ಮಾನವ ಹಕ್ಕುಗಳ ರಕ್ಷಣೆಗೆ ನಿರಂತರ ಹೋರಾಡಿದ ಡಾ. ಅಂಬೇಡ್ಕರ್

ಮಹಿಳೆಯರು, ಕಾರ್ಮಿಕರು, ರೈತರು ಹಾಗೂ ದಲಿತರ ಹಕ್ಕುಗಳಿಗಾಗಿ ಡಾ. ಅಂಬೇಡ್ಕರ್ ನಡೆಸಿದ ಎಲ್ಲಾ ಹೋರಾಟಗಳು ಮಾನವಹಕ್ಕುಗಳ ರಕ್ಷಣೆಗಾಗಿ ನಡೆಸಿದ ಹೋರಾಟಗಳೇ ಆಗಿವೆ. ಡಾ. ಅಂಬೇಡ್ಕರ್ ಅವರನ್ನು ವಿಶ್ವದ ಶ್ರೇಷ್ಠ ಮಾನವ ಹಕ್ಕುಗಳ ರಕ್ಷಕ ಎಂದು ಕರೆಯಲಾಗುತ್ತದೆ.

Update: 2023-12-11 07:17 GMT

Photo: twitter

ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾನವ ಹಕ್ಕುಗಳ ಬಹು ದೊಡ್ಡ ಪ್ರತಿಪಾದಕರಾಗಿದ್ದರು. ಜಾತಿ ಆಧಾರಿತ ತಾರತಮ್ಯವನ್ನು ತೊಡೆದುಹಾಕಲು ತಮ್ಮ ಜೀವಮಾನ ಪೂರ್ತಿ ಅವರು ನಡೆಸಿದ ಪ್ರಯತ್ನಗಳು ಮತ್ತು ಹೋರಾಟಗಳು ಮಾನವ ಹಕ್ಕುಗಳ ದೃಷ್ಟಿಯಿಂದ ಅತಿ ದೊಡ್ಡ ಸಾಧನೆ ಎಂದು ಜಗತ್ತಿನಾದ್ಯಂತ ಪರಿಗಣಿಸಲಾಗಿದೆ. ಹಾಗೆ ನೋಡಿದರೆ ಅಂಬೇಡ್ಕರ್ ಅವರ ಜೀವಿತಾವಧಿಯಲ್ಲಿ ಮಾನವ ಹಕ್ಕು ಎಂಬ ಪದ ಶೈಶವಾವಸ್ಥೆಯನ್ನು ಮೀರಿ ಬೆಳೆದಿರಲಿಲ್ಲ. ಮಹಿಳೆಯರು, ಕಾರ್ಮಿಕರು, ರೈತರು ಹಾಗೂ ದಲಿತರ ಹಕ್ಕುಗಳಿಗಾಗಿ ಅವರು ನಡೆಸಿದ ಎಲ್ಲಾ ಹೋರಾಟಗಳು ಮಾನವಹಕ್ಕುಗಳ ರಕ್ಷಣೆಗಾಗಿ ನಡೆಸಿದ ಹೋರಾಟಗಳೇ ಆಗಿವೆ. ಡಾ. ಅಂಬೇಡ್ಕರ್ ಅವರನ್ನು ವಿಶ್ವದ ಶ್ರೇಷ್ಠ ಮಾನವ ಹಕ್ಕುಗಳ ರಕ್ಷಕ ಎಂದು ಕರೆಯಲಾಗುತ್ತದೆ.

ಜನರ ಬದುಕನ್ನು ಅರ್ಥಪೂರ್ಣವನ್ನಾಗಿಸಿ ತೃಪ್ತಿದಾಯಕವಾಗುವಂತೆ ಮಾಡುವಂತಹ ಮೂಲಭೂತ ಅರ್ಹತೆಗಳು ಹಾಗೂ ಸ್ವಾತಂತ್ರ್ಯಗಳನ್ನು ಮಾನವ ಹಕ್ಕುಗಳು ಎಂದು ಕರೆಯಲಾಗುತ್ತದೆ. ನಿರ್ಭೀತಿಯಿಂದ ಜೀವನ ಮಾಡುವುದು, ತಮ್ಮ ಎಲ್ಲಾ ಸಾಮರ್ಥ್ಯಗಳನ್ನು ಸದುಪಯೋಗಪಡಿಸಿಕೊಳ್ಳುವುದಕ್ಕೆ ಅವಕಾಶವನ್ನು ಪಡೆದುಕೊಳ್ಳುವುದು ಮನುಷ್ಯರ ಮೂಲಭೂತ ಆಕಾಂಕ್ಷೆಯಾಗಿದೆ. ಸರಳವಾಗಿ ಹೇಳಬೇಕೆಂದರೆ ಮಾನವರ ಘನತೆಯನ್ನು ಗುರುತಿಸುವ ಮತ್ತು ರಕ್ಷಿಸುವ ಮಾನದಂಡಗಳೇ ಮಾನವ ಹಕ್ಕುಗಳು. ಹಾಗೆ ನೋಡಿದರೆ ಅಂಬೇಡ್ಕರ್ ಅವರು ಪ್ರತಿಪಾದಿಸಿದ ಮತ್ತು ನಡೆಸಿದ ಎಲ್ಲಾ ಚಳವಳಿಗಳೂ ಕೂಡ ಮಾನವ ಘನತೆಯನ್ನು ಎತ್ತಿ ಹಿಡಿಯುವ ಸಲುವಾಗಿ ನಡೆಸಿದವುಗಳೇ ಆಗಿವೆ.

ಕುಡಿಯುವ ನೀರಿಗಾಗಿ ನಡೆದ ಜಗತ್ತಿನ ಮೊದಲ ಚಳವಳಿಯಾದ ಮಹಾಡ್‌ನ ಚಾವದಾರ್ ಕೆರೆಯ ಚಳವಳಿಯ ಸಂದರ್ಭದಲ್ಲಿ ಚಳವಳಿಗಾರರನ್ನು ಉದ್ದೇಶಿಸಿ ಮಾತನಾಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾರ್ವಜನಿಕ ನೀರಿನ ಮೂಲಗಳಿಂದ ಸಿಗುವ ನೀರು ಎಲ್ಲರಿಗೂ ಸಮಾನವಾಗಿ ಸಿಗಬೇಕು ಅದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು. ಅಂಬೇಡ್ಕರ್ ಅವರು ಆ ಮೂಲಕ ದಲಿತ ವಿಮೋಚನೆಯ ಬೀಜಗಳನ್ನು ಬಿತ್ತಿದರು. ‘‘ನಾವು ಚಾವದಾರ್ ಕೆರೆಗೆ ಅದರ ನೀರನ್ನು ಕುಡಿಯಲು ಹೋಗುತ್ತಿಲ್ಲ. ಬದಲಾಗಿ ನಾವೂ ಇತರರಂತೆ ಮನುಷ್ಯರು ಎಂದು ಪ್ರತಿಪಾದಿಸಲು ನಾವು ಕೆರೆಗೆ ಹೋಗುತ್ತಿದ್ದೇವೆ. ಸಮಾನತೆಯನ್ನು ಸ್ಥಾಪಿಸಲು ಈ ಸತ್ಯಾಗ್ರಹವನ್ನು ಕರೆಯಲಾಗಿದೆ’’ ಎಂದು ಅವರು ಸ್ಪಷ್ಟವಾಗಿ ಹೇಳಿದರು. ಅಂಬೇಡ್ಕರ್ ಅವರು ಚಾವದಾರ್ ಕರೆಯ ನೀರಿಗಾಗಿ ನಡೆಸಿದ ಚಳವಳಿ ಜಗತ್ತಿನಲ್ಲಿ ನಡೆದ ಮೊತ್ತ ಮೊದಲ ಮಾನವ ಹಕ್ಕುಗಳ ಪರವಾದ ಚಳವಳಿಯಾಗಿದೆ.

ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಗೆ ಸಹಿ ಹಾಕಿದ ನಂತರ ಮಾನವ ಹಕ್ಕುಗಳ ಹೋರಾಟವು ಜಾರಿಗೆ ಬಂದಿತು ಎಂದು ಹೇಳಲಾಗುತ್ತದೆ. ಆದರೆ ಭಗವಾನ್ ಬುದ್ಧನಿಂದ ಹಿಡಿದು, ಜ್ಯೋತಿಬಾ ಫುಲೆ, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ ಸೇರಿದಂತೆ ಹಲವಾರು ಸಮಾಜ ಸುಧಾರಕರು ನಡೆಸಿದ್ದು ಮಾನವ ಹಕ್ಕುಗಳ ಪರವಾದ ಹೋರಾಟ ಎಂಬುದನ್ನು ಜಾಗತಿಕ ಮಾನವ ಹಕ್ಕುಗಳ ಹೋರಾಟಗಾರರು ಗಮನಿಸುವುದೇ ಇಲ್ಲ. ‘‘ಜಾತಿ ಪದ್ಧತಿಯು ಕೇವಲ ಅಸ್ಪಶ್ಯತೆಯ ಸಮಸ್ಯೆಯಲ್ಲ, ಅದನ್ನು ಮೀರಿದ್ದು. ಹಿಂದೂ ಸಮಾಜ ಸುಧಾರಿಸಬೇಕಾದರೆ ಅದು ಸಮಾನತೆ, ಭ್ರಾತೃತ್ವ ಮತ್ತು ಸ್ವಾತಂತ್ರ್ಯದ ತಳಹದಿಯ ಮೇಲೆ ರೂಪುಗೊಳ್ಳಬೇಕು’’ ಎಂದು ಡಾ.ಬಿ.ಆರ್.ಅಂಬೇಡ್ಕರ್ ಸ್ಪಷ್ಟವಾಗಿ ಹೇಳಿದ್ದರು.

ಮಾನವ ಹಕ್ಕುಗಳ ಕುರಿತಾದ ಅವರ ಚಿಂತನೆಯಲ್ಲಿ ಮೂರು ಪ್ರಮುಖವಾದ ಪ್ರಗತಿಪರ ಅಂಶಗಳನ್ನು ನಾವು ಕಾಣಬಹುದು. ಮೊದಲನೆಯದು ಮಾನವ ಹಕ್ಕುಗಳ ಪರಸ್ಪರ ಅವಲಂಬನೆ. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಕ್ಕಾಗಿ ಅವರು ನಡೆಸಿದ ಹೋರಾಟ, ಅವರ ಬದುಕು ಮತ್ತು ಬರಹಗಳಲ್ಲಿ ನಿರಂತರ ಪಲ್ಲವಿಯಾಗಿದೆ. ಸಮಾನತೆ ಮತ್ತು ತಾರತಮ್ಯರಹಿತತೆ ಸ್ಪಷ್ಟವಾಗಿ ಮಾನವ ಹಕ್ಕುಗಳ ಪರಿಕಲ್ಪನೆಯ ಚೌಕಟ್ಟಿನ ಕೇಂದ್ರಬಿಂದುವಾಗಿದೆ. ಅಂಬೇಡ್ಕರ್ ಅವರು ರಾಜಕೀಯ ಮತ್ತು ನಾಗರಿಕ ಸಮಾನತೆಯ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಹಕ್ಕನ್ನೂ ಮಂಡಿಸಿದರು. ಜಾಗತಿಕ ಮಾನವ ಹಕ್ಕುಗಳ ಆಂದೋಲನವು ದಶಕಗಳ ಕಾಲ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಮೇಲೆ ಕೇಂದ್ರೀಕರಿಸುವ ಮೂಲಕ ಪ್ರಾಬಲ್ಯ ಸಾಧಿಸಿತು ಮತ್ತು ನಂತರದ ದಿನಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳನ್ನು ಮಾನವ ಹಕ್ಕುಗಳ ಪ್ರತಿಪಾದನೆಯ ಮುಂಚೂಣಿಗೆ ತಂದಿತು. ನಾಗರಿಕ ಮತ್ತು ರಾಜಕೀಯ ಹಕ್ಕುಗಳು ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳೊಂದಿಗೆ ಪರಸ್ಪರ ಅವಲಂಬನೆಯನ್ನು ಗುರುತಿಸುವಲ್ಲಿ ಡಾ.ಅಂಬೇಡ್ಕರ್ ಅವರು ಮುಂಚೂಣಿಯಲ್ಲಿದ್ದರು.

ಅಂಬೇಡ್ಕರ್ ಅವರು ಮಹಿಳಾ ವಿಮೋಚನೆಯ ಮಹಾನ್ ಪ್ರತಿಪಾದಕರಾಗಿದ್ದರು. ವರ್ಣ ವ್ಯವಸ್ಥೆಯು ಅಸ್ಪಶ್ಯರನ್ನು ಮಾತ್ರವಲ್ಲ, ಮಹಿಳೆಯರನ್ನೂ ಅಧೀನಗೊಳಿಸಿದೆ ಎಂದು ಅಭಿಪ್ರಾಯಪಟ್ಟ ಅವರು ಮನು ಮತ್ತು ಮನುಸ್ಮತಿಯನ್ನು ಪ್ರಶ್ನಿಸಿದರು ಮತ್ತು ಹಿಂದೂ ಮಹಿಳೆಯರ ಅವನತಿಗೆ ಮನುಸ್ಮತಿ ಬಹು ಮುಖ್ಯ ಕಾರಣ ಎಂದು ಪ್ರತಿಪಾದಿಸಿದರು. ‘‘ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ನಾನು ಒಂದು ಸಮುದಾಯದ ಪ್ರಗತಿಯನ್ನು ಅಳೆಯುತ್ತೇನೆ’’ ಎಂದು ಹೇಳುತ್ತಿದ್ದ ಡಾ.ಅಂಬೇಡ್ಕರ್ ಅವರು ಪಿತ್ರಾರ್ಜಿತ ಆಸ್ತಿ ಮತ್ತು ವಿವಾಹ ವಿಚ್ಛೇದನದಂತಹ ಸಂದರ್ಭಗಳಲ್ಲಿ ಭಾರತದಲ್ಲಿ ಮಹಿಳೆಯರು ಹಕ್ಕುಗಳನ್ನು ಪಡೆಯಲು ತಮ್ಮ ಪ್ರಸ್ತಾವಿತ ಹಿಂದೂ ಕೋಡ್ ಬಿಲ್ ಸೇರಿದಂತೆ ಹಲವು ಪ್ರಯತ್ನಗಳನ್ನು ಮಾಡಿದರು. ವಾಸ್ತವವಾಗಿ ತಾವು ಮಂಡಿಸಿದ ಹಿಂದೂ ಕೋಡ್ ಬಿದ್ದು ಹೋದಾಗ ನೆಹರೂ ಅವರ ಕ್ಯಾಬಿನೆಟ್‌ಗೆ ಅಂಬೇಡ್ಕರ್ ರಾಜೀನಾಮೆ ನೀಡಿದರು.

ಅಂಬೇಡ್ಕರ್ ಅವರು ದಲಿತ ಮಹಿಳೆಯರ ದೃಷ್ಟಿಯಿಂದ ಲಿಂಗ ಸಮಾನತೆಯನ್ನು ಮತ್ತು ಮಹಿಳೆಯರ ಪ್ರಗತಿಯನ್ನು ಉಲ್ಲೇಖಿಸುತ್ತಿದ್ದರು. ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಪ್ರಜಾಪ್ರಭುತ್ವವೊಂದೇ ಗ್ಯಾರಂಟಿಯಲ್ಲ ಎಂಬ ತಮ್ಮ ತಿಳುವಳಿಕೆಯಲ್ಲಿ ಅವರು ದೂರದೃಷ್ಟಿಯುಳ್ಳವಾರಾಗಿದ್ದರು. ಭಾರತದ ವಿವಿಧ ಅಲ್ಪಸಂಖ್ಯಾತ ಸಮುದಾಯಗಳಿಗೆ ಹಲವಾರು ರಕ್ಷಣೆಗಳನ್ನು ಸಂವಿಧಾನದ ಮೂಲಕ ಒದಗಿಸಿದರು. ಪೂನಾ ಒಪ್ಪಂದದ ಅಡಿಯಲ್ಲಿ ಸರಕಾರದಲ್ಲಿ ದಲಿತರಿಗೆ ಮೀಸಲಾದ ಸ್ಥಾನಗಳಿಗಾಗಿ ಹೋರಾಟ ನಡೆಸಿದರು.

ಭಾರತದಲ್ಲಿ ಸಾರ್ವಜನಿಕ ವಲಯದಲ್ಲಿ ಬಳಸಲಾಗುವ ಸಕಾರಾತ್ಮಕ ಕ್ರಮಗಳಾದಂತಹ ಮೀಸಲಾತಿಯಂತಹ ವಿವಿಧ ಕ್ರಮಗಳ ಮೂಲಕ ಅಲ್ಪಸಂಖ್ಯಾತ ಗುಂಪುಗಳನ್ನು ತಾರತಮ್ಯದಿಂದ ರಕ್ಷಿಸುವುದು ತಮ್ಮ ಮಾನವ ಹಕ್ಕುಗಳನ್ನು ಪೂರೈಸುವ ಸಮುದಾಯದ ಸದಸ್ಯರಿಗೆ ಹೇಗೆ ಅತ್ಯಗತ್ಯ ಎಂಬುದನ್ನು ಅಂಬೇಡ್ಕರ್ ಅವರು ಮನವರಿಕೆ ಮಾಡಿಕೊಟ್ಟರು. ಇವುಗಳನ್ನು ಸವಲತ್ತು ಎನ್ನುವುದಕ್ಕಿಂತ ತಾರತಮ್ಯದ ಎದುರು ಗಣನೀಯ ಸಮಾನತೆಯನ್ನು ಸಾಧಿಸಲು ಒಂದು ಮೂಲಭೂತ ಸಾಧನಗಳು ಎಂಬುದು ಅವರ ಅಭಿಪ್ರಾಯವಾಗಿತ್ತು. ಡಾ.ಅಂಬೇಡ್ಕರ್ ಅವರ ಮಾತುಗಳಲ್ಲಿ ಹೇಳುವುದಾದರೆ ಮೂಲಭೂತ ಹಕ್ಕುಗಳು ನಿಜವಾದ ಹಕ್ಕುಗಳಾಗಬೇಕಾದರೆ ತಾರತಮ್ಯ ಮೊದಲು ನಿವಾರಣೆಯಾಗಬೇಕು. ಅಂಬೇಡ್ಕರ್ ಅವರು ಆಧುನಿಕತೆ ಮತ್ತು ಮಾನವ ಹಕ್ಕುಗಳ ಪ್ರತಿಪಾದಕರಾಗಿದ್ದರು. ಅವರು ವೈಚಾರಿಕತೆ ಮತ್ತು ಉತ್ತಮ ಮಾನವೀಯತೆಯ ಸೆಲೆಯಾಗಿದ್ದರು. ಮಾನವ ಘನತೆ ಮತ್ತು ಆತ್ಮಗೌರವವನ್ನು ಉಲ್ಲಂಘಿಸುವುದಕ್ಕೆ ಅವರು ಎಂದೂ ಒಪ್ಪಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ.ಅಮ್ಮಸಂದ್ರ ಸುರೇಶ್

contributor

Similar News