×
Ad

ಉಡುಪಿಯಲ್ಲಿ ಕಾಣಸಿಗುವ ಅಪರೂಪದ ತೋಳ ಹಾವು !

ಕಟ್ಟುಗಳಿಲ್ಲದ ವಿಶಿಷ್ಟ ಹಾವು : ಹೆಚ್ಚಿನ ಅಧ್ಯಯನಕ್ಕೆ ಉರಗ ತಜ್ಞರ ಒಲವು

Update: 2025-11-03 08:11 IST

ಉಡುಪಿ: ಉಡುಪಿ ಜಿಲ್ಲಾದ್ಯಂತ ಸಾಮಾನ್ಯವಾಗಿ ಕಂಡು ಬರುವ ತೋಳ ಹಾವು ಇತರ ತೋಳ ಹಾವುಗಳಿಗಿಂತ ಬಹಳಷ್ಟು ವಿಶೇಷವಾಗಿದ್ದು, ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕೆಂಬುದು ಉರಗ ತಜ್ಞರ ಅಭಿಪ್ರಾಯವಾಗಿದೆ.

ಪ್ರಕೃತಿಯ ಒಂದು ಪ್ರಮುಖ ಭಾಗವಾಗಿರುವ ಹಾವುಗಳು, ಭೂಮಿಯ ಪರಿಸರದಲ್ಲಿನ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಆಹಾರ ಸರಪಳಿಯಲ್ಲಿ ಒಂದು ಕೊಂಡಿಯಾಗಿ, ಇಲಿ, ಕಪ್ಪೆ, ಕ್ರಿಮಿಕೀಟಗಳನ್ನು ತಿನ್ನುವ ಮೂಲಕ ಕೀಟಗಳ ನಿಯಂತ್ರಣದಲ್ಲೂ ಹಾವುಗಳು ಮುಂಚೂಣಿಯಲ್ಲಿವೆ. ಹಾವುಗಳಿರುವ ಪರಿಸರವು ಆರೋಗ್ಯಕರ ಜೀವ ವೈವಿಧ್ಯದಿಂದ ಕೂಡಿರುತ್ತದೆ. ಈ ಮೂಲಕ ಅವುಗಳು ಉತ್ತಮ ಪರಿಸರದ ಸೂಚಕಗಳು ಕೂಡ ಆಗಿವೆ.

ಉಡುಪಿ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಈವರೆಗೆ 30-32 ಪ್ರಭೇದಗಳ ಹಾವುಗಳು ಕಂಡುಬಂದಿವೆ. ಅವುಗಳಲ್ಲಿ ನಾಗರಹಾವು, ಕಡಂಬಲ, ಕನ್ನಡಿ ಹಾವು, ಗರಗಸ ಹುರುಪಿನ ಮಂಡಲ ಹಾವು, ಕಾಳಿಂಗ ಸರ್ಪ ಸೇರಿದಂತೆ ಏಳೆಂಟು ಪ್ರಭೇದದ ಹಾವುಗಳು ವಿಷಕಾರಿಯಾಗಿವೆ. ಉಳಿದಂತೆ ಬಹುತೇಕ ಹಾವುಗಳು ವಿಷರಹಿತ ಹಾವುಗಳು. ಅದರಲ್ಲಿ ಈ ತೋಳ ಹಾವು ಕೂಡ ಒಂದು. ಇದನ್ನು ಆಂಗ್ಲ ಭಾಷೆಯಲ್ಲಿ ಕಾಮನ್ ವೂಲ್ಫ್ ಸ್ನೇಕ್ ಎಂಬುದಾಗಿ ಕರೆಯಲಾಗುತ್ತದೆ.

ವಿಶೇಷ ತೋಳ ಹಾವು :

ಭಾರತದ ಎಲ್ಲ ಕಡೆಗಳಲ್ಲಿ ಕಂಡುಬರುವ ಸಾಮಾನ್ಯ ತೋಳ ಹಾವು ಬೂದು, ಕಡು ಕಂದು, ಕಪ್ಪು ಬಣ್ಣಗಳಿಂದ ಕೂಡಿದ್ದು, ಅದಕ್ಕೆ ಬಿಳಿ ಅಥವಾ ಹಳದಿ ಬಣ್ಣದ ಕಟ್ಟುಗಳು ಇರುತ್ತವೆ. ಇವು ಉಡುಪಿ ಜಿಲ್ಲೆಯಲ್ಲೂ ಕಾಣಸಿಗುತ್ತವೆ.

ಈ ಹಾವುಗಳಲ್ಲಿ ಸಾಮಾನ್ಯ ತೋಳ ಹಾವು ಹೊರತುಪಡಿಸಿ ಇನ್ನೆರಡು ಪ್ರಭೇದದವುಗಳು ಕೂಡ ಇವೆ. ಅದರಲ್ಲಿ ಒಂದು ಟ್ರಾವೆಂಕೋರ್ ವೂಲ್ಫ್ ಸ್ನೇಕ್, ಇನ್ನೊಂದು ಬ್ಯಾರೆಡ್ ವೂಲ್ಫ್ ಸ್ನೇಕ್. ಈ ಹಾವುಗಳು ಕೂಡ ಉಡುಪಿ ಜಿಲ್ಲೆಯಲ್ಲಿ ಕಂಡುಬರುತ್ತವೆ. ಇದರೊಂದಿಗೆ ಉಡುಪಿ ಜಿಲ್ಲಾದ್ಯಂತ ಹಾಗೂ ದ.ಕ. ಜಿಲ್ಲೆಯ ಕೆಲವು ಭಾಗಗಳಲ್ಲಿ ಯಾವುದೇ ಕಟ್ಟುಗಳು ಇಲ್ಲದ ಕಂದುಬಣ್ಣದ ಸಾಮಾನ್ಯ ತೋಳ ಹಾವು ಕಾಣಸಿಗುತ್ತಿರುವುದು ವಿಶೇಷವೆನಿಸಿದೆ.

ಹೆಚ್ಚಿನ ಅಧ್ಯಯನ ಅಗತ್ಯ :

ಈ ಶರೀರ ಬಣ್ಣದ ತೋಳ ಹಾವುಗಳು ಈವರೆಗೆ ಉಡುಪಿ, ದಕ. ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಅಥವಾ ಬೇರೆ ಯಾವುದೇ ರಾಜ್ಯಗಳಲ್ಲಿ ಕಾಣಸಿಕ್ಕಿರುವ ಮಾಹಿತಿ ಇಲ್ಲ. ಆದರೂ ಇದು ಸಾಮಾನ್ಯ ತೋಳ ಹಾವೇ ಎಂಬುದೂ ದಾಖಲಾಗಿದೆ. ಆದರೆ ಇದರ ಶರೀರ ಬಣ್ಣ ಬೇರೆ ತೋಳ ಹಾವಿನಂತೆ ಇಲ್ಲ ಎಂಬುದೇ ಗಮನಾರ್ಹ.

ಈ ಶರೀರ ಬಣ್ಣದ ನೂರಾರು ಹಾವುಗಳು ಉಡುಪಿ ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ಕಂಡುಬಂದಿವೆ. ಈ ಹಾವಿನ ಗುಣ ಸ್ವಭಾವ, ಸಂಚಾರದ ಕ್ರಮ, ಶರೀರದ ಮೇಲಿನ ಪೊರೆಯ ಹುರುಪುಗಳು ಇತರ ತೋಳ ಹಾವಿನಂತೆಯೇ ಇದೆ. ಆದರೆ ವಿಶೇಷವೆಂದರೆ ಈ ಹಾವಿನ ಶರೀರ ಬಣ್ಣದಲ್ಲಿ ಯಾವುದೇ ಕಟ್ಟುಗಳು ಇಲ್ಲ. ಆದುದರಿಂದ ಈ ಹಾವಿನ ಬಗ್ಗೆ ಹೆಚ್ಚಿನ ಅಧ್ಯಯನ ಆಗಬೇಕಾಗಿದೆ. ಈ ಹಾವು ತೋಳ ಹಾವಿನ ಪ್ರಭೇದವೇ ಅಥವಾ ಉಪ ಪ್ರಭೇದವೇ ಎಂಬುದರ ಕುರಿತು ಇನ್ನಷ್ಟು ಅಧ್ಯಯನ ಆಗಬೇಕು ಎನ್ನುತ್ತಾರೆ ಉರಗ ತಜ್ಞ ಗುರುರಾಜ್ ಸನಿಲ್.

ತೋಳಹಾವಿನ ಜೀವನಕ್ರಮ:

ಈ ಪ್ರಭೇದದ ಹಾವುಗಳ ಬಾಯಿಯ ಮುಂಭಾಗದಲ್ಲಿ ಉದ್ದನೆ ಹಲ್ಲುಗಳಿದ್ದು, ಅವು ತೋಳದ ಹಲ್ಲುಗಳನ್ನು ಹೋಲುತ್ತವೆ. ಆದ್ದರಿಂದ ಇದಕ್ಕೆ ‘ತೋಳ ಹಾವು’ ಎಂದು ಹೆಸರು ಇಡಲಾಗಿದೆ. ಇದನ್ನು ತುಳುವಿನಲ್ಲಿ ‘ಬುಲಕರಿ’ ಎಂಬುದಾಗಿ ಕರೆಯಲಾಗುತ್ತದೆ.

ತೋಳಹಾವು ಸುಮಾರು 70 ಸೆ.ಮೀ. ಉದ್ದ ಬೆಳೆಯುತ್ತದೆ. ಸಾಮಾನ್ಯವಾಗಿ ಇವು ಸಂಜೆ ಹಾಗೂ ರಾತ್ರಿಯಿಡೀ ಸಂಚಾರ ಮಾಡುತ್ತವೆ. ಮಿಲನ ಕಾಲದಲ್ಲಿ ಇವು ಹಗಲಿನಲ್ಲೂ ಕಾಣಿಸಿಕೊಳ್ಳುತ್ತವೆ.

ಮನೆಯೊಳಗೆ ಒಂದು ಹೆಣ್ಣು ಹಾವು ಇದ್ದರೆ, ಅವು ಹೊರಸೂಸುವ ವಾಸನೆಗೆ ಗಂಡು ಹಾವುಗಳು ಬರುವುದು ಕೂಡ ಉಡುಪಿಯಲ್ಲಿ ಕಂಡುಬಂದಿದೆ. ಇದು ಅಪಾಯಕಾರಿ ಜೀವಿಗಳಲ್ಲ. ವಿಷರಹಿತ ಹಾವು. ಮನೆಯೊಳಗೆ ಕ್ರಿಮಿಕೀಟ, ಹಲ್ಲಿ, ಹಲ್ಲಿಗಳ ಮೊಟ್ಟೆಗಳು, ಇಲಿ ಮರಿ ಜಾಸ್ತಿ ಇದ್ದಾಗ ಅವುಗಳನ್ನು ತಿನ್ನಲು ಬರುತ್ತವೆ. ಹಾಗಾಗಿ ಈ ಬಗ್ಗೆ ಭಯಪಡಬೇಕಾಗಿಲ್ಲ.

ಇದರ ಸಂತಾನ್ಪೋತ್ತತಿ ಕಾಲ ಮಾರ್ಚ್‌ನಿಂದ ಜನವರಿಯವರೆಗೆ. ಕೆಲವೊಮ್ಮೆ ಮಾರ್ಚ್‌ನಲ್ಲೇ ಮೊಟ್ಟೆ ಇಟ್ಟು ಮರಿ ಮಾಡಿದ ಉದಾಹರಣೆಗಳಿವೆ. ಯಾವ ಪ್ರದೇಶದಲ್ಲಿ ಈ ಹಾವುಗಳ ಸಂಖ್ಯೆ ಪ್ರಕೃತಿಯ ಲೆಕ್ಕಾಚಾರಕ್ಕಿಂತ ಕಡಿಮೆ ಇವೆಯೋ ಅಂತಹ ಪ್ರದೇಶಗಳಲ್ಲಿ ಮಾತ್ರ ಈ ಹಾವುಗಳು ಸಂತಾನೋತ್ಪತ್ತಿ ಮಾಡುತ್ತವೆ. ಹಳೆಮನೆ, ದಾರಂದ ಎಡೆಯ ಬಿಲಗಳು, ಬಿರುಕು ಬಿಟ್ಟ ಗೋಡೆ, ಮಾಡಿನ ಎಡೆ, ಪಾಳುಬಿದ್ದ ಮನೆಗಳ ಒಳಗೆ ಇವು ವಾಸ ಮಾಡಿ, ಅಲ್ಲೇ ಸಂತಾನೋತ್ಪತ್ತಿ ಮಾಡಿ ಬದುಕು ನಡೆಸುತ್ತವೆ ಎಂದು ಗುರುರಾಜ್ ಸನಿಲ್ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮಾತ್ರ ಕಂಡುಬರುವ ಕಟ್ಟುಗಳಿಲ್ಲದ ತೋಳ ಹಾವನ್ನು ಹೆಚ್ಚಿನವರು ನಾಗರಹಾವಿನ ಮರಿ ಎಂಬುದಾಗಿ ತಪ್ಪು ತಿಳಿದು ಕೊಳ್ಳುತ್ತಾರೆ. ಆದುದರಿಂದ ನಮ್ಮ ಮನೆ ಸುತ್ತಮುತ್ತ ಪರಿಸರದಲ್ಲಿ ಕಂಡು ಬರುವ ಈ ಹಾವನ್ನು ಆಳವಾಗಿ ಗಮನಿಸಿ ಗುರುತಿಸಿಕೊಂಡು ಅದರ ಪಾಡಿಗೆ ಬಿಟ್ಟು ಬಿಡಬೇಕು. ಮನೆಯೊಳಗೆ ಬಂದ ಬಕೆಟ್ ಒಳಗೆ ಅಥವಾ ಬೇರೆ ಸಾಧನಗಳ ಮೂಲಕ ಹೊರಗೆ ಹಾಕಿ. ಈ ಹಾವಿನಿಂದ ಯಾವುದೇ ಅಪಾಯ ಇಲ್ಲ.

ಗುರುರಾಜ್ ಸನಿಲ್, ಉರಗ ತಜ್ಞರು, ಉಡುಪಿ


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವರದಿ: ನಝೀರ್ ಪೊಲ್ಯ

contributor

Similar News