ವಿಜಯಪುರ ಜಿಲ್ಲೆಯಲ್ಲೂ ಕಬ್ಬಿಗೆ 3,300 ರೂ. ದರ ನಿಗದಿ; ರೈತರ ಸಂಭ್ರಮ
ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಕೊನೆಗೂ ಪ್ರತಿ ಟನ್ ಕಬ್ಬಿಗೆ 3,300 ರೂ. ದರವನ್ನು ಡಿಸಿ ಡಾ.ಆನಂದ ಕೆ ಘೋಷಿಸಿದ ಹಿನ್ನಲೆಯಲ್ಲಿ ವಿಜಯಪುರ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ - ಹಸಿರು ಸೇನೆ ಪದಾಧಿಕಾರಿಗಳು ಹಾಗೂ ರೈತರು ಅಹೋರಾತ್ರಿ ಧರಣಿಯನ್ನು ಕೈಬಿಟ್ಟರು.
ನ.7ರಂದು ಮುಖ್ಯಮಂತ್ರಿಗಳು ಸಭೆ ನಡೆಸಿ, ಪ್ರತಿ ಟನ್ ಗೆ 3,300 ದರ ಘೋಷಿಸಿದ್ದರು. ಆದರೆ ರಿಕವರಿ ಆಧರಿಸಿ ಬೆಲೆ ನಿಗದಿಪಡಿಸಿರುವುದರಿಂದ ವಿಜಯಪುರ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಅನ್ಯಾಯ ಆಗುತ್ತದೆ, ವಿಜಯಪುರ ಜಿಲ್ಲೆಗೆ ಪ್ರತ್ಯೇಕವಾಗಿಯೇ 3,500 ರೂ. ನಿಗದಿ ಮಾಡುವಂತೆ ರೈತರು ಹೋರಾಟ ಮುಂದುವರೆಸಿದ್ದರು.
ಆದರೆ ಇದೀಗ ಸರಕಾರ ವಿಜಯಪುರ ಜಿಲ್ಲೆಯಲ್ಲೂ 3,300 ರೂ. ದರ ನಿಗದಿ ಮಾಡಿದ್ದ ಹಿನ್ನೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ಅಂತ್ಯಗೊಂಡಿದೆ.
ಜಿಲ್ಲಾಧಿಕಾರಿ ಡಾ.ಆನಂದ ಮಾತನಾಡಿ, ಸರಕಾರದ ಆದೇಶದಂತೆ ಒಂದು ಟನ್ ಕಬ್ಬಿಗೆ 3,300 ರೂಪಾಯಿ ನಿಗದಿ ಮಾಡಲಾಗಿದೆ. ಕಬ್ಬಿನ ಇಳುವರಿ ಕಡಿಮೆ ಅಥವಾ ಹೆಚ್ಚು ಇದ್ದರೂ 3,300 ನೀಡಬೇಕು ಎನ್ನುವ ಆದೇಶ ನೀಡಲಾಗಿದೆ. ಅಲ್ಲದೇ, ಸಕ್ಕರೆ ಕಾರ್ಖಾನೆ ಮಾಲೀಕರು 3,250 ಹಾಗೂ ಸರಕಾರ 50 ರೂ. ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ರಾಹುಲ್ ಕುಬಕಡ್ಡಿ, ಶ್ರೀಶೈಲ ಮಳಜಿ, ರಾಮನಗೌಡ ಪಾಟೀಲ, ಸಂಗಪ್ಪ ಟಕ್ಕೆ ಮುಂತಾದವರು ಇದ್ದರು.