×
Ad

ಜನಪರ, ಜೀವಪರ ಚಿಂತನೆಯ ಮುಖವಾಣಿ

Update: 2025-08-29 11:53 IST

ಕಳೆದ ಇಪ್ಪತ್ತೆರಡು ವರ್ಷಗಳಿಂದ ಶೋಷಿತರ ದನಿಯಾಗಿ ಸಮಸಮಾಜದ ಕನಸುಗಳ ಆಶಯದ ನೆಲೆಯಲ್ಲಿ ವ್ಯವಸ್ಥೆಯ ಅಂಕುಡೊಂಕುಗಳನ್ನು ಎತ್ತಿ ಹಿಡಿಯುತ್ತ ಹಾಗೂ ತಿದ್ದುತ್ತ ಸಹೃದಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಾ ಬರುತ್ತಿರುವ ‘ವಾರ್ತಾಭಾರತಿ’ ದಿನಪತ್ರಿಕೆ ಇಂದು ಜನಪರ ಹಾಗೂ ಜೀವಪರ ಚಿಂತನೆಗಳಿಗೆ ಮುಖವಾಣಿಯಾಗಿದೆ. ‘ವಾರ್ತಾಭಾರತಿ’ ಕೇವಲ ಪತ್ರಿಕೆಯಲ್ಲ; ಅದೊಂದು ಸಂವೇದನಾಶೀಲ ಸಮಾಜದ ಸಿದ್ಧಾಂತ. ಬಹುಜನರ ಬದುಕು-ಬವಣೆಗಳ ಹೂರಣ. ಜನಪರ ಚಳವಳಿಗಳಿಗೆ ಊರುಗೋಲು. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿನ ಕಾವಲುಗಾರ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಕ ಹಾಗೂ ಎಲ್ಲಾ ನೆಲಮೂಲ ಸಮಾಜಗಳ ಹಕ್ಕುಗಳ ಹೋರಾಟದ ಮಾಧ್ಯಮ ಶಕ್ತಿ ಕೂಡ.

ನಾನು ‘ವಾರ್ತಾಭಾರತಿ’ ದಿನಪತ್ರಿಕೆಯ ಬಗ್ಗೆ ಹಿಂದೆ ಕೇಳಿದ್ದೆ ಅಷ್ಟೇ, ಆದರೆ ಎರಡು ವರ್ಷಗಳಿಂದ ಮನೆಗೆ ತರಿಸಿಕೊಂಡು ಓದುತ್ತಾ ಬಂದಿದ್ದೇನೆ. ಅಲ್ಲದೆ ಈ ಪತ್ರಿಕೆಯಲ್ಲಿ ಮೂಡಿ ಬರುತ್ತಿರುವ ವಿಚಾರ ವೈವಿಧ್ಯಗಳನ್ನು ನೋಡಿ ಮೆಚ್ಚಿಕೊಂಡು ಸಂತೋಷಗೊಂಡಿದ್ದೇನೆ ಹಾಗೂ ಈ ಪತ್ರಿಕೆಯ ಖಾಯಂ ಚಂದಾದಾರನಾಗಲು ಇಚ್ಛಿಸಿದ್ದೇನೆ. ‘ವಾರ್ತಾಭಾರತಿ’ ಬಹುಮುಖ ಆಯಾಮದಲ್ಲಿ ಮೂಡಿಬರುತ್ತಿದೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ಚರಿತ್ರೆ, ಪುರಾತತ್ವ, ರಾಜಕೀಯ, ಆರ್ಥಿಕ ಆಹಾರ, ವೈದ್ಯ, ಸಾರ್ವಜನಿಕ ಆಡಳಿತ, ಗ್ರಾಮೀಣಾಭಿವೃದ್ಧಿ, ಕೃಷಿ ಸಂಬಂಧಿ ಚಿಂತನೆ, ಕಲೆ, ಸಂಗೀತ ಕ್ರೀಡೆ, ಸಿನೆಮಾ, ವಿದೇಶಾಂಗ ನೀತಿ, ಸಂಸದೀಯ ವ್ಯವಹಾರ, ಸರಕಾರದ ಯೋಜನೆಗಳು, ಅನುಷ್ಠಾನಗಳು ಹಾಗೂ ಸಂವಿಧಾನ ವಿರೋಧಿ ಮತ್ತು ಜನವಿರೋಧಿ ನಡಾವಳಿಗಳಂಥ ಹಲವಾರು ಸೂಕ್ಷ್ಮ ವಿಚಾರಗಳು ವೈಜ್ಞಾನಿಕ ಮತ್ತು ವೈಚಾರಿಕ ಬರಹಗಳು ‘ವಾರ್ತಾಭಾರತಿ’ ದಿನಪತ್ರಿಕೆಯಲ್ಲಿ ಮೈ ತುಂಬಿ ಬರುತ್ತಿವೆ. ಕೇಂದ್ರ ಸರಕಾರದ ಹುಳುಕುಗಳನ್ನು ಹುಡುಕುತ್ತಲೇ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳನ್ನು, ಸಂವಿಧಾನ ಪೀಠಿಕಾ ಕಾರ್ಯಕ್ರಮಗಳನ್ನು ಹಾಗೂ ಒಳಮೀಸಲಾತಿ ಚರ್ಚೆಗಳನ್ನು ಬಹಳ ಗಂಭೀರವಾಗಿ ಪ್ರಕಟಿಸುತ್ತಲೇ ಬಂದಿದೆ. ನಾಡಿನ ಪತ್ರಿಕೋದ್ಯಮದ ಸಾಕ್ಷಿ ಪ್ರಜ್ಞೆಯಂತಿರುವ ‘ವಾರ್ತಾಭಾರತಿ’ ಇಂದು ಆದಿವಾಸಿಗರ, ಶೋಷಿತರ, ದೀನದಲಿತರ, ಅಲ್ಪಸಂಖ್ಯಾತರ, ಹಿಂದುಳಿದವರ, ಅಲಕ್ಷಿತರ ಹಾಗೂ ತುಳಿತಕ್ಕೆ ಒಳಗಾದ ತಬ್ಬಲಿ ಸಮುದಾಯಗಳಿಗೆ ಆಸರೆಯಾಗಿದೆ. ಅವರ ವಿಚಾರಗಳ ಪ್ರಚಾರಕ್ಕೆ ಟೊಂಕಕಟ್ಟಿ ನಿಂತಿದೆ. ಅಲ್ಲದೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸಮ ಸಮಾಜದ ಆಶಯಗಳ ಪ್ರತಿಪಾದನೆಗೆ ಈ ಪತ್ರಿಕೆ ಸದಾ ಧ್ವನಿಯಾಗಿದೆ. ನಿಖರತೆ, ಪ್ರಖರತೆ ಮತ್ತು ಬದ್ಧತೆಯ ಮೂಲಕವೇ ಪತ್ರಿಕಾ ರಂಗಕ್ಕೆ ಮಾನ್ಯತೆ ತಂದುಕೊಟ್ಟಿದೆ. ಸಮಾಜಮುಖಿಯಾಗಿ ಬೆಳೆದು ವಿಶ್ವಾಸ ಮತ್ತು ನಂಬಿಕೆಗೆ ಅರ್ಹವಾಗಿದೆ. ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶಗಳ ನಿಖರ ಸುದ್ದಿಗಳಿಗೆ ‘ವಾರ್ತಾಭಾರತಿ’ ಹೆಚ್ಚು ಹೆಸರುವಾಸಿಯಾಗಿದೆ.

ಇಂದಿನ ಬಹುತೇಕ ಪತ್ರಿಕೆಗಳು ಕಮರ್ಷಿಯಲ್‌ಗಳಾಗಿವೆ ಎಂದರೆ ತಪ್ಪೇನಿಲ್ಲ. ಆದರೆ ‘ವಾರ್ತಾಭಾರತಿ’ ದಿನಪತ್ರಿಕೆ ಅದರ ಆಚೆ ನಿಂತು ತನ್ನ ಸ್ವಾಭಿಮಾನ ಮತ್ತು ಸ್ವಾವಲಂಬಿ ನಡೆಯಲ್ಲಿ ಸಾಗುತ್ತಿದೆ. ಖಾಸಗಿ ಜಾಹೀರಾತುಗಳಿಂದ ದೂರ ಸರಿದು ಅನೇಕ ಸಮಸ್ಯೆ ಮತ್ತು ಸವಾಲುಗಳ ನಡುವೆ ಮೇಲೆದ್ದು ರಾಜ್ಯ ಮಟ್ಟದ ದಿನಪತ್ರಿಕೆಯಾಗಿ ರೂಪುಗೊಂಡಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶೋತ್ತರಗಳಿಗೆ ಬೆನ್ನೆಲುಬಾಗಿ ನಿಂತು ಅವುಗಳಿಗೆ ಪೂರಕವಾಗಿ ಮಿಡಿಯುವ, ದುಡಿಯುವ ಬಹಳ ದೊಡ್ಡ ಜನತಾ ಮಾಧ್ಯಮವಾಗಿ ‘ವಾರ್ತಾಭಾರತಿ’ ಹೊರಹೊಮ್ಮಿದೆ. ಇಂದಿಗೂ ಜನರ ಮಧ್ಯೆ ನಿಂತು ಅವರ ಸಮಸ್ಯೆಗಳಿಗೆ ಧ್ವನಿಯಾಗಿ ಮುಖಾಮುಖಿಯಾಗುತ್ತಲೇ ಬರುತ್ತಿದೆ.

‘ವಾರ್ತಾಭಾರತಿ’ ಇತರ ಪತ್ರಿಕೆಗಳ ಹಾಗೆ ಎಂದೂ ಕೂಡ ಗುದ್ದಲಿ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳ ವಿವರಗಳಿಗೆ ಸೀಮಿತಗೊಳ್ಳದೆ ಸಮಾಜಮುಖಿ ಕಾರ್ಯಕ್ರಮಗಳಿಗೆ ಹಾಗೂ ವೈಚಾರಿಕ ಮತ್ತು ವೈಜ್ಞಾನಿಕ ಬರಹಗಳಿಗೆ ಮಾತ್ರ ಮೀಸಲಾಗಿರುವುದು ಗೊತ್ತಾಗುತ್ತದೆ. ಸರಕಾರಗಳ ಜನಪರ ಕಾರ್ಯಕ್ರಮಗಳ ವಿಶ್ಲೇಷಣಾ ವರದಿಗಳಲ್ಲದೆ, ಸರಕಾರ ಮತ್ತು ರಾಜಕಾರಣಿಗಳ ಹಾಗೂ ಬಂಡವಾಳ ಶಾಹಿ ಮತ್ತು ಜಮೀನ್ದಾರಿ ವ್ಯವಸ್ಥೆಯ ಜನ ವಿರೋಧಿ ನಡೆಗಳ ಟೀಕೆ ಟಿಪ್ಪಣಿಗಳ ಚರ್ಚೆಯನ್ನು ಕೂಡ ಬಹಳ ಎದೆಗಾರಿಕೆಯಿಂದ ಪ್ರಕಟಿಸುತ್ತಿದೆ.

ಸೌಹಾರ್ದ ಹಾಗೂ ಸಮಾನತೆಯ ಹಕ್ಕು ಪ್ರತಿಪಾದನೆಯ ‘ವಾರ್ತಾಭಾರತಿ’ ಯಾವಾಗಲೂ ದಲಿತ, ಹಿಂದುಳಿದ, ಕೃಷಿಕರ, ಕೂಲಿ ಕಾರ್ಮಿಕರ, ಅಲ್ಪಸಂಖ್ಯಾತರ ನೆಲೆ ಬೆಲೆ ಇಲ್ಲದ ಹಲವಾರು ಸಮುದಾಯಗಳಿಗೆ ಹಾಗೂ ಮಹಿಳೆಯರಿಗೆ ಪ್ರಬಲ ಧ್ವನಿಯಾಗಿ ಕಾಣಿಸಿಕೊಳ್ಳುತ್ತದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಲೇ ಸೈದ್ಧಾಂತಿಕ ಹೋರಾಟಗಳಿಗೆ ಬೆಂಬಲಿಸುವ ಹಾದಿ ತುಳಿದಿದೆ. ಈ ಪತ್ರಿಕೆ ಶೋಷಣೆಗೆ ಒಳಗಾದವರ ಪರವಾದದ ಹಣೆಪಟ್ಟಿಯೊಂದಿಗೆ ಬೆಸೆದುಕೊಂಡು ಪ್ರತಿನಿತ್ಯ ನಿಷ್ಠುರವಾದ ವರದಿಗಳನ್ನು ಮಾಡುತ್ತಾ ಬಂದಿದೆ. ಇಲ್ಲಿ ಬಿತ್ತರಗೊಳ್ಳುತ್ತಿರುವ ಬಹುತೇಕ ಬರಹಗಳು ಆಧಾರಗಳನ್ನು ಇಟ್ಟುಕೊಂಡು ಬರೆದವುಗಳಾಗಿರುವುದರಿಂದ ಅವು ಸಾಕಷ್ಟು ಓದುಗರ ವಲಯವನ್ನು ತಲುಪುತ್ತಿವೆ. ತಬ್ಬಲಿ ಸಮುದಾಯಗಳ ಬಗ್ಗೆ ಯಾವಾಗಲೂ ಹೆಚ್ಚು ಫೋಕಸ್ ಮಾಡುವ ರಾಜ್ಯದ ಏಕೈಕ ಪತ್ರಿಕೆ ಎಂದರೆ ಅದು ‘ವಾರ್ತಾಭಾರತಿ’ಯೇ ಎನ್ನುವ ಮಾತು ಕೂಡ ಇದೆ. ಕೋಮುವಾದವನ್ನು ಸದಾ ವಿರೋಧಿಸುತ್ತಾ ಬಂದಿರುವ ಈ ಮಾಧ್ಯಮ ಸಾಮಾಜಿಕ ನ್ಯಾಯದ ಮಾನವೀಯ ನಡೆಗಳಿಗೆ ಬೆಂಬಲಿತವಾಗಿದೆ.

‘ವಾರ್ತಾಭಾರತಿ’ಯ ಗರ್ಭದೊಳಗೆ ಪ್ರದೇಶ ಭಾರತಿ, ವಿದೇಶ ಭಾರತಿ, ವೈವಿಧ್ಯ ಭಾರತಿ, ಕ್ರೀಡಾ ಭಾರತಿ ಹಾಗೂ ವಿವಿಧ ಭಾರತೀಯ ಭಾಗಗಳು ಜೀವ ತುಂಬಿ ಆಯಾಯ ಕಾಲ ಸಂದರ್ಭಕ್ಕೆ ಅನುಗುಣವಾಗಿ ಬಹುಮುಖ ವಿಚಾರಧಾರೆಗಳಾಗಿ ಬೆಳೆಯುತ್ತಾ ಬಂದಿವೆ. ಇಲ್ಲಿ ಪ್ರಕಟವಾಗುತ್ತಿರುವ ಬಹಳಷ್ಟು ವೈಚಾರಿಕ, ವಿಶ್ಲೇಷಣಾತ್ಮಕ ಹಾಗೂ ಸಂಶೋಧನ ಬರಹಗಳು ಪರಾಮರ್ಶನ ಚಿಂತನೆಗಳಿಗೆ ಸಾಕ್ಷಿಯಾಗಿವೆ. ‘ವಾರ್ತಾಭಾರತಿ’ಯಲ್ಲಿ ಗುಣಾತ್ಮಕವಾಗಿ ಆಗಾಗ ಬರುತ್ತಿರುವ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಪೆರಿಯಾರ್, ನಾರಾಯಣ ಗುರು, ನಾಲ್ವಡಿ ಕೃಷ್ಣರಾಜ ಒಡೆಯರ್, ಕನಕ, ಶಾಹು ಮಹಾರಾಜ್, ಫುಲೆ ದಂಪತಿ, ಕುದ್ಮಲ್ ರಂಗರಾವ್, ಕುವೆಂಪು ಹಾಗೂ ಇನ್ನಿತರ ದಾರ್ಶನಿಕರ, ಸಮಾಜ ಸುಧಾರಕರ, ಚಳವಳಿಗಾರರ, ಕಲಾವಿದರ ಬರಹಗಳು ಸಾಕಷ್ಟು ಅಧ್ಯಯನ ಯೋಗ್ಯವಾಗಿವೆ.

ಈ ಪತ್ರಿಕೆ ಕರ್ನಾಟಕದ ಅತ್ಯಂತ ಒಂದಷ್ಟು ಕ್ರಿಯಾಶೀಲ ಬರಹಗಾರರನ್ನು, ಲೇಖಕರನ್ನು ಹುಟ್ಟು ಹಾಕಿದೆ. ಅವರು ಬರೆದ ಬರಹಗಳಿಗೆ ಹಾಗೂ ಅಭಿಪ್ರಾಯಗಳಿಗೆ ಈ ಪತ್ರಿಕೆ ವೇದಿಕೆಯೂ ಆಗಿದೆ. ‘ವಾರ್ತಾಭಾರತಿ’ ಪತ್ರಿಕೆಯನ್ನು ಬೆಂಬಲಿಸಿ ಸಾಕಷ್ಟು ಹಿರಿಯ ವಿದ್ವಾಂಸರು ಹಾಗೂ ಬರಹಗಾರರೂ ಬರೆಯುತ್ತಿರುತ್ತಾರೆ. ಅವರ ಸಂವೇದನಾಶೀಲ ಹಾಗೂ ಸಂಶೋಧನಾತ್ಮಕ ಬರಹಗಳು ಈ ಪತ್ರಿಕೆಯ ಬೆಳವಣಿಗೆಗೆ ಪೂರಕವೂ ಆಗಿವೆ. ಪುರುಷೋತ್ತಮ ಬಿಳಿಮಲೆ, ಬರಗೂರು ರಾಮಚಂದ್ರಪ್ಪ, ರಹಮತ್ ತರೀಕೆರೆ, ಸಿ.ಎಸ್. ದ್ವಾರಕಾನಾಥ್, ನಟರಾಜ್ ಹುಳಿಯಾರ್, ಬಂಜಗೆರೆ ಜಯಪ್ರಕಾಶ್, ಶ್ರೀನಿವಾಸ್ ಕಕ್ಕಿಲ್ಲಾಯ, ಶಿವಸುಂದರ್, ನಾ. ದಿವಾಕರ, ದಾಸನೂರು ಕೂಸಣ್ಣ, ನಿರಂಜನಾರಾಧ್ಯ ವಿ.ಪಿ., ರಂಜಾನ್ ದರ್ಗಾ, ಬಿ.ಎ. ವಿವೇಕ್ ರೈ, ಕೆ. ಚಿನ್ನಪ್ಪ ಗೌಡ, ಬಿ. ಶ್ರೀಪಾದ ಭಟ್, ಕೆ.ಎನ್. ಲಿಂಗಪ್ಪ, ಎಂ. ವೆಂಕಟಸ್ವಾಮಿ, ಡಿ.ಸಿ. ನಂಜುಂಡ, ಹರೀಶ್ ಎಚ್.ಕೆ. ಮುಂತಾದವರ ವಸ್ತುನಿಷ್ಠ ಬರಹಗಳು ‘ವಾರ್ತಾಭಾರತಿ’ಗೆ ಜನಪ್ರಿಯತೆಯನ್ನು ತಂದುಕೊಟ್ಟಿವೆ. ಅಂಕಣಗಳಾದ ಸನತ್ ಕುಮಾರ್ ಬೆಳಗಲಿ ಅವರ ‘ಪ್ರಚಲಿತ’, ಡಾ. ರಾಜಶೇಖರ್ ಹತಗುಂದಿ ಅವರ ‘ಜವಾರಿ ಮಾತು’, ಸುಬ್ಬು ಹೊಲೆಯಾರ್ ಅವರ ‘ನೀಲಿ ಬಾವುಟ’, ನಟರಾಜ್ ಹುಳಿಯಾರ್ ಅವರ ‘ಗಾಳಿ ಬೆಳಕು’, ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರ ‘ಅನುಗಾಲ’, ರಾಮಚಂದ್ರ ಗುಹಾ ಅವರ ‘ಕಾಲಮಾನ’, ಶಿವಸುಂದರ್ ಅವರ ‘ಕಾಲಂ 9’, ನರೇಂದ್ರ ರೈ ದೇರ್ಲ ಅವರ ‘ಮನೋಭೂಮಿಕೆ’, ಧರಣೀಶ್ ಬೂಕನಕೆರೆ ಅವರ ‘ಆನ್ ರೆಕಾರ್ಡ್’, ರಾಜಾರಾಂ ತಲ್ಲೂರು ಅವರ ‘ಪಿಟ್ಕಾಯಣ’, ಗಣೇಶ್ ಅಮೀನಗಡ ಅವರ ‘ರಂಗ ಪ್ರಸಂಗ’, ಯೋಗೇಶ್ ಮಾಸ್ಟರ್ ಅವರ ‘ಮನೋಚರಿತ್ರ’, ಮಾಧವ ಐತಾಳ್ ಅವರ ‘ಬಹುವಚನ’ ಹಾಗೂ ಡಾ. ಅರುಣ್ ಜೋಳದ ಕೂಡ್ಲಿಗಿ ಅವರ ‘ಜನಚರಿತೆ’ ಹಾಗೂ ಶಂಬೂಕರ ‘ಚರ್ಚಾರ್ಹ’ ಮತ್ತು ಆರ್. ಜೀವಿ ಅವರ ‘ಅವಲೋಕನ’ಗಳು ಹೆಚ್ಚು ಹೆಚ್ಚು ವಾಸ್ತವಿಕವಾಗಿರುವುದಲ್ಲದೆ ಜನಮನ್ನಣೆಗೆ ಒಳಗಾಗಿವೆ. ಅಲ್ಲದೆ ಸಮಕಾಲೀನತನಕ್ಕೆ ತೆರೆದುಕೊಡಿವೆ. ಇಲ್ಲಿಯ ಎಷ್ಟೋ ಬರಹಗಳು ಬಹು ಸಂಖ್ಯೆಯ ಓದುಗರ ಮನಗೆದ್ದಿವೆ. ಇಂತಹ ಸಮಾಜಮುಖಿ ಚರ್ಚಾತ್ಮಕ ಚಿಂತನಶೀಲ ಬರಹಗಳು ವಾರ್ತಾ ಭಾರತೀಯ ಬೆಳವಣಿಗೆಗೆ ಪೋಷಕವಾಗಿವೆ.

ಹಾಗೆಯೇ ಜನದನಿಯ ಸಾರಥಿಯ ಹೆಸರಿನಲ್ಲಿ ಮೂಡಿ ಬರುತ್ತಿರುವ ಸಂಪಾದಕೀಯ ಮಾತುಗಳು ಸಮಕಾಲೀನ ಸಂಕಟ ಮತ್ತು ಸವಾಲುಗಳಿಗೆ ಹಿಡಿದ ಕೈಗನ್ನಡಿಯಾಗಿವೆ. ಅಲ್ಲದೆ ಪ್ರಸ್ತುತ ವ್ಯವಸ್ಥೆಗೆ ತಿಳಿ ಹೇಳುವ ಪ್ರಶ್ನೋತ್ತರವಾಗಿವೆ. ಬಹಳ ಮೌಲಿಕವಾದ ಸಂಪಾದಕೀಯ ಮಾತುಗಳು ಪತ್ರಿಕೆಯ ನೈತಿಕತೆಗೆ ಸಾಕ್ಷಿಯಾಗಿವೆ. ಇಪ್ಪತ್ತೆರಡು ವರ್ಷಗಳ ಮಾಧ್ಯಮದ ಈ ಸಾರ್ಥಕ ಪಯಣ ‘ವಾರ್ತಾಭಾರತಿ’ಗೆ ಮತ್ತಷ್ಟು ನೈತಿಕ ಮತ್ತು ಸಂವಿಧಾನಾತ್ಮಕ ಜವಾಬ್ದಾರಿಯನ್ನು ಹೆಚ್ಚಿಸಿದೆ. ಇಪ್ಪತ್ಮೂರು ವರ್ಷಕ್ಕೆ ಕಾಲಿಡುತ್ತಿರುವ ‘ವಾರ್ತಾಭಾರತಿ’ಗೆ ಅಭಿನಂದನೆಗಳು. ಇನ್ನೂ ಮುಂದೆಯೂ ಬದ್ಧತೆಯ ಪತ್ರಿಕಾ ಧರ್ಮವನ್ನು ಮುಂದುವರಿಸಲಿ ಎಂದು ಆಶಿಸುತ್ತೇನೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಪ್ರೊ. ಎಂ. ನಂಜಯ್ಯ ಹೊಂಗನೂರು

contributor

ಜಾನಪದ ಪ್ರಾಧ್ಯಾಪಕ ಹಾಗೂ ನಿರ್ದೇಶಕ ಪ್ರಸಾರಾಂಗ, ಮೈಸೂರು ವಿವಿ

Similar News