×
Ad

ಬಿಲ್ ಕೌಂಟರ್‌ನಲ್ಲಿ ಮೊಬೈಲ್ ನಂಬರ್ ಹೇಳಬಹುದೇ?

‘ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಆಕ್ಟ್ 2023’ ಬಗ್ಗೆ ಗೊತ್ತಾ?

Update: 2025-08-28 23:51 IST

ಯಾವುದೇ ಮಾಲ್ ಅಥವಾ ಅಂಗಡಿಗೆ ಹೋದಾಗ ಬಿಲ್ ಕೌಂಟರ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ಕೇಳುವುದು ಸಾಮಾನ್ಯ ಅನುಭವ. ಹಾಗೆ ಕೇಳಿದ ತಕ್ಷಣ ನಾವು ನಮ್ಮ ಫೋನ್ ನಂಬರನ್ನು ಜೋರಾಗಿ ಹೇಳಿಬಿಡುತ್ತೇವೆ.

ಆದರೆ, ಹೀಗೆ ಸಾರ್ವಜನಿಕ ಸ್ಥಳದಲ್ಲಿ ನಿಮ್ಮ ವೈಯಕ್ತಿಕ ಸಂಖ್ಯೆಯನ್ನು ಹೇಳುವುದು ಎಷ್ಟು ಸುರಕ್ಷಿತ? ನಿಮ್ಮ ಸಂಖ್ಯೆ ಯಾರ ಕೈ ಸೇರಬಹುದು ಮತ್ತು ಅದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಇನ್ನು ಮುಂದೆ ಹೀಗೆ ಅಂಗಡಿಯವರು ನಿಮ್ಮ ಮೊಬೈಲ್ ಸಂಖ್ಯೆ ಕೇಳುವುದು ಅಪರಾಧವಾಗಬಹುದು ಎಂಬುದು ನಿಮಗೆ ತಿಳಿದಿದೆಯೇ? ಹಾಗಾದರೆ, ಈ ಹೊಸ ಕಾನೂನು ಏನು ಹೇಳುತ್ತದೆ ಮತ್ತು ಅದರಿಂದ ನಮ್ಮ ವೈಯಕ್ತಿಕ ಮಾಹಿತಿ ನಿಜವಾಗಿಯೂ ಸುರಕ್ಷಿತವಾಗಿರುತ್ತದೆಯೇ?

ಈಗ ಯಾವುದೇ ಮಾರ್ಟ್‌ ಗೆ ಹೋದರೆ ಅಥವಾ ಮಾಲ್‌ ಗಳಲ್ಲಿನ ಅಂಗಡಿಗಳಲ್ಲಿ ಬಿಲ್ ಕೌಂಟರ್‌ನಲ್ಲಿ ಸಾಮಾನ್ಯವಾಗಿ ಮೊಬೈಲ್ ನಂಬರ್ ಕೇಳಲಾಗುತ್ತದೆ. ಬರೀ ಅಂಗಡಿಗಳಲ್ಲ, ಯಾವುದೇ ಶೋರೂಂ ಅಥವಾ ಎಲ್ಲೇ ಹೋದರೂ ಮೊಬೈಲ್ ನಂಬರ್ ಕೇಳುವುದು ಸಾಮಾನ್ಯವಾಗಿಬಿಟ್ಟಿದೆ. ಮತ್ತು ಹೀಗೆ ಕೇಳಿದಾಗ, ನೀವು ದೊಡ್ಡ ಧ್ವನಿಯಲ್ಲೇ ನಂಬರ್ ಹೇಳುತ್ತೀರಿ. ಅದು ಕೌಂಟರ್‌ನಲ್ಲಿದ್ದವರ ಹೊರತಾಗಿ, ಸುತ್ತ ಇರುವ ಇತರರಿಗೂ ಕೇಳಿಸುತ್ತದೆ. ಹಾಗೆ ನಿಮ್ಮ ಮೊಬೈಲ್ ನಂಬರ್ ಇನ್ನಾರಿಗೋ ತಿಳಿದುಬಿಡುವ ಸಾಧ್ಯತೆಯೂ ಇರುತ್ತದೆ.

ಆದರೆ, ಹೀಗೆ ಮೊಬೈಲ್ ನಂಬರ್ ಕೇಳುವುದು ಇನ್ನು ಮುಂದೆ ಅಪರಾಧವಾಗಲೂಬಹುದು. ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಆಕ್ಟ್ 2023 ರಲ್ಲಿ ಕೆಲವು ನಿಬಂಧನೆಗಳಿವೆ. ಅದರ ಪ್ರಕಾರ, ಈಗ ಚಿಲ್ಲರೆ ವ್ಯಾಪಾರಿಗಳು ನೀವು ಮೊಬೈಲ್ ನಂಬರ್ ಹೇಳುವಂತೆ ಕೇಳಲು ಅವಕಾಶವಿಲ್ಲ. ಅದು ಡೇಟಾ ಬಯಲಾಗುವುದಕ್ಕೆ ಕಾರಣವಾಗುತ್ತದೆಂಬುದಕ್ಕಾಗಿ ಈ ನಿರ್ಬಂಧ ತರಲಾಗುತ್ತಿದೆ.

ಅಂದರೆ, ಕೌಂಟರ್‌ನಲ್ಲಿ ನಿಂತು ನೀವೀಗ ನಿಮ್ಮ ಮೊಬೈಲ್ ಸಂಖ್ಯೆಯನ್ನು ಜೋರಾಗಿ ಹೇಳುವಂತೆ ಯಾರೂ ಒತ್ತಾಯಿಸುವಂತಿಲ್ಲ.

ಅದಲ್ಲದೆ, ಹಾಗೆ ಮೊಬೈಲ್ ನಂಬರ್ ಕೇಳುವ ಕಂಪೆನಿಗಳು ಅದನ್ನು ಯಾವ ಉದ್ದೇಶಕ್ಕೆ ಬಳಸುತ್ತಿವೆ ಎನ್ನುವ ಬಗ್ಗೆ ಸ್ಪಷ್ಟಪಡಿಸಬೇಕು. ಅದನ್ನು ಕೆಲವೇ ಸಮಯ ಇಟ್ಟುಕೊಳ್ಳಲಾಗುತ್ತದೆ ಮತ್ತು ನಂತರ ಡಿಲೀಟ್ ಮಾಡಲಾಗುತ್ತದೆ ಎಂಬುದನ್ನು ಅವರು ಖಚಿತಪಡಿಸಬೇಕು.

ಆದರೆ ಹಾಗಾಗಲು ಸಾಧ್ಯವಿದೆಯೆ? ಮೊಬೈಲ್ ನಂಬರ್ ಕೇಳಿ ಪಡೆದವನು ಅದನ್ನು ಡಿಲಿಟ್ ಮಾಡಿದ್ದಾನೆಂದು ತಿಳಿಯುವುದು ಸಾಧ್ಯವಿದೆಯೆ? ಅವನು ನಿಮ್ಮ ಸಂಖ್ಯೆಯನ್ನು ಬೇರೆ ಯಾವುದೇ ವ್ಯವಹಾರಕ್ಕೆ ನೀಡಿಲ್ಲ ಎಂಬುದಕ್ಕೆ ಏನು ಖಾತರಿ ಇದೆ?

ಈಗಂತೂ ಕಿರಿಕಿರಿ ನೀಡುವ ಕರೆಗಳೇ ಒಂದು ಸವಾಲಾಗಿವೆ ಎಂಬುದು ಎಲ್ಲರಿಗೂ ಗೊತ್ತು. ಬ್ಯಾಂಕುಗಳು, ರಿಯಲ್ ಎಸ್ಟೇಟ್ ಕಂಪೆನಿಗಳು, ಸಾಲ ಕೊಡುವ ಕಂಪನಿಗಳು ಎಂದೆಲ್ಲ ಬೇಕಿರದ ಕರೆಗಳೇ ಬರುತ್ತಿರುತ್ತವೆ. ಹೀಗೆ ನಮ್ಮ ಮೊಬೈಲ್ ಸಂಖ್ಯೆ ಯಾರ್ಯಾರಿಗೋ ಸೋರಿಕೆಯಾಗುತ್ತಲೇ ಇರುತ್ತದೆ. ಎಲ್ಲಾ ಸೇವೆಗಳಲ್ಲಿಯೂ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳುವುದು ಕಡ್ಡಾಯ ಎನ್ನುವಂತಾಗಿರುವುದು ಈ ಸೋರಿಕೆಗೆ ಕಾರಣ.

ಸರ್ಕಾರದ ಕೆಲವು ಪ್ರಮುಖ ಸೇವೆಗಳಲ್ಲಿ, ಮೊಬೈಲ್ ನಂಬರ್ ಕೊಡದಿರಲು ಆಗುವುದಿಲ್ಲ. ಆದರೆ ಈಗ ಯಾರಾದರೂ ನಿಮ್ಮ ಸಂಖ್ಯೆಯನ್ನು ಮೌಖಿಕವಾಗಿ ಕೇಳುವುದರ ಮೇಲೆ ನಿರ್ಬಂಧ ಇರುತ್ತದೆ. ಆದರೆ ಈ ನಿರ್ಬಂಧ ಎಲ್ಲದರ ಮೇಲೆಯೂ ಅನ್ವಯವಾಗುವುದಿಲ್ಲ. ಮತ್ತು ಸಮಸ್ಯೆ ಪ್ರಾರಂಭವಾಗುವುದೇ ಇಲ್ಲಿಂದ. ಒಟಿಪಿ ಅನಿವಾರ್ಯವಾಗುವ ಕೆಲವು ಸೇವೆಗಳಲ್ಲಿ ಮೊಬೈಲ್ ಸಂಖ್ಯೆ ನೀಡದೇ ಇರಲು ಸಾಧ್ಯವಾಗುವುದಿಲ್ಲ. ಹಾಗಿರುವಾಗ, ಯಾರಾದರೂ ಒಟಿಪಿ ನೀಡುವ ಹೆಸರಿನಲ್ಲಿ ಮೊಬೈಲ್ ಸಂಖ್ಯೆ ಕೇಳಿದರೆ, ಅಲ್ಲಿ ಈ ಹೊಸ ನಿಯಮ ಅನ್ವಯಿಸುತ್ತದೆಯೇ ಅಥವಾ ಇಲ್ಲವೇ? ಅವರು ನಿಮ್ಮ ಸಂಖ್ಯೆಯನ್ನು ಎಷ್ಟು ಸಮಯದವರೆಗೆ ಸಂಗ್ರಹಿಸಿಡಬಹುದು?

Full View

‘ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಆಕ್ಟ್ 2023’ ಗ್ರಾಹಕರ ವೈಯಕ್ತಿಕ ಮಾಹಿತಿಯ ರಕ್ಷಣೆಯ ದೃಷ್ಟಿಯಿಂದ ಒಂದು ಸ್ವಾಗತಾರ್ಹ ಹೆಜ್ಜೆಯಾಗಿದೆ. ಆದರೆ, ಈ ಕಾನೂನಿನ ಅನುಷ್ಠಾನದಲ್ಲಿ ಹಲವಾರು ಸವಾಲುಗಳಿವೆ.

ಅಂಗಡಿಯವನು ನಿಮ್ಮ ಮೊಬೈಲ್ ಸಂಖ್ಯೆಯನ್ನು ಪಡೆದು ಬೇರೆ ಉದ್ದೇಶಕ್ಕೆ ಬಳಸುವುದಿಲ್ಲ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಹಾಗಾಗಿ, ಕಾನೂನು ನಮ್ಮ ರಕ್ಷಣೆಗೆ ಬಂದರೂ, ನಮ್ಮ ವೈಯಕ್ತಿಕ ಮಾಹಿತಿಯನ್ನು ಎಲ್ಲೆಂದರಲ್ಲಿ ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರತಿಯೊಂದು ಹೆಜ್ಜೆಯಲ್ಲೂ ಜಾಗೃತರಾಗುವುದೇ ಡಿಜಿಟಲ್ ಯುಗದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News