವೆ : ಶಿವಾನಂದ ಪಾಟೀಲ್‌

Update: 2025-09-22 17:49 IST

ವಿಜಯಪುರ : ನಾನು ಆರೋಗ್ಯ ಸಚಿವನಾಗಿದ್ದಾಗ ವಿಜಯಪುರದಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯವಾದ ಸಂಪನ್ಮೂಲ, ಸೌಲಭ್ಯ ಕಲ್ಪಿಸಿದ್ದೇನೆ. ಹೀಗಾಗಿ ಖಾಸಗಿ ಸಹಭಾಗಿತ್ವದ ಬದಲಾಗಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಅಗತ್ಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀ‍ಲ್‌ ಅವರಿಗೆ ಮನವರಿಕೆ ಮಾಡುತ್ತೇನೆ ಎಂದು ಸಕ್ಕರೆ, ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್‌ ಭರವಸೆ ನೀಡಿದರು.

ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸರಕಾರ ಘೋಷಿಸಿರುವ ಖಾಸಗಿ ಸಹಭಾಗಿತ್ವದ ಬದಲಾಗಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆದಿರುವ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.

ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿರುವ ಬಂಥನಾಳ ಶಿವಯೋಗಿಗಳ ಹೆಸರಿನಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಕನಸಿದೆ. ಇದಕ್ಕಾಗಿ ನಾನು ಆರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲಿ ಸರಕಾರಿ ಕಾಲೇಜು ಆರಂಭಕ್ಕೆ ಬೇಕಿರುವ ಎಲ್ಲ ಸೌಲಭ್ಯ ಕಲ್ಪಿಸಿದ್ದೇನೆ ಎಂದರು.

ಹೊಸದಾಗಿ ಸರಕಾರಿ ಕಾಲೇಜು ಸ್ಥಾಪನೆಗೆ ಕನಿಷ್ಟ 500 ಕೋಟಿ ರೂ. ಬೇಕು‌. ಆದರೆ ವಿಜಯಪುರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ನಾನು ಸಚಿವನಾಗಿ ಅಗತ್ಯ ಸೌಲಭ್ಯ ಕಲ್ಪಿಸಿದ್ದೇನೆ. ಹೀಗಾಗಿ ಸರಕಾರ ಆರಂಭದಲ್ಲಿ 50 ಕೋಟಿ ರೂ.ನಂತೆ ಕೇವಲ 100 ಕೋಟಿ ರೂ‌. ಅನುದಾನ ನೀಡಿದರೂ ಸಾಕು ಎಂದರು.

ವಿಜಯಪುರ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ 2013 ರಿಂದಲೂ ಪ್ರಯತ್ನಿಸುತ್ತಿದ್ದೇನೆ. ಆಗ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಹಾಗೂ ಈ ಹಿಂದೆ ಅಧಿಕಾರದಲ್ಲಿದ್ದ ಬಸವರಾಜ ಬೊಮ್ಮಾಯಿ ಇಬ್ಬರೂ ಈ ವಿಷಯವಾಗಿ ನನಗೆ ಸದನದಲ್ಲೂ ಭರವಸೆ ನೀಡಿದ್ದರು. ಆದರೂ ರಾಜ್ಯದಲ್ಲಿ ಮಾತ್ರವಲ್ಲ, ದೇಶದ ಯಾವುದೇ ರಾಜ್ಯದಲ್ಲಿ ಇಲ್ಲದ ಖಾಸಗಿ ಸಹಭಾಗಿತ್ವದ ವೈದ್ಯಕೀಯ ಕಾಲೇಜು ಅನುಷ್ಠಾನ ವಿಜಯಪುರ ಜಿಲ್ಲೆಗೆ ಮಾತ್ರ ಏಕೆ ಎಂಬುದು ನನಗೂ ಅರ್ಥವಾಗುತ್ತಿಲ್ಲ ಎಂದರು‌

ವಿಜಯಪುರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯವಾದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್, ಎಂ.ಆರ್.ಐ. ಸ್ಕ್ಯಾನಿಂಗ್ ಸೆಂಟರ್, ರಾಜ್ಯದಲ್ಲೇ ಎಲ್ಲೂ ಇಲ್ಲದ 150 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಬಿಎಸ್ಸಿ ನರ್ಸಿಂಗ್ ಹಾಗೂ ಡಿಪ್ಲೊಮಾ ನರ್ಸಿಂಗ್ ಕಾಲೇಜುಗಳು, 150 ಎಕರೆ ವಿಸ್ತೀರ್ಣದ ಸರಕಾರಿ ಆಸ್ಪತ್ರೆ ಆಸ್ತಿ ಸಂರಕ್ಷಣೆಗಾಗಿ ಕಾಂಪೌಂಡ್ ನಿರ್ಮಿಸಿದ್ದೇನೆ ಎಂದರು.

ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಸಮಿತಿಯ ಡಾ.ಗೋಪಾಲ ದಾಬಡೆ (ಹುಬ್ಬಳ್ಳಿ), ಅರವಿಂದ ಕುಲಕರ್ಣಿ, ಅನಿಲ ಹೊಸಮನಿ, ಪ್ರಭುಗೌಡ ಪಾಟೀಲ, ಜಗದೀಶ ಸೂರ್ಯವಂಶಿ, ಶ್ರೀನಾಥ ಪೂಜಾರಿ, ಸಿದ್ಧಲಿಂಗ ಬಾಗೇವಾಡಿ, ಲಕ್ಷ್ಮಣ ಕಂಬಾಗಿ, ಜಗದೀಶ ಕಲಘಟಗಿ, ಭೋಗೇಶ ಸೋಲಾಪುರ, ಮಲ್ಲಿಕಾರ್ಜುನ ಕೆಂಗನಾಳ, ಭರತಕುಮಾರ ಎಚ್.ಟಿ.,ಸುರೇಶ ಬಿಜಾಪುರ, ಮಲ್ಲಿಕಾರ್ಜುನ ಬಟಗಿ, ಎಚ್.ಟಿ. ಮಲ್ಲಿಕಾರ್ಜುನ, ಅಕ್ರಮ ಮಾಶ್ಯಾಳಕರ, ಕಾವೇರಿ ರಜಪೂತ, ಸಿದ್ದರಾಮಯ್ಯ ಹಿರೇಮಠ, ಲಕ್ಷ್ಮಣ ಹಂದ್ರಾಳ, ಬಾಬುರಾವ ಬೀರಕಬ್ಬಿ, ಗೀತಾ, ಶಿವಬಾಳಮ್ಮ ಕೊಂಡಗೂಳಿ, ಚೆನ್ನು ಕಟ್ಟಿಮನಿ, ಸಂಜು ಕಂಬಾಗಿ, ಸೋಮು ರಣದಿವೆ, ಬಾಳು ಜೇವೂರ, ಸುನೀತಾ ಮೋರೆ, ಗೀತಾ ಕಟ್ಟಿ, ಗೀತಾ ಪಾಟೀಲ, ಕಾಮಿನಿ ಕಸಬೆ, ನಕುಶಾ ಹೊಸಮನಿ, ಶೋಭಾ ಬಿರಾದಾರ, ಸವಿತಾ ಹೊಸಮನಿ, ಅಪ್ಪು ಗುಣಕಿ ಸೇರಿದಂತೆ ನೂರಾರು ಮುಖಂಡರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News